Riju Dutta | ಟಿಎಂಸಿಯ ಉಚ್ಚಾಟಿತ ವಕ್ತಾರ ರಿಜು ದತ್ತಾ 
ದೇಶ

ಅಸಲಿ ತೃಣಮೂಲ ಕಾಂಗ್ರೆಸ್ ನಮ್ಮದೇ!...50+ ಬಂಡಾಯ ಶಾಸಕರ ಮುಂದಿನ ಹೆಜ್ಜೆಯ ರಹಸ್ಯ ಬಿಚ್ಚಿಟ್ಟ ಟಿಎಂಸಿ ಮಾಜಿ ವಕ್ತಾರ ರಿಜು ದತ್ತಾ | Riju Dutta

ಕೋಲ್ಕತ್ತಾ: ಮೂರು ದಶಕಗಳ ಹಿಂದೆ ತಾವು ಕಷ್ಟಪಟ್ಟು ಕಟ್ಟಿದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಮೇಲಿನ ಹಿಡಿತವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳೆದುಕೊಳ್ಳಲಿದ್ದಾರಾ..? ಪಶ್ಚಿಮ ಬಂಗಾಳ ರಾಜಕೀಯದ ಇತ್ತೀಚಿನ ಬೆಳವಣಿಗೆಗಳನ್ನು ನೋಡಿದರೆ ಇದು ಅಸಾಧ್ಯವೇನಲ್ಲ ಅನಿಸುತ್ತಿದೆ. ಶಾಸಕರ ಸರಣಿ ಬಂಡಾಯ, ರಹಸ್ಯ ಸಭೆಗಳು ಹಾಗೂ ಟಿಎಂಸಿ ಪಕ್ಷ ಮತ್ತು ಅದರ ಅಧಿಕೃತ ಜೋಡಿ ಹೂವು ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ರೆಬೆಲ್ ನಾಯಕರ ಗುಂಪೊಂದು ತೆರೆಮರೆಯಲ್ಲಿ ನಡೆಸುತ್ತಿರುವ ಕಸರತ್ತು ಇದಕ್ಕೆ ಪುಷ್ಟಿ ನೀಡುವಂತಿದೆ.
ಟಿಎಂಸಿ ಬಂಡಾಯ ಬಣದಲ್ಲಿ ನಡೆಯುತ್ತಿರುವ ಈ ಹೈಡ್ರಾಮಾದ ಒಳನೋಟಗಳನ್ನು ಪಕ್ಷದಿಂದ ಅಮಾನತುಗೊಂಡಿರುವ ರಾಷ್ಟ್ರೀಯ ವಕ್ತಾರ ರಿಜು ದತ್ತಾ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.
ಸದ್ಯ ತೃಣಮೂಲ ಕಾಂಗ್ರೆಸ್‌ನಲ್ಲಿ ಭಿನ್ನಮತದ ಬಿಕ್ಕಟ್ಟು ತಾರಕಕ್ಕೇರಿದ್ದು, ಮಮತಾ ಬ್ಯಾನರ್ಜಿ ತಮ್ಮ ಶಾಸಕರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಇದರ ನಡುವೆ ಭಾರಿ ಬಾಂಬ್ ಸಿಡಿಸಿರುವ ರಿಜು ದತ್ತಾ, ಸುಮಾರು 50 ಕ್ಕೂ ಹೆಚ್ಚು ಟಿಎಂಸಿ ಶಾಸಕರು ಮಮತಾ ನೇತೃತ್ವದ ಪಕ್ಷದಿಂದ ಹೊರಬರಲು ಸಿದ್ಧತೆ ನಡೆಸುತ್ತಿದ್ದಾರೆ ಹಾಗೂ ಅಂತಿಮವಾಗಿ ತಾವೇ ಅಸಲಿ ಟಿಎಂಸಿ ಎಂದು ಘೋಷಿಸಿಕೊಂಡು ಪಕ್ಷದ ಐಕಾನ್ ಆಗಿರುವ ಜೋಡಿ ಹೂವಿನ ಚಿಹ್ನೆಗೆ ಹಕ್ಕು ಮಂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
1998 ರಲ್ಲಿ ಮಮತಾ ಬ್ಯಾನರ್ಜಿ ಪಕ್ಷ ಸ್ಥಾಪಿಸಿದ ನಂತರ ಟಿಎಂಸಿ ಎದುರಿಸುತ್ತಿರುವ ಅತ್ಯಂತ ದೊಡ್ಡ ಆಂತರಿಕ ಬಿಕ್ಕಟ್ಟು ಇದಾಗಿದೆ ಎನ್ನಲಾಗುತ್ತಿದ್ದು, ವಿಧಾನಸಭೆಯ ವಿರೋಧ ಪಕ್ಷದ ನಾಯಕನ ನೇಮಕಾತಿಯಲ್ಲಿ ನಕಲಿ ಸಹಿ ಮಾಡಲಾದ ವಿವಾದ, ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಎಂಬ ಇಬ್ಬರು ಶಾಸಕರ ಉಚ್ಛಾಟನೆ ಹಾಗೂ ಹಾಲಿ ಶಾಸಕರಲ್ಲಿ ಮೂಡಿರುವ ತೀವ್ರ ಅಸಮಾಧಾನವೇ ಪಕ್ಷದೊಳಗೆ ಬಂಡಾಯದ ಕಿಡಿ ಹೊತ್ತಿಕೊಳ್ಳಲು ಮುಖ್ಯ ಕಾರಣವಾಗಿದೆ.

ವಿರೋಧ ಪಕ್ಷದ ನಾಯಕನ ಆಯ್ಕೆಯೇ ಈ ಕಿಚ್ಚಿಗೆ ಕಾರಣ!

ಮೂಲಗಳ ಪ್ರಕಾರ, ಹೊಸದಾಗಿ ಆಯ್ಕೆಯಾಗಿರುವ ಬಹುತೇಕ ಟಿಎಂಸಿ ಶಾಸಕರು ಪಕ್ಷದಿಂದ ಉಚ್ಛಾಟಿತಗೊಂಡಿರುವ ರಿತಬ್ರತಾ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಮಾಡಲು ಬಯಸಿದ್ದರು. ಆದರೆ, ಮಮತಾ ಬ್ಯಾನರ್ಜಿ ನೇತೃತ್ವದ ಹೈಕಮಾಂಡ್ ಮಾತ್ರ ಹಿರಿಯ ನಾಯಕ ಶೋಭನ್‌ದೇವ್ ಚಟ್ಟೋಪಾಧ್ಯಾಯ ಅವರ ಹೆಸರನ್ನು ಮುಂಚೂಣಿಗೆ ತಂದಿತ್ತು. ಇದು ಶಾಸಕರ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಇತ್ತ, ಬಂಡಾಯದ ನೇತೃತ್ವ ವಹಿಸಿದ್ದಾರೆ ಎನ್ನಲಾದ ಶಾಸಕ ರಿತಬ್ರತಾ ಬ್ಯಾನರ್ಜಿ ಮಾತ್ರ ಪಕ್ಷ ಇಬ್ಬಾಗವಾಗುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಶಾಸಕರು ಪ್ರತ್ಯೇಕ ಪಕ್ಷ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಈ ಹಂತದಲ್ಲಿ ಏನನ್ನೂ ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಬಿಕ್ಕಟ್ಟು ಒಪ್ಪಿಕೊಂಡ ಮಮತಾ ಬ್ಯಾನರ್ಜಿ!

ಪಕ್ಷದೊಳಗೆ ಭಿನ್ನಮತ ಇರುವುದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಆಪ್ತ ಕುನಾಲ್ ಘೋಷ್ ಸೋಮವಾರ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ನಮ್ಮ ಟಿಎಂಸಿ ಶಾಸಕರಿಗೆ ಪೊಲೀಸ್ ಪ್ರಭಾವ ಬಳಸಿ ಬೆದರಿಕೆ ಹಾಕಲಾಗುತ್ತಿದೆ ಮತ್ತು ನಿರ್ದಿಷ್ಟ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿರುವಂತೆ ಸೂಚಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮತ್ತೊಂದೆಡೆ ಕುನಾಲ್ ಘೋಷ್, ಬಂಡಾಯ ಶಾಸಕರು ದಾರಿ ತಪ್ಪಬಾರದು ಎಂದು ಕೈಮುಗಿದು ಮನವಿ ಮಾಡಿದ್ದಾರೆ. ಅಲ್ಲದೆ, ಪಕ್ಷದ ನಾಯಕತ್ವಕ್ಕೆ ತಿಳಿಸದೆ ರಿತಬ್ರತಾ ರಹಸ್ಯ ಸಭೆಗಳನ್ನು ಆಯೋಜಿಸಿ ಪಕ್ಷವನ್ನು ಇಬ್ಬಾಗ ಮಾಡಲು ಯತ್ನಿಸುತ್ತಿದ್ದಾರೆ ಎಂದು ಘೋಷ್ ನೇರ ಆರೋಪ ಮಾಡಿದ್ದಾರೆ.

50+ ಶಾಸಕರು ಟಿಎಂಸಿಗೆ ಯಾಕೆ ಮುಖ್ಯ? ಸಂಖ್ಯಾಬಲದ ಲೆಕ್ಕಾಚಾರ ಇಲ್ಲಿದೆ

ಪ್ರಸ್ತುತ 294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ನೇತೃತ್ವದ ಟಿಎಂಸಿ ಒಟ್ಟು 80 ಶಾಸಕರನ್ನು ಹೊಂದಿದೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಶಾಸಕ ಸ್ಥಾನ ಅನರ್ಹತೆಯಿಂದ ಪಾರಾಗಬೇಕಾದರೆ, ಬಂಡಾಯ ಎದ್ದಿರುವ ಬಣಕ್ಕೆ ಒಟ್ಟು ಶಾಸಕರಲ್ಲಿ ಕನಿಷ್ಠ ಮೂರನೇ ಎರಡರಷ್ಟು (2/3rd) ಶಾಸಕರ ಬೆಂಬಲ ಬೇಕಾಗುತ್ತದೆ. ಅಂದರೆ, 80 ಶಾಸಕರಲ್ಲಿ ಕನಿಷ್ಠ 53 ಶಾಸಕರು ಮಮತಾ ಬ್ಯಾನರ್ಜಿ ವಿರುದ್ಧ ಬಂಡಾಯ ಎದ್ದರೆ ಮಾತ್ರ ಅವರ ಶಾಸಕ ಸ್ಥಾನ ಸುರಕ್ಷಿತವಾಗಿರುತ್ತದೆ. ಹೀಗಾಗಿಯೇ 50 ಕ್ಕೂ ಹೆಚ್ಚು ಶಾಸಕರು ಒಟ್ಟಿಗೆ ಹೊರಬರಲು ಸ್ಕೆಚ್ ಹಾಕುತ್ತಿದ್ದಾರೆ ಎನ್ನಲಾಗಿದೆ.
ಗಮನಿಸಬೇಕಾದ ಅಂಶ: ಪಕ್ಷದಲ್ಲಿ ಭಿನ್ನಮತ ಇರುವುದು ನಿಜವಾದರೂ, ಈ 50 ಶಾಸಕರ ಬಂಡಾಯದ ವಾದ ಇನ್ನು ಅಧಿಕೃತವಾಗಿ ಸಾಬೀತಾಗಿಲ್ಲ. ಯಾವುದೇ ಶಾಸಕರು ಬಹಿರಂಗವಾಗಿ ಬಂಡಾಯ ಬಣಕ್ಕೆ ಬೆಂಬಲ ಘೋಷಿಸಿಲ್ಲ ಮತ್ತು ಚುನಾವಣಾ ಆಯೋಗದ ಮುಂದೆ ಟಿಎಂಸಿ ಚಿಹ್ನೆಗಾಗಿ ಇನ್ನು ಯಾವುದೇ ಅಧಿಕೃತ ಅರ್ಜಿ ಸಲ್ಲಿಕೆಯಾಗಿಲ್ಲ.
ಈ ಭಿನ್ನಮತ, ಸದ್ಯಕ್ಕೆ ದಕ್ಷಿಣದ ತಮಿಳುನಾಡಿನ ರಾಜಕೀಯ ಬಿಕ್ಕಟ್ಟಿನಷ್ಟೇ ತೀವ್ರ ಕುತೂಹಲ ಮೂಡಿಸಿದೆ. ಮೂರು ದಶಕಗಳ ಕಾಲ ಮಮತಾ ಬ್ಯಾನರ್ಜಿಯ ಏಕಸ್ವಾಮ್ಯದಲ್ಲಿದ್ದ ಪಕ್ಷದಲ್ಲಿ 50 ಕ್ಕೂ ಹೆಚ್ಚು ಶಾಸಕರು ದೊಡ್ಡ ಹೆಜ್ಜೆ ಇಟ್ಟಿರುವುದು ಸಣ್ಣ ವಿಚಾರವೇನಲ್ಲ. ಸದ್ಯಕ್ಕೆ ಈ ಬಂಡಾಯದ ಲೆಕ್ಕಾಚಾರಗಳು ತೆರೆಮರೆಯಲ್ಲೇ ಇದ್ದು, ಮುಂಬರುವ ದಿನಗಳಲ್ಲಿ ಇದು ತೃಣಮೂಲ ಕಾಂಗ್ರೆಸ್‌ನ ಅಧಿಕೃತ ವಿಭಜನೆಗೆ ಕಾರಣವಾಗುತ್ತಾ ಅಥವಾ ದೀದಿ ಎಂದಿನಂತೆ ತಮ್ಮ ಬಲಿಷ್ಠ ರಾಜಕೀಯ ತಂತ್ರದ ಮೂಲಕ ಬಂಡಾಯವನ್ನು ಶಮನಗೊಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಏನೇ ಆದರೂ, ಈ ಬೆಳವಣಿಗೆಯು ಪಶ್ಚಿಮ ಬಂಗಾಳದಲ್ಲಿ ದೀದಿ ಸಾಮ್ರಾಜ್ಯದ ಭವಿಷ್ಯದ ದಿಕ್ಸೂಚಿಯನ್ನು ಬದಲಾಯಿಸುವುದಂತೂ ಖಂಡಿತ(ಏಜೆನ್ಸೀಸ್​).