ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ 
ದೇಶ

ಯಾರೇ ಆಗಲಿ ನೇತಾಜಿ ಬಗ್ಗೆ ಆಕ್ಷೇಪಾರ್ಹ ರೀತಿಯಲ್ಲಿ ಮಾತಾಡಿದ್ರೆ ಬಂಧಿಸಿ: ಪೊಲೀಸರಿಗೆ ಬಂಗಾಳ ಸಿಎಂ ಅಧಿಕಾರಿ ಸೂಚನೆ | Bengal CM Adhikari

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಗಲಿ ಅಥವಾ ಬಹಿರಂಗ ವೇದಿಕೆಗಳಲ್ಲಾಗಲಿ ಯಾರೇ ಅವಹೇಳನಕಾರಿ ಹೇಳಿಕೆ ನೀಡಿದ್ರೂ ಕ್ರಮಕೈಗೊಳ್ಳುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ(Bengal CM Adhikari) ಬುಧವಾರ(ಆ. 12) ಪೊಲೀಸರಿಗೆ ಆದೇಶಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ನೇತಾಜಿ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವವರು ತಕ್ಷಣವೇ ಪೋಸ್ಟ್‌ಗಳನ್ನು ಅಳಿಸಿ ಕ್ಷಮೆಯಾಚಿಸಬೇಕು. ಅಹಿತಕರ ಹೇಳಿಕೆ ನೀಡುವವರನ್ನು ಬಂಧಿಸುವಂತೆ ನಾನು ಪೊಲೀಸರಿಗೆ ಹೇಳಿದ್ದೇನೆ ಎಂದು ತಿಳಿಸಿದ್ದಾರೆ.
ಶಾಸಕರು, ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳಾಗಲಿ ಎಲ್ಲರಿಗೂ ಕಾನೂನು ಸಮಾನವಾಗಿರುತ್ತದೆ ಎಂದಿರುವ ಅವರು, ಎಲ್ಲಾ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ಅವುಗಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿಡುವಂತೆ ನಿರ್ದೇಶನ ನೀಡಿದ್ದಾರೆ.
ಕೆಲವು ಷರತ್ತುಗಳಿಗೆ ಒಳಪಟ್ಟು ಕೇಂದ್ರಗಳನ್ನು ನಡೆಸಲು ರಾಜ್ಯವು ತಿಂಗಳಿಗೆ 30,000 ರೂ. ಸಹಾಯ ಮಾಡುತ್ತದೆ. ಕೇಂದ್ರಗಳು ನೇತಾಜಿಯವರ ಹೆಸರನ್ನು ಹೊಂದಿರಬೇಕು ಮತ್ತು ಸಾಂಪ್ರದಾಯಿಕ ಧೋತಿ ಮತ್ತು ಕುರ್ತಾದಲ್ಲಿ ಬೋಸ್ ಅವರ ಭಾವಚಿತ್ರವನ್ನು ಪ್ರದರ್ಶಿಸಬೇಕಾಗುತ್ತದೆ. ಇದನ್ನು ರಾಜ್ಯ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆ ನೋಡಿಕೊಳ್ಳುತ್ತದೆ ಎಂದಿದ್ದಾರೆ.
ಈ ಹಿಂದೆ ನಮ್ಮ ರಾಜ್ಯದ ಶಾಸಕರು ಸರ್ಕಾರಿ ಕಚೇರಿಗಳಿಂದ ಕೆಲಸ ಮಾಡುತ್ತಿದ್ದರು. ಈಗ ಬಹುತೇಕ ಪ್ರತಿಯೊಬ್ಬ ಶಾಸಕರು ತಮ್ಮದೇ ಆದ ಕಚೇರಿಯನ್ನು ಹೊಂದಿದ್ದಾರೆ. ಪ್ರತಿ ಕ್ಷೇತ್ರದಲ್ಲಿ ಶಾಸಕರು ಸೇವಾ ಕೇಂದ್ರ ಇರಬೇಕು. ಅವುಗಳ ಮೂಲಕ ಮತ ಚಲಾಯಿಸಿದರೂ ಅಥವಾ ಇಲ್ಲದಿದ್ದರೂ ಜನರಿಗೆ ಸೇವೆಗಳನ್ನು ಒದಗಿಸಬೇಕು. ಈ ಸೇವಾ ಕೇಂದ್ರಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಸೇವಾ ಕೇಂದ್ರ ಎಂದು ಕರೆಯಲಾಗುವುದು ಎಂದು ಹೇಳಿದ್ದಾರೆ.
ಇತ್ತೀಚೆಗೆ, ಅನಂತ ಮಹಾರಾಜ್ ಎಂದೇ ಕರೆಸಿಕೊಳ್ಳುವ ಬಿಜೆಪಿ ಸಂಸದ ನಾಗೇಂದ್ರನಾಥ ರಾಯ್ ಅವರು ನೇತಾಜಿಯನ್ನು ಯುದ್ಧ ಅಪರಾಧಿ ಎಂದು ಬಣ್ಣಿಸಿ, ಅವರ ನಾಯಕತ್ವ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆಜಾದ್ ಹಿಂದ್ ಫೌಜ್‌ನ ಪಾತ್ರವನ್ನು ಪ್ರಶ್ನಿಸಿದ್ದು ವಿವಾದಕ್ಕೀಡಾಗಿದ್ದು, ವಿಪಕ್ಷಗಳು ಕಿಡಿಕಾರಿವೆ. ಈ ಹಿನ್ನೆಲೆ ಇಂದು ಮುಖ್ಯಮಂತ್ರಿಗಳು ಪೊಲೀಸರಿಗೆ ಕ್ರಮಕೈಗೊಳ್ಳುವ ನಿರ್ದೇಶನ ನೀಡಿದ್ದಾರೆ (ಏಜೆನ್ಸೀಸ್).