Arvind Kejriwal | ಮಾಜಿ ಸಿಎಂ ಅರವಿಂದ ಕೇಜ್ರಿವಾಲ್
ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ತಮ್ಮ ಸಾಮಾಜಿಕ ಜಾಲತಾಣದ ಖಾತೆಯನ್ನು ಮೆಟಾ ಕಂಪನಿಯು ನಿಯಂತ್ರಿಸಿದೆ ಎಂದು ಆರೋಪಿಸಿದ್ದು, ಈ ವಿಷಯವಾಗಿ ಪದೇ ಪದೆ ಪ್ರಶ್ನಿಸಿದರೂ ಮೆಟಾ ಸಂಸ್ಥೆಯು ಯಾವುದೇ ಸ್ಪಷ್ಟನೆ ನೀಡಿಲ್ಲ ಎಂದು ಅವರು ದೂರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವೊಂದನ್ನು ತೆಗೆದುಹಾಕಿದ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಮೆಟಾ ನಡುವೆ ವಿವಾದ ನಡೆಯುತ್ತಿರುವ ಬೆನ್ನಲ್ಲೇ ಕೇಜ್ರಿವಾಲ್ ಈ ಆರೋಪ ಮಾಡಿದ್ದಾರೆ.
ತಮ್ಮ ಖಾತೆ ನಿಯಂತ್ರಣಕ್ಕೊಳಗಾಗಿರುವ ಸ್ಕ್ರೀನ್ಶಾಟ್ನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಕೇಜ್ರಿವಾಲ್, ಮೆಟಾ ಇಂಡಿಯಾವನ್ನು ಟ್ಯಾಗ್ ಮಾಡಿ ಸಂಸ್ಥೆಯ ಸೇವೆಗಳು ತೀರಾ ಕಳಪೆಯಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಮುಂದೆ ತಲೆಬಾಗದಂತೆ ಮೆಟಾ ಸಂಸ್ಥೆಗೆ ಆಗ್ರಹಿಸಿದ್ದಾರೆ. ಆದರೆ ತಮ್ಮ ಫೇಸ್‌ಬುಕ್ ಅಥವಾ ಇನ್ಸ್ಟಾಗ್ರಾಮ್ ಪೈಕಿ ಯಾವ ಖಾತೆ ನಿಯಂತ್ರಣಕ್ಕೊಳಗಾಗಿದೆ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಕೇಜ್ರಿವಾಲ್ ಪೋಸ್ಟ್ನಲ್ಲೇನಿದೆ...?
ನನ್ನ ಖಾತೆಯನ್ನು ಏಕೆ ನಿಯಂತ್ರಿಸಿದ್ದೀರಿ..? ನಿಮ್ಮ ಭಾರತೀಯ ಕಚೇರಿಯಲ್ಲಿ ವಿಚಾರಿಸಿದಾಗ, ನನ್ನ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದ್ದು, ಇಲ್ಲಿ ಲಭ್ಯವಿಲ್ಲ ಎಂದು ತಿಳಿಸಿದ್ದಾರೆ. ಆದರೆ ಇದಕ್ಕೆ ಯಾರೂ ಸೂಕ್ತ ಕಾರಣ ನೀಡುತ್ತಿಲ್ಲ ಅಥವಾ ಈ ನಿರ್ಬಂಧವನ್ನು ಹೇಗೆ ತೆರವುಗೊಳಿಸಬೇಕೆಂದು ಸೂಚಿಸುತ್ತಿಲ್ಲ. ಬರೆದ ಎಲ್ಲಾ ಇಮೇಲ್‌ಗಳಿಗೆ ಕೇವಲ ಸ್ವೀಕೃತಿ ಸಂದೇಶ ಬಿಟ್ಟರೆ ಬೇರೆ ಯಾವುದೇ ಉತ್ತರ ಬಂದಿಲ್ಲ ಎಂದು ಕೇಜ್ರಿವಾಲ್ ತಮ್ಮ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿ ವೀಡಿಯೊ ತೆಗೆದುಹಾಕಿದ ವಿವಾದ
ಜುಲೈ 23 ರಂದು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾಗಿದ್ದ ಪ್ರಧಾನಿ ಮೋದಿ ಪೋಸ್ಟ್ನ್ನು ತಾತ್ಕಾಲಿಕವಾಗಿ ತೆಗೆದುಹಾಕಿದ್ದಕ್ಕಾಗಿ ಮೆಟಾ ಸಂಸ್ಥೆಯು ಕೇಂದ್ರ ಸರ್ಕಾರದ ತೀವ್ರ ಆಕ್ರೋಶಕ್ಕೆ ತುತ್ತಾಗಿತ್ತು. ಈ ವಿಚಾರವಾಗಿ ಮೆಟಾ ಸಂಸ್ಥೆಯು ಕ್ಷಮಾಪಣೆ ಕೇಳಿ ಸ್ಪಷ್ಟನೆ ನೀಡಬೇಕಾಯಿತು. ಆನ್‌ಲೈನ್‌ನಲ್ಲಿ ಅಕ್ರಮ ಹಾಗೂ ಆಕ್ಷೇಪಾರ್ಹ ವಿಷಯಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆಯೇ ಎಂದು ಪ್ರಶ್ನಿಸಿ ಕೇಂದ್ರ ಸರ್ಕಾರವು ಮೆಟಾದ ಉನ್ನತ ಅಧಿಕಾರಿಗಳಿಗೆ ಸಮನ್ಸ್ ನೀಡಿ ವಿಚಾರಣೆ ನಡೆಸಿತ್ತು.
ನಂತರ ಆ ವೀಡಿಯೊವನ್ನು ಮರುಸ್ಥಾಪಿಸಿದ ಮೆಟಾ, ನಿರ್ದಿಷ್ಟ ಮಾದರಿಯ ವಿಷಯಗಳನ್ನು ಪ್ರಚಾರ ಮಾಡಲು (Boost) ಅಪಾರ ಪ್ರಮಾಣದ ಹಣ ಪಾವತಿಸಲಾಗಿದೆ ಎಂಬುದನ್ನು ಒಪ್ಪಿಕೊಂಡಿದೆ. ನಮ್ಮ ವೇದಿಕೆಯಲ್ಲಿ ಹರಿದಾಡುವ ಅಕ್ರಮ ವಿಷಯಗಳನ್ನು ಸಂಪೂರ್ಣವಾಗಿ ತಡೆಯಲು ನಮ್ಮ ತಂತ್ರಜ್ಞಾನ ವ್ಯವಸ್ಥೆ ಇನ್ನು ಪೂರ್ಣಪ್ರಮಾಣದಲ್ಲಿ ಸಜ್ಜಾಗಿಲ್ಲ ಎಂಬುದನ್ನು ಮೆಟಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಇದರೊಂದಿಗೆ, ಮಕ್ಕಳ ಲೈಂಗಿಕ ಶೋಷಣೆ ಹಂಚಿಕೆ, ಡೀಪ್‌ಫೇಕ್, ಪ್ರಮುಖ ಖಾತೆಗಳ ಸುರಕ್ಷತೆ, ಆಲ್ಗರಿದಮ್ ಪಕ್ಷಪಾತ ಮತ್ತು ಭಾರತೀಯ ಕಾನೂನುಗಳ ಪಾಲನೆಗೆ ಸಂಬಂಧಿಸಿದಂತೆಯೂ ಕೇಂದ್ರ ಸರ್ಕಾರ ಮೆಟಾ ಸಂಸ್ಥೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ನಿರ್ದಿಷ್ಟ ವೀಕ್ಷಕರನ್ನು ಗುರಿಯಾಗಿಸಿಕೊಂಡು ಹಣದ ಮೂಲಕ ಪಾವತಿಸಿದ ಪ್ರಚಾರಗಳನ್ನು (Paid Promotions) ನಡೆಸಲಾಗಿದೆ ಎಂಬುದನ್ನು ಮೆಟಾ ಒಪ್ಪಿಕೊಂಡಿದೆ(ಏಜೆನ್ಸೀಸ್).