ನವದೆಹಲಿ: ಸಿಖ್ರ ಗುರುದ್ವಾರ ಪ್ರವೇಶಿಸಲು ನಿರಾಕರಿಸಿದ ಆರೋಪದ ಮೇಲೆ ಸೇವೆಯಿಂದ ವಜಾಗೊಂಡಿರುವ ಕ್ರಿಶ್ಚಿಯನ್ ಸೇನಾಧಿಕಾರಿಯ, ವಜಾಗೊಳಿಸುವಿಕೆಯ ಸೇನೆಯ ನಿರ್ಧಾರವನ್ನು ಮಂಗಳವಾರ(ನ. 25) ಎತ್ತಿ ಹಿಡಿದ ಸುಪ್ರೀಂಕೋರ್ಟ್(Supreme Court), ಅಧಿಕಾರಿಯನ್ನು ದುಷ್ಟ ವ್ಯಕ್ತಿ, ಅಯೋಗ್ಯ ಎಂದು ಹಿಗ್ಗಾಮುಗ್ಗಾ ಜಾಡಿಸಿದೆ.
2017ರಲ್ಲಿ ನಿಯೋಜನೆಗೊಂಡು ಸಿಖ್ ಸ್ಕ್ವಾಡ್ರನ್‌ಗೆ ನಿಯೋಜನೆಗೊಂಡ ಲೆಫ್ಟಿನೆಂಟ್ ಸ್ಯಾಮ್ಯುಯೆಲ್ ಕಮಲೇಶನ್, ಕಡ್ಡಾಯ ರೆಜಿಮೆಂಟಲ್ ಪೆರೇಡ್‌ಗಳ ಸಮಯದಲ್ಲಿ ಧಾರ್ಮಿಕ ಸ್ಥಳಗಳ ಒಳಭಾಗವನ್ನು ಪ್ರವೇಶಿಸಲು ನಿರಾಕರಿಸಿದ್ದಕ್ಕಾಗಿ ಸೇನೆಯಿಂದ ಶಿಸ್ತು ಕ್ರಮವಾಗಿ ಅವರನ್ನು 2021ರಲ್ಲಿ ವಜಾಗೊಳಿಸಿತ್ತು. ಈ ನಿರ್ಧಾರವನ್ನು ಪ್ರಶ್ನಿಸಿ ಅವರು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲಾ ಬಾಗ್ಚಿ ಅವರಿದ್ದ ಪೀಠ, ತನ್ನ ಅಧೀನದಲ್ಲಿರುವ ಸಿಖ್ ಸೈನಿಕರ ನಂಬಿಕೆಗೆ ಗೌರವ ತೋರಿಸಲು ವಿಫಲವಾದ ಕಾರಣ ಮಾಜಿ ಕ್ರಿಶ್ಚಿಯನ್ ಸೇನಾಧಿಕಾರಿ ಸ್ಯಾಮ್ಯುಯೆಲ್ ಕಮಲೇಶನ್ ಅವರನ್ನು ಸೇನೆಯಿಂದ ತೆಗೆದುಹಾಕುವ ನಿರ್ಧಾರವನ್ನು ಎತ್ತಿ ಹಿಡಿದು, ಅವರ ನಡವಳಿಕೆಯು ಮಿಲಿಟರಿ ಶಿಸ್ತಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿತು.
ನಿಮ್ಮ ಪ್ರವೇಶ ನಿರಾಕರಣೆಯು ಅಧೀನ ಅಧಿಕಾರಿಗಳ ಧಾರ್ಮಿಕ ನಂಬಿಕೆಗಳನ್ನು ಅಗೌರವಗೊಳಿಸುವುದಿಲ್ಲವೇ?, ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದೀರಿ? ಇದಕ್ಕಾಗಿಯೇ ನಿಮ್ಮನ್ನು ಹೊರಹಾಕಬೇಕಿತ್ತು. ಇದು ಸೇನಾ ಅಧಿಕಾರಿಯ ಅತ್ಯಂತ ಘೋರವಾದ ಅಶಿಸ್ತು. ನಾಯಕರು ಮಾದರಿಯಾಗಿ ಮುನ್ನಡೆಸಬೇಕು. ನೀವು ನಿಮ್ಮ ಸೈನಿಕರನ್ನು ಅವಮಾನಿಸುತ್ತಿದ್ದೀರಿ ಎಂದು ಖಾರವಾಗಿ ಹೇಳಿತು.
ಕಮಲೇಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ತಮ್ಮ ಕಕ್ಷಿದಾರರು ದೇವಾಲಯದ ಅತ್ಯಂತ ಒಳಗಿನ ಗರ್ಭಗುಡಿಗೆ ಪ್ರವೇಶಿಸಲು ನಿರಾಕರಿಸಿದ್ದರು, ಮತ್ತು ಒಂದೇ ಒಂದು ನಿರಾಕರಣೆಗಾಗಿ ವಜಾಗೊಳಿಸಲಾಗಿದೆ. ಆ ಅಧಿಕಾರಿ ಎಲ್ಲಾ ಬಹು ಧರ್ಮದ ಸ್ಥಳ ಮತ್ತು ರೆಜಿಮೆಂಟಲ್ ಕಾರ್ಯಕ್ರಮಗಳಲ್ಲಿ ಗೌರವಯುತವಾಗಿ ಭಾಗವಹಿಸಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.
ಶಿಸ್ತುಬದ್ಧ ಪಡೆಯಲ್ಲಿ ಈ ರೀತಿಯ ದೌರ್ಜನ್ಯದ ನಡವಳಿಕೆಗೆ ಅವಕಾಶವಿದೆಯೇ? ಎಂದು ಪ್ರಶ್ನಿಸಿದ ಸಿಜೆಐ, ಒಬ್ಬ ಸೇನಾ ನಾಯಕ ತನ್ನ ಸೈನಿಕರೊಂದಿಗೆ ಅವರು ಪವಿತ್ರವೆಂದು ಪರಿಗಣಿಸುವ ಸ್ಥಳಕ್ಕೆ ಹೋಗಲು ಹೇಗೆ ನಿರಾಕರಿಸುತ್ತಾನೆ ಎಂದು ಕೇಳಿದ್ದಾರೆ.
ಗೋಪಾಲ್ ಶಂಕರನಾರಾಯಣನ್ ಅವರು ತಮ್ಮ ಕಕ್ಷಿದಾರರನ್ನು 'ಸರ್ವ ಧರ್ಮ ಸ್ಥಳ'ವಿಲ್ಲದೆ ಕೇವಲ ಗುರುದ್ವಾರ ಮತ್ತು ದೇವಾಲಯವಿರುವ ಸ್ಥಳದಲ್ಲಿ ನಿಯೋಜಿಸಲಾಗಿದೆ. ಏಕದೇವತಾವಾದಿ ನಂಬಿಕೆಯ ಅನುಯಾಯಿಯಾಗಿದ್ದ ಸ್ಯಾಮ್ಯುಯೆಲ್ ಕಮಲೇಶನ್ ಗರ್ಭಗುಡಿಗೆ ಪ್ರವೇಶಿಸಲು ನಿರಾಕರಿಸಿದರು. ಅವರು ದುರಹಂಕಾರಿಯಲ್ಲ. ಇತರ ಎಲ್ಲ ವಿಷಯಗಳಲ್ಲಿಯೂ ಅವರು ಶಿಸ್ತಿನ ವ್ಯಕ್ತಿ ಎಂದು ವಾದಿಸಿದ್ದಾರೆ.
ಇನ್ನೂ ಗುರುದ್ವಾರ ನಿರಾಕರಣೆಯು ತಮ್ಮ ಕ್ರಿಶ್ಚಿಯನ್ ನಂಬಿಕೆಗಳಿಗೆ ಬದ್ಧತೆಯಿಂದ ಮಾತ್ರವಲ್ಲದೆ, ಅವರ ಸೈನಿಕರ ಧಾರ್ಮಿಕ ಭಾವನೆಗಳನ್ನು ಕೆರಳಿಸುವುದನ್ನು ತಪ್ಪಿಸುವ ಬಯಕೆಯಿಂದಲೂ ನಿರ್ಧಾರ ಮಾಡಿದ್ದೆ ಎಂದು ಅಧಿಕಾರಿ ವಾದಿಸಿದ್ದಾರೆ.
ಇನ್ನೂ ಸೇನೆಯೂ ಕಮಾಂಡರ್‌ಗಳು ಮತ್ತು ಕ್ರಿಶ್ಚಿಯನ್ ಪಾದ್ರಿಗಳು ಅವರ ಧಾರ್ಮಿಕ ತತ್ವಗಳನ್ನು ಉಲ್ಲಂಘಿಸುವುದಿಲ್ಲ ಎಂದು ಭರವಸೆ ನೀಡಿದ ನಂತರವೂ ಅವರು ನಿರಾಕರಿಸುತ್ತಲೇ ಇದ್ದರು. ಅವರ ಈ ನಡವಳಿಕೆಯು ಘಟಕದ ಒಗ್ಗಟ್ಟು ಮತ್ತು ಸೈನ್ಯದ ನೈತಿಕತೆಗೆ ಧಕ್ಕೆ ತಂದಿದೆ ಎಂದು ಸೇನೆ ವಜಾಗೊಳಿಸಿದೆ (ಏಜೆನ್ಸೀಸ್).