Draupadi Murmu 
ದೇಶ

ನನ್ನ ಮೇಲೆ ಅಸಮಾಧಾನವಿದೆಯೇ? ದೀದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ನೇರ ಪ್ರಶ್ನೆ! | Draupadi Murmu

ಪ್ರಮುಖ ಮುಖ್ಯಾಂಶಗಳು

  • ಶಿಷ್ಟಾಚಾರದ ಸಂಘರ್ಷ: ರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಮಮತಾ ಗೈರು; ಪ್ರೋಟೋಕಾಲ್ ಉಲ್ಲಂಘನೆ ಆರೋಪ.
  • ಬುಡಕಟ್ಟು ಅಸ್ತ್ರ: ಸಂತಾಲ್ ಸಮುದಾಯದ ಅಭಿವೃದ್ಧಿಯ ವಿಚಾರವಾಗಿ ಕೇಂದ್ರ-ರಾಜ್ಯದ ನಡುವೆ ವಾಕ್ಸಮರ.
  • ರಾಜಕೀಯ ಆರೋಪ: ರಾಷ್ಟ್ರಪತಿಗಳು ಬಿಜೆಪಿಯ ಕೈಗೊಂಬೆಯಂತೆ ಮಾತನಾಡುತ್ತಿದ್ದಾರೆ ಎಂದ ಮಮತಾ ಬ್ಯಾನರ್ಜಿ.
ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಕಣ ರಂಗೇರಿದೆ. ಉತ್ತರ ಬಂಗಾಳಕ್ಕೆ ಭೇಟಿ ನೀಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು(Draupadi Murmu) ಅವರು ಮಮತಾ ಬ್ಯಾನರ್ಜಿ ಸರ್ಕಾರವನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರೋಟೋಕಾಲ್ ಉಲ್ಲಂಘನೆ ಮತ್ತು ಬುಡಕಟ್ಟು ಸಮುದಾಯದ ನಿರ್ಲಕ್ಷ್ಯದ ಕುರಿತು ರಾಷ್ಟ್ರಪತಿಗಳು ವ್ಯಕ್ತಪಡಿಸಿದ ಅಸಮಾಧಾನಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಪ್ರೋಟೋಕಾಲ್ ಉಲ್ಲಂಘನೆಗೆ ರಾಷ್ಟ್ರಪತಿ ಗರಂ!

ಉತ್ತರ ಬಂಗಾಳದಲ್ಲಿ ನಡೆದ ಅಂತರಾಷ್ಟ್ರೀಯ ಸಂತಾಲ್ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ರಾಷ್ಟ್ರಪತಿಗಳಿಗೆ ಸ್ವಾಗತ ಕೋರಲು ಮುಖ್ಯಮಂತ್ರಿಯಾಗಲಿ ಅಥವಾ ಅವರ ಸಂಪುಟದ ಯಾವುದೇ ಸಚಿವರಾಗಲಿ ಉಪಸ್ಥಿತರಿರಲಿಲ್ಲ. ಇದನ್ನು ಪ್ರಶ್ನಿಸಿದ ರಾಷ್ಟ್ರಪತಿಗಳು, "ಮಮತಾ ಬ್ಯಾನರ್ಜಿ ನನ್ನ ಮೇಲೆ ಅಸಮಾಧಾನಗೊಂಡಿದ್ದಾರೆಯೇ ಎಂದು ನನಗೆ ತಿಳಿದಿಲ್ಲ. ಅದಕ್ಕಾಗಿಯೇ ಅವರು ಅಥವಾ ಅವರ ಸಚಿವರು ಬರಲಿಲ್ಲವೇ? ನಾನು ಕೂಡ ಬಂಗಾಳದ ಮಗಳು, ಮಮತಾ ನನಗೆ ತಂಗಿಯಂತೆ. ಕಾರ್ಯಕ್ರಮದ ಸ್ಥಳವನ್ನು ಕೂಡ ಕೊನೆಯ ಕ್ಷಣದಲ್ಲಿ ಬದಲಿಸಲಾಗಿದೆ, ಇದು ಯಾಕೆ ಎಂದು ತಿಳಿಯುತ್ತಿಲ್ಲ," ಎಂದು ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ತಲುಪುತ್ತಿಲ್ಲ - ರಾಷ್ಟ್ರಪತಿಗಳ ಆರೋಪ

ಸಂತಾಲ್ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು, "ಕೇಂದ್ರ ಸರ್ಕಾರವು ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಹೊಸ ಗುರುತು ನೀಡಿದೆ. ಆದರೆ ಬಂಗಾಳದಲ್ಲಿ ಬುಡಕಟ್ಟು ಜನಾಂಗಕ್ಕೆ ಸೌಲಭ್ಯಗಳು ತಲುಪುತ್ತಿವೆಯೇ? ನನಗೆ ಹಾಗೆ ಅನಿಸುತ್ತಿಲ್ಲ. ಜನರು ಇಲ್ಲಿಗೆ ಬರದಂತೆ ತಡೆಯಲಾಗುತ್ತಿದೆ. ಕೆಲವು ಶಕ್ತಿಗಳಿಗೆ ಸಂತಾಲರು ಶಿಕ್ಷಣ ಪಡೆದು ಶಕ್ತಿಯುತರಾಗುವುದು ಇಷ್ಟವಿಲ್ಲ ಎನಿಸುತ್ತದೆ," ಎಂದು ರಾಜ್ಯ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಆಕ್ರೋಶ

ರಾಷ್ಟ್ರಪತಿಗಳ ಈ ಹೇಳಿಕೆಯ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದು, "ಟಿಎಂಸಿ ಸರ್ಕಾರವು ಸಂತಾಲ್ ಸಂಸ್ಕೃತಿಯನ್ನು ಅತ್ಯಂತ ಹಗುರವಾಗಿ ಕಾಣುತ್ತಿದೆ ಮತ್ತು ರಾಷ್ಟ್ರಪತಿಗಳಿಗೆ ಅವಮಾನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ನಾಚಿಕೆಗೇಡಿನ ಸಂಗತಿ," ಎಂದು ಕಿಡಿಕಾರಿದ್ದಾರೆ. ಗೃಹ ಸಚಿವ ಅಮಿತ್ ಶಾ ಕೂಡ, ಟಿಎಂಸಿ ವರ್ತನೆಯು ಅರಾಜಕತೆಯ ಹೊಸ ಕೀಳುಮಟ್ಟವನ್ನು ತಲುಪಿದೆ ಎಂದು ಟೀಕಿಸಿದ್ದಾರೆ.

ಇದು ಬಿಜೆಪಿಯ ರಾಜಕೀಯ: ಮಮತಾ ಬ್ಯಾನರ್ಜಿ ತಿರುಗೇಟು

ರಾಷ್ಟ್ರಪತಿಗಳ ಹೇಳಿಕೆಗೆ ಕೋಲ್ಕತ್ತಾದಿಂದಲೇ ಉತ್ತರಿಸಿದ ಮಮತಾ ಬ್ಯಾನರ್ಜಿ, "ರಾಷ್ಟ್ರಪತಿಗಳ ಹುದ್ದೆಗೆ ಗೌರವ ತರದ ಹೇಳಿಕೆಗಳನ್ನು ನೀಡದಂತೆ ನಾನು ವಿನಂತಿಸುತ್ತೇನೆ. ನೀವು ಕೇವಲ ಒಂದು ಸಮುದಾಯದ ಬಗ್ಗೆ ಮಾತನಾಡುತ್ತಿದ್ದೀರಿ, ಉಳಿದವರ ಬಗ್ಗೆಯಲ್ಲ. ಚುನಾವಣಾ ಸಮಯದಲ್ಲಿ ಬಿಜೆಪಿಯ ಸಲಹೆಯಂತೆ ರಾಜಕೀಯ ಆಟವಾಡಬೇಡಿ. ನೀವು ವರ್ಷಕ್ಕೊಮ್ಮೆ ಬಂದರೆ ಸ್ವಾಗತಿಸಬಹುದು, ಆದರೆ ಪದೇ ಪದೇ ಚುನಾವಣಾ ಸಮಯದಲ್ಲಿ ಬಂದರೆ ಎಲ್ಲಾ ಕಾರ್ಯಕ್ರಮಗಳಿಗೆ ಹಾಜರಾಗಲು ನನಗೂ ಸಾಧ್ಯವಿಲ್ಲ," ಎಂದು ಆಕ್ರೋಶ ಹೊರಹಾಕಿದ್ದಾರೆ.

ಟಿಎಂಸಿ ನೀಡಿದ ಅಭಿವೃದ್ಧಿ ಪಟ್ಟಿ

ರಾಷ್ಟ್ರಪತಿಗಳ ಹೇಳಿಕೆ 'ತಪ್ಪು ಮಾಹಿತಿ'ಯಿಂದ ಕೂಡಿದೆ ಎಂದಿರುವ ಟಿಎಂಸಿ, ತನ್ನ ಸಾಧನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 'ಲಕ್ಷ್ಮೀರ್ ಭಂಡಾರ್' ಯೋಜನೆಯಡಿ ಬುಡಕಟ್ಟು ಮಹಿಳೆಯರಿಗೆ ಮಾಸಿಕ 1,700 ರೂ. ಸಹಾಯಧನ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ಶಾಲೆಗಳ ಸ್ಥಾಪನೆಯಂತಹ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದಿದ್ದಾರೆ,(ಏಜೆನ್ಸೀಸ್​).