ದೇಶ

ಬಂಗಾಳ ಬಂಗಾಳಿಗಳದ್ದೋ ಇಲ್ಲಾ ದುಷ್ಟ ಬಿಹಾರಿಗಳದ್ದಾ?; ಛಠ್ ಪೂಜಾ ವ್ಯವಸ್ಥೆ ಟೀಕಿಸುವ ಭರದಲ್ಲಿ ಕಲ್ಯಾಣ್ ಬ್ಯಾನರ್ಜಿ ವಿವಾದ | Kalyan Banerjee

ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಛಠ್ ಪೂಜೆಗೆ ವ್ಯವಸ್ಥೆ ಮಾಡಿದ್ದನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ, ಬಂಗಾಳದ ದುರ್ಗಾ ಪೂಜೆಗೆ ಇಲ್ಲದ ಅಲಂಕಾರ ಛಠ್ ಪೂಜೆಗೇಕೆ? ಬಂಗಾಳ ಬಂಗಾಳಿಗಳಿಗೆ ಸೇರಿದೆಯೋ ಇಲ್ಲ ದುಷ್ಟ ಬಿಹಾರಿಗಳಿಗೆ ಸೇರಿದೆಯೋ? ಎಂದು ಹೇಳಿ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಕೋಲ್ಕತ್ತಾ: ಪಶ್ಚಿಮ ಬಂಗಾಳದಾದ್ಯಂತ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಛಠ್ ಪೂಜೆಗೆ ವ್ಯವಸ್ಥೆ ಮಾಡಿದ್ದನ್ನು ಟೀಕಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ, ಬಂಗಾಳದ ದುರ್ಗಾ ಪೂಜೆಗೆ ಇಲ್ಲದ ಅಲಂಕಾರ ಛಠ್ ಪೂಜೆಗೇಕೆ? ಬಂಗಾಳ ಬಂಗಾಳಿಗಳಿಗೆ ಸೇರಿದೆಯೋ ಇಲ್ಲ ದುಷ್ಟ ಬಿಹಾರಿಗಳಿಗೆ ಸೇರಿದೆಯೋ? ಎಂದು ಹೇಳಿ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಇತ್ತೀಚೆಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕಲ್ಯಾಣ್ ಬ್ಯಾನರ್ಜಿ, ಛಠ್‌ಗಾಗಿ ಹೌರಾ ನಿಲ್ದಾಣವನ್ನು ಹಾಗೆ ಅಲಂಕರಿಸಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಬಂಗಾಳದ ದುರ್ಗಾ ಪೂಜೆಗೆ ಇದೇ ರೀತಿಯ ವ್ಯವಸ್ಥೆಗಳನ್ನು ಮಾಡಲಾಗಿಲ್ಲ. ರಾಜ್ಯವನ್ನು ಬಂಗಾಳಿಯೇತರರು ಆಕ್ರಮಿಸಿಕೊಂಡಿದ್ದು, ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ಪಕ್ಷವು, ಬಂಗಾಳಿ ಸಂಸ್ಕೃತಿಯನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಈಗ ಬಂಗಾಳಿಗಳು ಇದ್ದಾರೆಯೇ? ಪಶ್ಚಿಮ ಬಂಗಾಳ ಬಂಗಾಳಿಗಳಿಗೆ ಸೇರಿದೆಯೇ ಅಥವಾ ರಾಕ್ಷಸ ಬಿಹಾರಿಗಳಿಗೆ ಸೇರಿದೆಯೇ? ಸನಾತನ ಧರ್ಮವನ್ನು ಆಚರಿಸುವುದು ಎಂದರೆ ಬಂಗಾಳಿಗಳನ್ನು ಕತ್ತರಿಸಿ ಬಿಹಾರಿಗಳನ್ನು ಸ್ಥಾಪಿಸುವುದೇ? ಬಿಜೆಪಿ ಬಂಗಾಳಿ ಸಂಸ್ಕೃತಿಯನ್ನು ನಾಶಪಡಿಸುತ್ತದೆ. ಬಂಗಾಳಿಗಳು ರಾಜ್ಯದಲ್ಲಿ ಎರಡನೇ ವರ್ಗದ ನಾಗರಿಕರಾಗಿದ್ದಾರೆ ಎಂದಿರುವ ಅವರು, ಪರಿಸ್ಥಿತಿ ಇನ್ನೂ ಐದು ವರ್ಷಗಳ ಕಾಲ ಮುಂದುವರಿದ್ರೆ ಬಂಗಾಳಿಗಳ ಅಸ್ತಿತ್ವ ಉಳಿಯಲ್ಲ ಎಂದು ಎಚ್ಚರಿಸಿದ್ದಾರೆ.

ಕಲ್ಯಾಣ್ ಬ್ಯಾನರ್ಜಿ ಹೇಳಿಕೆಗೆ ಬಿಜೆಪಿ ಕಿಡಿ

ಕಲ್ಯಾಣ್ ಬ್ಯಾನರ್ಜಿ ಹೇಳಿಕೆಗೆ ಕಿಡಿಕಾರಿರುವ ಪಶ್ಚಿಮ ಬಂಗಾಳ ಸಚಿವ ಇಂದ್ರಾನಿಲ್ ಖಾನ್, ಟಿಎಂಸಿ ವಿಭಜಕ ರಾಜಕೀಯವನ್ನು ಅನುಸರಿಸುತ್ತಿದೆ. ಹಿಂದಿನ ಟಿಎಂಸಿ ಸರ್ಕಾರವಾಗಲಿ ಅಥವಾ ಎಡಪಂಥೀಯ ಸರ್ಕಾರವಾಗಲಿ ಬಂಗಾಳಿ ಜನರ ಹಿತಾಸಕ್ತಿಗಳನ್ನು ಕಾಪಾಡಲಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಜೈಲು ವ್ಯಾನ್‌ನಲ್ಲಿ ಮಾ ಕಾಳಿಯನ್ನು ಹೊತ್ತುಕೊಂಡು ಹೋಗುವುದು ಬಂಗಾಳಿ ಸಂಸ್ಕೃತಿಯೇ? ಮೊಹರಂಗೆ ದುರ್ಗಾ ವಿಸರ್ಜನೆಯನ್ನು ನಿಲ್ಲಿಸುವುದು ಬಂಗಾಳಿ ಸಂಸ್ಕೃತಿಯೇ? ದಾರಿಭಿತ್‌ನಲ್ಲಿ ಬಂಗಾಳಿ ಭಾಷೆಗೆ ಶಿಕ್ಷಕರ ನೇಮಕಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸುವುದು ಬಂಗಾಳಿಗಳ ಹಿತಾಸಕ್ತಿಯೇ? ಅವರು ವಿಭಜಕ ರಾಜಕೀಯ ಮಾಡುತ್ತಾರೆಯೇ ಹೊರತು ಬೇರೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಛಠ್ ಪೂಜೆಯ ವ್ಯವಸ್ಥೆಗಳನ್ನು ಸಮರ್ಥಿಸಿಕೊಂಡ ಅವರು, ಏಕ್ ಭಾರತ್ ಶ್ರೇಷ್ಠ ಭಾರತ್. ವಿವಿಧ ವೈವಿಧ್ಯತೆಯ ಜನರು ದೇಶಕ್ಕೆ ಕೊಡುಗೆ ನೀಡುತ್ತಾರೆ... ಪ್ರತಿಯೊಬ್ಬರಿಗೂ ಅವರ ಉತ್ಸವದಲ್ಲಿ ಭಾಗವಹಿಸುವ ಹಕ್ಕಿದೆ, ಮತ್ತು ಅವರೊಂದಿಗೆ ನಿಲ್ಲುವುದು ಸರ್ಕಾರದ ಕರ್ತವ್ಯ. ಆದರೆ ಟಿಎಂಸಿ ಮತ್ತು ಎಡಪಂಥೀಯರು ತಮ್ಮ ಕರ್ತವ್ಯವನ್ನು ನಿರ್ವಹಿಸಲಿಲ್ಲ ಎಂದು ದೂರಿದ್ದಾರೆ (ಏಜೆನ್ಸೀಸ್).