Devendra Fadnavis | ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 
ದೇಶ

ಬಾರಾಮತಿ ವಿಮಾನ ದುರಂತದ ಹಿಂದೆ ಅಡಗಿದೆಯಾ ಕರಾಳ ಸತ್ಯ..? ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದ ಸಿಎಂ ಫಡ್ನವೀಸ್ | Devendra Fadnavis

ಮುಂಬೈ: ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಅಪಘಾತದ ಪ್ರಕರಣ ಈಗ ಸ್ಫೋಟಕ ತಿರುವು ಪಡೆದುಕೊಂಡಿದ್ದು, ಘಟನೆಯ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ, ಈ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ (Devendra Fadnavis), ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ವರದಿಯಾಗಿದೆ.
ಅಜಿತ್ ಪವಾರ್ ನಿಧನದ ಬಳಿಕ ಈ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿರುವ ಶಾಸಕ ರೋಹಿತ್ ಪವಾರ್, ಇದು ಕೇವಲ ಅಪಘಾತವಲ್ಲ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತಮ್ಮ ಆತಂಕ ವ್ಯಕ್ತಪಡಿಸಿದ್ದ ರೋಹಿತ್, ದೆಹಲಿಗೆ ತೆರಳಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಅಪಘಾತಕ್ಕೆ ಸಂಬಂಧಿಸಿದಂತೆ ತಾವು ಸಂಗ್ರಹಿಸಿದ ಮಹತ್ವದ ಪುರಾವೆಗಳನ್ನು ನೀಡಿದ್ದರು.

ಎಫ್‌ಐಆರ್ ಏಕೆ ದಾಖಲಾಗಿಲ್ಲವೇಕೆ..?

ರೋಹಿತ್ ಪವಾರ್ ಭೇಟಿಯ ಬಳಿಕ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಪ್ರಕರಣದ ಗಂಭೀರತೆಯನ್ನು ಪ್ರಶ್ನಿಸಿದ್ದರು. ಇಷ್ಟು ದೊಡ್ಡ ಘಟನೆ ನಡೆದಿದ್ದರೂ ಇದುವರೆಗೆ ಏಕೆ ಎಫ್‌ಐಆರ್ ದಾಖಲಾಗಿಲ್ಲ? ಕಾನೂನಿನ ಮೂಲಭೂತ ತತ್ವಗಳನ್ನು ಇಲ್ಲಿ ಗಾಳಿಗೆ ತೂರಿದಂತೆ ತೋರುತ್ತಿದೆ. ಪಾರದರ್ಶಕ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದಿದ್ದರು.

ಘಟನೆಯ ಹಿನ್ನಲೆ

ಜನವರಿ 28ರ ಬೆಳಿಗ್ಗೆ 8 ಗಂಟೆಗೆ ಮುಂಬೈನಿಂದ ಹೊರಟಿದ್ದ ಚಾರ್ಟರ್ಡ್ ವಿಮಾನವು ಸುಮಾರು 45 ನಿಮಿಷಗಳ ನಂತರ ಬಾರಾಮತಿ ವಿಮಾನ ನಿಲ್ದಾಣದ ಬಳಿ ಇಳಿಯಲು ಯತ್ನಿಸುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಭೀಕರ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ವಿಮಾನದಲ್ಲಿದ್ದ ಐವರು ಪ್ರಾಣ ಕಳೆದುಕೊಂಡಿದ್ದರು. ಆರು ಬಾರಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ದಾಖಲೆ ಬರೆದಿದ್ದ ಧೀಮಂತ ನಾಯಕನ ಅಂತ್ಯ ಈ ರೀತಿ ಆಗಿದ್ದು ಎಲ್ಲರನ್ನೂ ಬೆಚ್ಚಿಬೀಳಿಸಿತ್ತು(ಏಜೆನ್ಸೀಸ್​).