ಸಾಂದರ್ಭಿಕ ಚಿತ್ರ 
ದೇಶ

ಬಾಂಗ್ಲಾ ಮನವಿ ತಿರಸ್ಕಾರ: ಭಾರತದಲ್ಲೇ ಆಡಿ, ಇಲ್ಲ ಅಂಕ ಕಳೆದುಕೊಳ್ಳಿ ಎಂದ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ | ICC

ನವದೆಹಲಿ: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿನ ಬಾಂಗ್ಲಾದೊಂದಿಗಿನ ಪಂದ್ಯಗಳನ್ನು ಭಾರತದಿಂದ ಹೊರೆಗೆ ಸ್ಥಳಾಂತರಿಸುವಂತೆ ಬಿಸಿಬಿ(ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ) ಮಾಡಿದ್ದ ಮನವಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ತಿರಸ್ಕರಿಸಿದೆ ಎಂದು ಬುಧವಾರ(ಜ. 07) ವರದಿಯಾಗಿದೆ.
ಭಾರತದಲ್ಲಿ ಆಟಗಾರರ ಭದ್ರತೆಯ ನೆಪವೊಡ್ಡಿ ಪಂದ್ಯಗಳ ಸ್ಥಳಾಂತರಕ್ಕೆ ಮನವಿ ಮಾಡಿದ್ದ ಬಗ್ಗೆ ಐಸಿಸಿ ಮತ್ತು ಬಿಸಿಬಿ ನಡುವಿನ ವರ್ಚುವಲ್ ಸಭೆಯಲ್ಲಿ, ಟೂರ್ನಮೆಂಟ್ ವೇಳಾಪಟ್ಟಿ ಮತ್ತು ಸ್ಥಳಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಬಾಂಗ್ಲಾ ಪಂದ್ಯಾವಳಿಗಾಗಿ ಭಾರತಕ್ಕೆ ಪ್ರಯಾಣ ಮಾಡಬೇಕು. ಇಲ್ಲದಿದ್ದರೆ ಅಂಕಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ ಎನ್ನಲಾಗಿದೆ.
ಬಾಂಗ್ಲಾ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬಿಡುಗಡೆ ಮಾಡಿದ ನಂತರ ಬಿಸಿಸಿಐ & ಬಿಸಿಬಿ ನಡುವಿನ ಅಂತರ, ಬಿಕ್ಕಟ್ಟು ಉದ್ಭವಿಸಿದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧದ ಹಿಂಸಾಚಾರದ ವರದಿಗಳ ಕುರಿತು ಭಾರತದಲ್ಲಿ ವಿರೋಧ ಕೇಳಿ ಬಂದ ಹಿನ್ನೆಲೆ ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮುಸ್ತಾಫಿಜುರ್ ಅವರ ಕೈಬಿಡುವಂತೆ ಬಿಸಿಸಿಐ ಹೇಳಿತ್ತು.
ಮುಸ್ತಾಫಿಜುರ್ ಬಿಡುಗಡೆ ಬಳಿಕ ಪರಿಸ್ಥಿತಿ ಬಗ್ಗೆ ಚರ್ಚಿಸಲು ಸಭೆ ನಡೆಸಿದ್ದ ಬಿಸಿಬಿ, ಬಳಿಕ ಐಸಿಸಿಗೆ ಪತ್ರ ಬರೆದು ಭಾರತದಲ್ಲಿ ಬಾಂಗ್ಲಾ ಆಟಗಾರರ ಸುರಕ್ಷತೆ ಬಗ್ಗೆ ಪ್ರಶ್ನೆಗಳೆದ್ದಿವೆ. ಭದ್ರತೆಯ ಬಗ್ಗೆ ಕಳವಳವಿದ್ದು, ಸುರಕ್ಷತೆಯ ದೃಷ್ಟಿಯಿಂದ ಬಾಂಗ್ಲಾ ಜೊತೆಗಿನ ಪಂದ್ಯಗಳನ್ನು ಭಾರತದಿಂದ ಹೊರಗೆ ಮರು ನಿಗದಿ ಮಾಡುವಂತೆ ಕೇಳಿಕೊಂಡಿತ್ತು.
ಜೊತೆಗೆ ಬಾಂಗ್ಲಾದಲ್ಲಿ ಐಪಿಎಲ್​ ಪ್ರಸಾರವನ್ನು ನಿಷೇಧಿಸುವ ನಿರ್ಣಯ ತೆಗೆದುಕೊಂಡಿದೆ. ಇನ್ನೂ ಭಾರತದ ಐಪಿಎಲ್​ನಿಂದ ಹೊರಬಿದ್ದ ಬಳಿಕ ಮುಸ್ತಾಫಿಜುರ್ ಪಾಕಿಸ್ತಾನ್ ಸೂಪರ್ ಲೀಗ್‌ಗೆ ಸೇರಿಕೊಂಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).