ಕೌಂಟಿಂಗ್ ರೂಮ್ ಬಗ್ಗೆ ಕಪಿಲ್ ಸಿಬಲ್ ಆತಂಕ
- ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ
- ಕೌಂಟಿಂಗ್ ರೂಮ್ ಬಗ್ಗೆ ಕಪಿಲ್ ಸಿಬಲ್ ಆತಂಕ
- ಇದು ಚುನಾವಣೆಯೋ ಯುದ್ಧವೋ? ಎಂದು ಕುಟುಕಿದ ಹಿರಿಯ ವಕೀಲ
ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣಾ ಕಣ ಈಗ ಕೇವಲ ಮತದಾನಕ್ಕೆ ಸೀಮಿತವಾಗಿಲ್ಲ, ಅದು 'ಮತ ಎಣಿಕೆ' ಕೇಂದ್ರದವರೆಗೂ ತಲುಪಿದೆ. ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಹಿರಿಯ ವಕೀಲ ಕಪಿಲ್ ಸಿಬಲ್ (Kapil Sibal on West Bengal Election) ಶನಿವಾರ (ಮೇ.2) ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.
ಬಂಗಾಳ ಚುನಾವಣೆಯ ಭವಿಷ್ಯ ಮತಪೆಟ್ಟಿಗೆಯಲ್ಲಿರುವುದಕ್ಕಿಂತ ಹೆಚ್ಚಾಗಿ, ಮತ ಎಣಿಕೆ ಕೊಠಡಿಗಳಲ್ಲಿ ಏನು ನಡೆಯುತ್ತದೆ ಎಂಬುದರ ಮೇಲೆ ನಿರ್ಧಾರವಾಗಲಿದೆ ಎಂದು ಅವರು ಹೇಳಿರುವುದು ಈಗ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದ್ದೇನು?
ಬಂಗಾಳದಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ರಾಜ್ಯ ಸರ್ಕಾರಿ ನೌಕರರ ಬದಲು ಕೇಂದ್ರ ಸರ್ಕಾರಿ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂಬ ಚುನಾವಣಾ ಆಯೋಗದ (EC) ಸುತ್ತೋಲೆಯನ್ನು ಕಲ್ಕತ್ತಾ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (TMC) ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಸದ್ಯಕ್ಕೆ ಯಾವುದೇ ಹೆಚ್ಚಿನ ಆದೇಶದ ಅಗತ್ಯವಿಲ್ಲ, ಆದರೆ ಆಯೋಗದ ಸುತ್ತೋಲೆಯನ್ನು ತಪ್ಪದೆ ಪಾಲಿಸಬೇಕು ಎಂದು ಸೂಚಿಸಿತು.
ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಕಪಿಲ್ ಸಿಬಲ್, ಟಿಎಂಸಿ ಅರ್ಜಿಯ ಉದ್ದೇಶವನ್ನು ಸ್ಪಷ್ಟಪಡಿಸಿದರು. ನಾವು ಆಯೋಗದ ಸುತ್ತೋಲೆಯನ್ನೇನೂ ವಿರೋಧಿಸುತ್ತಿಲ್ಲ. ಆದರೆ ಅದರ ಅನುಷ್ಠಾನ ಸರಿಯಾಗಿ ಆಗಲಿ ಎಂಬುದು ನಮ್ಮ ಆಶಯ. ಯಾದೃಚ್ಛಿಕ ಪ್ರಕ್ರಿಯೆಯ (Randomization) ಮೂಲಕ ಎಣಿಕೆ ಕೊಠಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳಿಬ್ಬರೂ ಇರಬೇಕು ಎಂದು ಸುತ್ತೋಲೆ ಹೇಳುತ್ತದೆ. ಅದನ್ನೇ ಪಾಲಿಸಿ ಎಂದು ನಾವು ಕೇಳುತ್ತಿದ್ದೇವೆ ಎಂದರು.
ಇದು ಚುನಾವಣೆಯೋ ಅಥವಾ ಯುದ್ಧವೋ?
ಬಂಗಾಳದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಭಾರಿ ನಿಯೋಜನೆಯ ಬಗ್ಗೆ ಸಿಬಲ್ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸೇನೆಯನ್ನು ನಿಯೋಜಿಸುವ ಅಗತ್ಯವೇನಿದೆ? ಅಲ್ಲಿ ಏನಾದರೂ ಯುದ್ಧ ನಡೆಯುತ್ತಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರವೇ ಭದ್ರತೆ ನೀಡುತ್ತಿದೆ, ಚುನಾವಣಾ ಏಜೆಂಟ್‌ಗಳು ಕೂಡ ಕೇಂದ್ರದವರೇ ಆಗಿದ್ದಾರೆ. ಹೀಗಿರುವಾಗ ಕೇಂದ್ರ ಸರ್ಕಾರಕ್ಕೆ ಯಾವುದರ ಭಯ? ಎಲ್ಲವೂ ಸಿಸಿಟಿವಿ ಕಣ್ಗಾವಲಿನಲ್ಲೇ ನಡೆಯುತ್ತಿರುವಾಗ ಇಷ್ಟೊಂದು ಬಿಗಿ ಭದ್ರತೆಯ ಹಿಂದೆ ಏನೋ ಸಂಚಿದೆ, ಎಂಬರ್ಥದಲ್ಲಿ ಅವರು ಅನುಮಾನ ವ್ಯಕ್ತಪಡಿಸಿದರು.
ಸಿಸಿಟಿವಿ ದೃಶ್ಯಾವಳಿಗಳ ಬಗ್ಗೆ ಅನುಮಾನ
ಮತಗಟ್ಟೆಗಳಲ್ಲಿ ದಾಖಲಾಗುವ ಸಿಸಿಟಿವಿ ದೃಶ್ಯಾವಳಿಗಳನ್ನು ಕೇವಲ 45 ದಿನಗಳವರೆಗೆ ಮಾತ್ರ ಏಕೆ ಸಂರಕ್ಷಿಸಲಾಗುತ್ತದೆ ಎಂಬ ಬಗ್ಗೆಯೂ ಸಿಬಲ್ ಪ್ರಶ್ನೆ ಎತ್ತಿದ್ದಾರೆ. 45 ದಿನಗಳ ನಂತರ ಆ ದೃಶ್ಯಗಳು ನಾಪತ್ತೆಯಾದರೆ ಪಾರದರ್ಶಕತೆ ಎಲ್ಲಿದೆ? ಈ ವಿಷಯವನ್ನು ನಾವು ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಎತ್ತುತ್ತೇವೆ ಎಂದು ಅವರು ತಿಳಿಸಿದರು. ಅಲ್ಲದೆ, ಪ್ರತಿಪಕ್ಷಗಳು ಈ ಬಗ್ಗೆ ಆರ್‌ಟಿಐ (RTI) ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಬೇಕು ಎಂದು ಅವರು ಕರೆ ನೀಡಿದ್ದಾರೆ.
ಹೈಕೋರ್ಟ್ ನೀಡಿದ್ದ ತೀರ್ಪೇನು?
ಏಪ್ರಿಲ್ 30 ರಂದು ಕಲ್ಕತ್ತಾ ಹೈಕೋರ್ಟ್, ರಾಜ್ಯ ಸರ್ಕಾರಿ ಸಿಬ್ಬಂದಿಯ ಬದಲಿಗೆ ಕೇಂದ್ರ ಸರ್ಕಾರಿ ಮತ್ತು ಪಿಎಸ್‌ಯು (PSU) ನೌಕರರನ್ನು ಎಣಿಕೆ ಕಾರ್ಯಕ್ಕೆ ಬಳಸಿಕೊಳ್ಳುವ ಆಯೋಗದ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿತ್ತು. ಇದನ್ನು ಪ್ರಶ್ನಿಸಿ ಟಿಎಂಸಿ ಸುಪ್ರೀಂ ಕೋರ್ಟ್‌ಗೆ ಹೋಗಿತ್ತು.
ಒಟ್ಟಿನಲ್ಲಿ, ಕಪಿಲ್ ಸಿಬಲ್ ಅವರ ಈ ಮಾತುಗಳು ಪಶ್ಚಿಮ ಬಂಗಾಳದ ಚುನಾವಣಾ ಫಲಿತಾಂಶದ ಮೇಲೆ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ಮತ ಎಣಿಕೆ ದಿನದಂದು ಕೌಂಟಿಂಗ್ ರೂಮ್ನಲ್ಲಿ ಅಸಲಿ ಆಟ ನಡೆಯಲಿದೆ ಎಂಬ ಅವರ ಹೇಳಿಕೆ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ,(ಏಜನ್ಸೀಸ್).