ಗಂಡಸರಿಗಿಂತ ಮಹಿಳೆಯರಿಗೆ ಸಾಲ ನೀಡಲು ಹೆಚ್ಚು ಆಸಕ್ತಿ ತೋರುತ್ತಿವೆ ಬ್ಯಾಂಕುಗಳು! ಅಚ್ಚರಿಯ ಕಾರಣ ಹೀಗಿದೆ...Banks
- ಈ ಹಿಂದೆ ಮಹಿಳೆಯರಿಗೆ ಹೋಲಿಸಿದರೆ, ಪುರುಷರು ಹೆಚ್ಚಾಗಿ ಬ್ಯಾಂಕ್ ಸಾಲ ಮಾಡುತ್ತಿದ್ದರು
- ಆದರೆ ಇಂದು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸಾಲ ನೀಡುತ್ತಿವೆ
- ಮಹಿಳೆಯರು ಪಡೆದ ಸಾಲವನ್ನು ಶಿಸ್ತಿನಿಂದ ಮರುಪಾವತಿಸುವಲ್ಲಿ ತೋರುವ ಬದ್ಧತೆಯೇ ಇದಕ್ಕೆ ಕಾರಣ
Banks : ಈ ಸಮಾಜದಲ್ಲಿ ದೊಡ್ಡ ಹಾಗೂ ಸಣ್ಣ ಅಗತ್ಯಗಳಿಗಾಗಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ವಿವಿಧ ಲೋನ್ ಆ್ಯಪ್‌ಗಳ ಮೂಲಕ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಮಹಿಳೆಯರಿಗೆ ಹೋಲಿಸಿದರೆ, ಪುರುಷರು ಹೆಚ್ಚಾಗಿ ಬ್ಯಾಂಕ್ ಸಾಲ ಮಾಡುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಸಾಲ ಹಾಗೂ ಕ್ರೆಡಿಟ್ ಸೌಲಭ್ಯಗಳನ್ನು ನೀಡಲು ಮುಂದಾಗುತ್ತಿದ್ದು, ಹೊಸದೊಂದು ಟ್ರೆಂಡ್ ಸೃಷ್ಟಿಯಾಗುತ್ತಿದೆ. ಮಹಿಳೆಯರು ಪಡೆದ ಸಾಲವನ್ನು ಶಿಸ್ತಿನಿಂದ ಮರುಪಾವತಿಸುವಲ್ಲಿ ತೋರುವ ಬದ್ಧತೆ, ಹಣಕಾಸು ನಿರ್ವಹಣೆಯ ಜವಾಬ್ದಾರಿ ಹಾಗೂ ಕಡಿಮೆ ಸುಸ್ತಿದಾರರಾಗುವ ಪ್ರಮಾಣವೇ ಬ್ಯಾಂಕುಗಳು ಮಹಿಳಾ ಗ್ರಾಹಕರಿಗೆ ಹೆಚ್ಚಿನ ಆದ್ಯತೆ ನೀಡಲು ಪ್ರಮುಖ ಕಾರಣಗಳಾಗಿವೆ.
ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಪ್ರಕಾರ, ಮಹಿಳೆಯರು ತಮ್ಮ ಹಣಕಾಸಿನ ವಹಿವಾಟುಗಳಲ್ಲಿ ಹೆಚ್ಚು ಶಿಸ್ತುಬದ್ಧರಾಗಿರುತ್ತಾರೆ. ಅವರು ತಮ್ಮ ಇಎಂಐ (EMI) ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದಲ್ಲದೆ, ಸಾಲ ಮರುಪಾವತಿಯಲ್ಲಿ ಸುಸ್ತಿದಾರರಾಗುವುದು ತೀರಾ ಅಪರೂಪ. ಮಹಿಳೆಯರು ಅತ್ಯಂತ ಸ್ಪಷ್ಟವಾದ ಉದ್ದೇಶಗಳಿಗಾಗಿ ಮಾತ್ರ ಸಾಲವನ್ನು ಪಡೆಯುತ್ತಾರೆ ಎಂದು ಬ್ಯಾಂಕುಗಳು ಗುರುತಿಸಿದ್ದು, ಇದೇ ಕಾರಣಕ್ಕಾಗಿ ಸಾಲ ನೀಡುವ ವಿಷಯದಲ್ಲಿ ಸಾಂಪ್ರದಾಯಿಕ ಬ್ಯಾಂಕುಗಳು ಹಾಗೂ ಫಿಂಟೆಕ್ ಸಂಸ್ಥೆಗಳು ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚು ನಂಬುತ್ತಿವೆ.
ಫಿಂಟೆಕ್ ಸಂಸ್ಥೆಯಾದ 'ಬ್ಯಾಂಕ್‌ಬಜಾರ್' (BankBazaar) ಅಂಕಿ-ಅಂಶಗಳ ಪ್ರಕಾರ, ಅಟೈನ್‌ಮೆಂಟ್ ಇಂಡೆಕ್ಸ್‌ನಲ್ಲಿ (Attainment Index) ಪುರುಷರ 82.1 ಸ್ಕೋರ್‌ಗೆ ಹೋಲಿಸಿದರೆ ಮಹಿಳೆಯರು 84.3 ಸ್ಕೋರ್ ಪಡೆದು ಮುಂಚೂಣಿಯಲ್ಲಿದ್ದಾರೆ. ಇನ್ನು ಸಾಲ ಮರುಪಾವತಿ ಮಾಡದವರಲ್ಲಿ ಪುರುಷರ ಪ್ರಮಾಣ ಶೇ. 14.29 ರಷ್ಟಿದ್ದರೆ, ಮಹಿಳೆಯರ ಪ್ರಮಾಣ ಕೇವಲ ಶೇ. 10.98 ರಷ್ಟಿದೆ. ಹಾಗೆಯೇ, ನಿರಂತರವಾಗಿ ಸುಸ್ತಿದಾರರಾಗುವವರಲ್ಲಿ ಪುರುಷರು ಶೇ. 7.14 ರಷ್ಟಿದ್ದರೆ, ಮಹಿಳೆಯರು ಕೇವಲ ಶೇ. 3.25 ರಷ್ಟಿದ್ದಾರೆ. ಇದರೊಂದಿಗೆ ತಮ್ಮ ಕ್ರೆಡಿಟ್ ಸ್ಕೋರ್ ಅನ್ನು ನಿರಂತರವಾಗಿ ಟ್ರ್ಯಾಕ್ ಮಾಡುವಲ್ಲಿಯೂ ಮಹಿಳೆಯರೇ ಮುಂಚೂಣಿಯಲ್ಲಿದ್ದು, ಶೇ. 88 ರಷ್ಟು ಪುರುಷರಿಗೆ ಹೋಲಿಸಿದರೆ ಶೇ. 90 ರಷ್ಟು ಮಹಿಳೆಯರು ನಿಯಮಿತವಾಗಿ ತಮ್ಮ ಕ್ರೆಡಿಟ್ ಸ್ಕೋರ್ ಪರಿಶೀಲಿಸುತ್ತಾರೆ.
'ಬ್ಯಾಂಕ್‌ಬಜಾರ್' ವರದಿಯ ಪ್ರಕಾರ, ಮಹಿಳೆಯರು ಹೆಚ್ಚಾಗಿ ತುರ್ತು ಪರಿಸ್ಥಿತಿಗಳು ಮತ್ತು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಸಾಲದ ಮೊರೆ ಹೋಗುತ್ತಾರೆ, ಆದರೆ ಪುರುಷರು ಸಣ್ಣಪುಟ್ಟ ಆಸೆ-ಆಕಾಂಕ್ಷೆಗಳು ಹಾಗೂ ದಿನನಿತ್ಯದ ಅಗತ್ಯಗಳಿಗಾಗಿಯೂ ಸಾಲವನ್ನು ಅವಲಂಬಿಸುತ್ತಾರೆ. ಕೇವಲ ತುರ್ತು ಅಗತ್ಯಗಳಿಗಾಗಿ ಬ್ಯಾಂಕುಗಳನ್ನು ಅವಲಂಬಿಸುವ ಮಹಿಳೆಯರ ಪ್ರಮಾಣ ಶೇ. 29.27 ರಷ್ಟಿದ್ದರೆ, ಇದೇ ಉದ್ದೇಶಕ್ಕಾಗಿ ಸಾಲ ಪಡೆಯುವ ಪುರುಷರ ಪ್ರಮಾಣ ಶೇ. 25.43 ರಷ್ಟಿದೆ ಎಂದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.
ಶಿಕ್ಷಣ, ಆರೋಗ್ಯ, ಕುಟುಂಬದ ಭದ್ರತೆ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ಗಂಭೀರ ಕಾರಣಗಳಿಗಾಗಿ ಸಾಲ ಪಡೆದಾಗ ಅದನ್ನು ಮರುಪಾವತಿಸುವುದು ಮೊದಲ ಆದ್ಯತೆಯಾಗಿರುತ್ತದೆ ಎಂದು ಬ್ಯಾಂಕುಗಳು ಅಭಿಪ್ರಾಯಪಡುತ್ತವೆ. ಮಹಿಳೆಯರು ಹೆಚ್ಚಾಗಿ ಇಂತಹ ಜವಾಬ್ದಾರಿಯುತ ಉದ್ದೇಶಗಳಿಗಾಗಿಯೇ ಸಾಲವನ್ನು ಆಯ್ದುಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ಹೆಚ್ಚಾಗಿದ್ದರೂ, ಅವರು ಅದನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಮಿತವಾಗಿ ಬಳಸುತ್ತಾರೆ. ಅಷ್ಟೇ ಅಲ್ಲದೆ, ಪಡೆದ ಸಾಲವನ್ನು ಆದಷ್ಟು ಬೇಗ ತೀರಿಸಿ, ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಮಹಿಳೆಯರು ಹೆಚ್ಚಿನ ಒಲವು ತೋರುತ್ತಾರೆ.
ಬ್ಯಾಂಕ್‌ಬಜಾರ್ ಅಂಕಿ-ಅಂಶಗಳ ಪ್ರಕಾರ, ಸಾಲವನ್ನು ಅವಧಿಗಿಂತ ಮುಂಚಿತವಾಗಿಯೇ ಮರುಪಾವತಿಸಲು ಬಯಸುವ ಮಹಿಳೆಯರ ಪ್ರಮಾಣ ಶೇ. 18.29 ರಷ್ಟಿದ್ದರೆ, ಪುರುಷರಲ್ಲಿ ಈ ಪ್ರಮಾಣ ಶೇ. 17.43 ರಷ್ಟಿದೆ. ಇದು ಮಹಿಳೆಯರಲ್ಲಿರುವ ಆರ್ಥಿಕ ಸ್ವಾತಂತ್ರ್ಯದ ತೀವ್ರ ಹಂಬಲವನ್ನು ಪ್ರತಿಬಿಂಬಿಸುತ್ತದೆ ಎಂದು ಅರ್ಥಶಾಸ್ತ್ರಜ್ಞರು ವಿಶ್ಲೇಷಿಸುತ್ತಾರೆ.
ಬ್ಯಾಂಕುಗಳು ಆದಾಯ ಮತ್ತು ಕ್ರೆಡಿಟ್ ಹಿಸ್ಟರಿ ಆಧಾರದ ಮೇಲೆ ಸಾಲ ನೀಡಿದರೂ, ನಂಬಿಕೆಯ ವಿಷಯದಲ್ಲಿ ಮಹಿಳೆಯರಿಗೇ ಮೊದಲ ಆದ್ಯತೆ ನೀಡುತ್ತಿವೆ. ಭಾರತದ ಸಾಲದ ಆರ್ಥಿಕತೆಯಲ್ಲಿ ಮಹಿಳೆಯರು ಹೆಚ್ಚು ಸಕ್ರಿಯ ಹಾಗೂ ಆತ್ಮವಿಶ್ವಾಸದ ಭಾಗೀದಾರರಾಗುತ್ತಿದ್ದು, ಇದನ್ನು ಗಮನಿಸುತ್ತಿರುವ ಬ್ಯಾಂಕುಗಳು ಮುಂಬರುವ ದಿನಗಳಲ್ಲಿ ಮಹಿಳಾ ಗ್ರಾಹಕರಿಗಾಗಿ ವಿಶೇಷ ಲೋನ್ ಆಫರ್ ಹಾಗೂ ರಿಯಾಯಿತಿಗಳನ್ನು ಪರಿಚಯಿಸುವ ಸಾಧ್ಯತೆ ದಟ್ಟವಾಗಿದೆ, (ಏಜೆನ್ಸೀಸ್).