CM Vijay | ಮುಖ್ಯಮಂತ್ರಿ ಜೋಸೆಫ್ ವಿಜಯ್ 
ದೇಶ

ಟಾಸ್ಮಾಕ್ ಆದಾಯ ಸೋರಿಕೆಗೆ ಸಿಎಂ ವಿಜಯ್ ತಡೆ!...ಪ್ರತಿ ತಿಂಗಳು ಲೂಟಿಯಾಗುತ್ತಿದ್ದ 102 ಕೋಟಿ ರೂ ಸರ್ಕಾರಿ ಖಜಾನೆಗೆ | CM Vijay

ಚೆನ್ನೈ: ಅಧಿಕಾರ ವಹಿಸಿಕೊಂಡ ನಂತರ ಶುಕ್ರವಾರ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲೇ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ (CM Vijay) ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ್ದಾರೆ. ರಾಜ್ಯದ ಸರ್ಕಾರಿ ಸ್ವಾಮ್ಯದ ಮದ್ಯ ಮಾರಾಟ ನಿಗಮವಾದ ಟಾಸ್ಮಾಕ್ (TASMAC) ಮೂಲಕ ನಡೆಯುತ್ತಿದ್ದ ಕೋಟ್ಯಂತರ ರೂಪಾಯಿ ಸೋರಿಕೆ ಹಾಗೂ ಅನಧಿಕೃತ ಪಕ್ಷದ ನಿಧಿ ಸಂಗ್ರಹಣೆಗೆ ಸಂಪೂರ್ಣ ತಡೆ ಒಡ್ಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಮದ್ಯ ಮಾರಾಟದಿಂದ ಬರುವ ಪ್ರತಿಯೊಂದು ರೂಪಾಯಿಯೂ ನೇರವಾಗಿ ಸರ್ಕಾರದ ಖಜಾನೆಗೆ ಸೇರಬೇಕೆಂದು ತಿಳಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಟಾಸ್ಮಾಕ್ ಕಾರ್ಯಾಚರಣೆಗಳ ಮೂಲಕ ಸುಮಾರು 1,600 ಕೋಟಿ ರೂಪಾಯಿ ಸರ್ಕಾರಿ ಹಣವನ್ನು ಲೂಟಿ ಮಾಡಲಾಗಿದೆ ಎಂದು ಅಂದಾಜಿಸಲಾಗಿದ್ದು, ಪ್ರತಿ ತಿಂಗಳು ಸುಮಾರು 102 ಕೋಟಿ ರೂಪಾಯಿಗಳನ್ನು ಅನಧಿಕೃತವಾಗಿ ಪಕ್ಷದ ನಿಧಿಯ ಹೆಸರಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿತ್ತು ಎಂದು ಸರ್ಕಾರಿ ಮೂಲಗಳು ಬಹಿರಂಗಪಡಿಸಿವೆ. ಈ ಬೆಳವಣಿಗೆಯು ಈ ಹಿಂದೆ ಆಡಳಿತದಲ್ಲಿದ್ದ ಡಿಎಂಕೆ ಸರ್ಕಾರದ ಮೇಲಿನ ಸಂಶಯವನ್ನು ಮತ್ತಷ್ಟು ಹೆಚ್ಚಿಸಿದೆ.
ರಾಜ್ಯಾದ್ಯಂತ ಇರುವ ಸುಮಾರು 4,048 ಅಧಿಕೃತ ಟಾಸ್ಮಾಕ್ ಮದ್ಯದ ಅಂಗಡಿಗಳು ಮತ್ತು ಸಗಟು ಜಾಲದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿದ್ದ ಈ ಅನಧಿಕೃತ ನಗದು ವಸೂಲಾತಿ ದಂಧೆಯನ್ನು ತಕ್ಷಣವೇ ನಿಲ್ಲಿಸುವಂತೆ ಸಿಎಂ ಆದೇಶಿಸಿದ್ದಾರೆ. ಕೇಬಲ್ ವಿತರಣಾ ಉದ್ಯಮ ನಡೆಸಿ, ಈಗ ಮೊದಲ ಬಾರಿಗೆ ಸಚಿವರಾಗಿರುವ 37 ವರ್ಷದ ನಿಷೇಧ ಮತ್ತು ಅಬಕಾರಿ ಸಚಿವ ಕೆ. ವಿಘ್ನೇಶ್ ಈ ಸುಧಾರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಭ್ರಷ್ಟಾಚಾರದ ಮೂಲಕ ಅಥವಾ ಜನರ ಸಂಕಷ್ಟದ ಮೂಲಕ ಬರುವ ಆದಾಯ ನಮ್ಮ ಸರ್ಕಾರಕ್ಕೆ ಬೇಡ ಎಂದು ಮುಖ್ಯಮಂತ್ರಿಗಳು ಸಂಪುಟ ಸಭೆಯಲ್ಲೇ ಸ್ಪಷ್ಟಪಡಿಸಿದ್ದಾರೆ. ಸೋರಿಕೆಯನ್ನು ತಕ್ಷಣವೇ ತಡೆದು ಜನರ ಹಣವನ್ನು ಮರಳಿ ಖಜಾನೆಗೆ ತರುವುದು ಅವರ ಸರಳ ಸೂಚನೆಯಾಗಿದೆ ಎಂದು ಸಚಿವ ಕೆ. ವಿಘ್ನೇಶ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತಿ ತಿಂಗಳು ರೂ. 100 ಕೋಟಿ ರಾಜಕೀಯ ಫಂಡ್ ಲೂಟಿ!

ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ, ಕಳೆದ ಎರಡು ದಶಕಗಳಿಂದ ಟಾಸ್ಮಾಕ್ ಪೂರೈಕೆ ಜಾಲದಲ್ಲಿ ಅನಧಿಕೃತ ವಸೂಲಾತಿ ವ್ಯವಸ್ಥಿತವಾಗಿ ಚಾಲ್ತಿಯಲ್ಲಿತ್ತು. ಮದ್ಯದ ಬಾಟಲಿಗಳ ಗಾತ್ರಕ್ಕೆ ಅನುಗುಣವಾಗಿ ರಾಜಕೀಯ ಫಂಡ್ ಸಂಗ್ರಹಿಸಲಾಗುತ್ತಿತ್ತು.
ಸಾಮಾನ್ಯ ಮದ್ಯದ ಬಾಕ್ಸ್: ಪ್ರತಿ ಬಾಕ್ಸ್‌ಗೆ ಸರಿಸುಮಾರು ರೂ. 90 ರಂತೆ ಪಕ್ಷದ ನಿಧಿಗೆ ಡೈವರ್ಟ್ ಮಾಡಲಾಗುತ್ತಿತ್ತು.
ಬಿಯರ್ ಬಾಕ್ಸ್: ಪ್ರತಿ ಬಾಕ್ಸ್‌ಗೆ ಸುಮಾರು ರೂ. 40 ವಸೂಲಿ ಮಾಡಲಾಗುತ್ತಿತ್ತು.
ವೈನ್‌ ಬಾಕ್ಸ್: ಪ್ರತಿ ಬಾಕ್ಸ್‌ಗೆ ರೂ. 20 ರಂತೆ ರಾಜಕೀಯ ನಾಯಕರ ನಿಧಿಗೆ ಸಂದಾಯವಾಗುತ್ತಿತ್ತು.
ತಮಿಳುನಾಡಿನಲ್ಲಿ ಪ್ರತಿ ತಿಂಗಳು ಸುಮಾರು 88 ಲಕ್ಷ ಗ್ರಾಹಕರು ಟಾಸ್ಮಾಕ್ ಮೂಲಕ ಮದ್ಯ ಖರೀದಿಸುತ್ತಾರೆ. ಈ ಮೂಲಕ ತಿಂಗಳಿಗೆ ಕನಿಷ್ಠ 102 ಕೋಟಿ ರೂಪಾಯಿ ರಾಜಕಾರಣಿಗಳ ಜೇಬು ಸೇರುತ್ತಿತ್ತು ಎಂದು ಆಂತರಿಕ ಮೂಲಗಳು ತಿಳಿಸಿವೆ. ಟಾಸ್ಮಾಕ್ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಗಣಿಗಾರಿಕೆ ಸೇರಿದಂತೆ ಆದಾಯ ಸೋರಿಕೆಯಾಗುವ ಪ್ರತಿಯೊಂದು ಇಲಾಖೆಯ ಮೇಲೂ ಸಿಎಂ ವಿಜಯ್ ಕಣ್ಣಿಟ್ಟಿದ್ದು, ಭ್ರಷ್ಟಾಚಾರ ನಿಗ್ರಹ ಕಾರ್ಯಾಚರಣೆಯನ್ನು ವಿಸ್ತರಿಸಲಿದ್ದಾರೆ.

ಖಾಲಿ ಬಾಟಲಿ ಮರುಖರೀದಿ ಯೋಜನೆಯಲ್ಲೂ ಭ್ರಷ್ಟಾಚಾರ!

ಟಾಸ್ಮಾಕ್ ಮಳಿಗೆಗಳಲ್ಲಿ ಜಾರಿಯಲ್ಲಿದ್ದ ವಿವಾದಾತ್ಮಕ ರೂ. 10 ಖಾಲಿ ಬಾಟಲಿ ಡೆಪಾಸಿಟ್ ಯೋಜನೆಯೂ ಈಗ ತನಿಖೆಯ ವ್ಯಾಪ್ತಿಗೆ ಬಂದಿದೆ. ಈ ನಿಯಮದಡಿಯಲ್ಲಿ ಗ್ರಾಹಕರು ಪ್ರತಿ ಬಾಟಲಿಗೆ ಹೆಚ್ಚುವರಿಯಾಗಿ 10 ರೂಪಾಯಿ ಠೇವಣಿ ಇಡಬೇಕಿತ್ತು ಮತ್ತು ಖಾಲಿ ಬಾಟಲಿ ಮರಳಿ ಕೊಟ್ಟಾಗ ಆ ಹಣ ರಿಫಂಡ್ ಆಗುತ್ತಿತ್ತು. ತಮಿಳುನಾಡಿನಲ್ಲಿ ತಿಂಗಳಿಗೆ ಸುಮಾರು 1 ಕೋಟಿ ಮದ್ಯದ ಬಾಟಲಿಗಳು ಮಾರಾಟವಾಗುತ್ತವೆ. ಆದರೆ ಮಾರಾಟವಾದ ಬಾಟಲಿಗಳಲ್ಲಿ ಕೇವಲ 60% ಮಾತ್ರ ಮರಳಿ ಬರುತ್ತಿದ್ದವು. ಉಳಿದ 40% ನಷ್ಟು ಹಣ ಲೆಕ್ಕಕ್ಕಿಲ್ಲದೆ ವಸೂಲಾತಿ ದಂಧೆಕೋರರ ಪಾಲಾಗುತ್ತಿತ್ತು. ಈ ಬಾಟಲಿ ರಿಟರ್ನ್ ಹಗರಣ ಒಂದರಲ್ಲೇ ಪ್ರತಿ ತಿಂಗಳು ಸುಮಾರು 300 ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಯುತ್ತಿತ್ತು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಹಾಗಾಗಿ ಈ ಸೋರಿಕೆಯನ್ನು ತಡೆಯಲು 10 ರೂಪಾಯಿ ಠೇವಣಿಯನ್ನು ಎಂಆರ್‌ಪಿ (MRP) ದರದಲ್ಲೇ ವಿಲೀನಗೊಳಿಸಲು ಅಥವಾ ಡಿಜಿಟಲ್ ರಿಫಂಡ್ ವ್ಯವಸ್ಥೆ ತರಲು ಸರ್ಕಾರ ಯೋಚಿಸುತ್ತಿದೆ. ಜೂನ್ ಅಂತ್ಯದೊಳಗೆ ಈ ಬಾಟಲಿ ಮರುಖರೀದಿ ಪ್ರಕ್ರಿಯೆಯನ್ನು ಹೊರಗುತ್ತಿಗೆ ಏಜೆನ್ಸಿಗಳಿಗೆ ವಹಿಸಲು ನಿರ್ಧರಿಸಲಾಗಿದೆ.

717 ಟಾಸ್ಮಾಕ್ ಮದ್ಯದ ಅಂಗಡಿಗಳು ಬಂದ್

ತಮಿಳಗ ವೆಟ್ರಿ ಕಳಗಂ (TVK) ಸರ್ಕಾರದ ಪ್ರಮುಖ ಕಾರ್ಯಸೂಚಿಯಾದ ವ್ಯಸನ ಮುಕ್ತ ತಮಿಳುನಾಡು ಯೋಜನೆಯ ಭಾಗವಾಗಿ, ಸಿಎಂ ವಿಜಯ್ ಅವರು ರಾಜ್ಯದಾದ್ಯಂತ ಇರುವ 717 ಟಾಸ್ಮಾಕ್ ಚಿಲ್ಲರೆ ಮದ್ಯದ ಅಂಗಡಿಗಳನ್ನು ತಕ್ಷಣವೇ ಮುಚ್ಚಲು ಆದೇಶಿಸಿದ್ದಾರೆ. ಇದರಿಂದಾಗಿ ಸರ್ಕಾರದ ವಾರ್ಷಿಕ ಆದಾಯದಲ್ಲಿ ಸುಮಾರು 8,000 ಕೋಟಿ ರೂಪಾಯಿ ನಷ್ಟವಾಗಲಿದೆ. ಆದಾಯ ನಷ್ಟವನ್ನು ಸರಿದೂಗಿಸಲು ಮದ್ಯದ ಬೆಲೆಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ. ಟಾಸ್ಮಾಕ್ ಜನರನ್ನು ಸುಲಿಗೆ ಮಾಡುವ ಕೇಂದ್ರವಾಗಬಾರದು. ಅಕ್ರಮ ವಸೂಲಾತಿ ಮತ್ತು ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ಸಹಿಸುವುದಿಲ್ಲ ಎಂದು ವಿಜಯ್ ಅಧಿಕಾರಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ(ಏಜೆನ್ಸೀಸ್​).