ಪಾಟ್ನಾ: ಬಿಹಾರ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಪ್ರಚಾರ ಮತ್ತು ಕೆಲಸ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆ ಜೆಡಿಯು ತನ್ನ ಮೊಕಾಮಾ ಶಾಸಕ ಅನಂತ್ ಸಿಂಗ್ರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದೆ.
ಇತ್ತೀಚಿಗೆ ಜರುಗಿದ ವಿಧಾನ ಪರಿಷತ್ ಚುನಾವಣೆಯಲ್ಲಿ ಶಾಸಕ ಅನಂತ್ ಸಿಂಗ್, ಜೆಡಿಯು ಅಭ್ಯರ್ಥಿ ನೀರಜ್ ಕುಮಾರ್ ಅವರನ್ನು ವಿರೋಧಿಸಿ ಜಾನ್ ಸುರಾಜ್ ಅಭ್ಯರ್ಥಿ ಅನುಜ್ ಸಿಂಗ್ ಅವರನ್ನು ಬೆಂಬಲಿಸಿ ಅವರ ಪರ ಪ್ರಚಾರ ನಡೆಸಿದ್ದರು. ಈ ಹಿನ್ನೆಲೆ ಪಕ್ಷವರನ್ನು ಅವರನ್ನು ಉಚ್ಚಾಟಿಸಿದ್ದಲ್ಲದೇ, ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿದೆ.
ಬಿಹಾರ ಜೆಡಿ(ಯು) ಅಧ್ಯಕ್ಷ ಉಮೇಶ್ ಸಿಂಗ್ ಕುಶ್ವಾಹ ಹೊರಡಿಸಿದ ಆದೇಶದಲ್ಲಿ, ಸಿಂಗ್ ಅವರು ತಮ್ಮ ಸೂಚನೆಗಳನ್ನು ಪದೇ ಪದೇ ಧಿಕ್ಕರಿಸಿದ್ದಾರೆ. ಮತ್ತು ಪಕ್ಷದ ಉನ್ನತ ನಾಯಕತ್ವದ ವಿರುದ್ಧ ಅನುಚಿತ ಮತ್ತು ಅವಮಾನಕರ ಭಾಷೆಯನ್ನು ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ಸಿಂಗ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಪಕ್ಷವು ವಿಧಾನಸಭಾ ಸ್ಪೀಕರ್ ಪ್ರೇಮ್ ಕುಮಾರ್ ಅವರಿಗೆ ಔಪಚಾರಿಕವಾಗಿ ಶಿಫಾರಸು ಮಾಡಲಿದೆ ಎಂದು ತಿಳಿಸಿದೆ.
ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷ ನಿತೀಶ್ ಕುಮಾರ್ ಮತ್ತು ಕಾರ್ಯಕಾರಿ ರಾಷ್ಟ್ರೀಯ ಅಧ್ಯಕ್ಷ ಸಂಜಯ್ ಕುಮಾರ್ ಝಾ ಅವರ ಸಂದೇಶಗಳ ಹೊರತಾಗಿಯೂ ಸಿಂಗ್ ನೀರಜ್ ಕುಮಾರ್ ವಿರುದ್ಧ ಪ್ರಚಾರವನ್ನು ನಡೆಸಿದ್ದರು. ಈ ವಿಷಯದ ಬಗ್ಗೆ ಲಾಲನ್ ಸಿಂಗ್ ಮೌನವಾಗಿದ್ದರು. ಇಂದು ಲಾಲನ್ ಸಿಂಗ್ ನಿತೀಶ್ ಕುಮಾರ್ ಅವರನ್ನು ಭೇಟಿಯಾದ ಬಳಿಕ ಸಿಂಗ್ರನ್ನುಉಚ್ಚಾಟಿಸುವ ನಿರ್ಧಾರ ಹೊರಬಿದ್ದಿದೆ.
ಮಾಜಿ ಶಾಸಕಿ ಮತ್ತು ಸಿಂಗ್ ಅವರ ಪತ್ನಿ ನೀಲಂ ದೇವಿಯನ್ನು ಸಹ ಆರು ವರ್ಷಗಳ ಕಾಲ ಪಕ್ಷದಿಂದ ಹೊರಹಾಕಲಾಗಿದ್ದು, ಅವರ ಪ್ರಾಥಮಿಕ ಸದಸ್ಯತ್ವವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಇತ್ತೀಚೆಗೆ ಸಿಂಗ್ ನಿತೀಶ್ ಕುಮಾರ್ ಅವರ ರಾಜಕೀಯದ ಆರಂಭದ ದಿನಗಳಲ್ಲಿ ಅವರಿಗಾಗಿ ನಾನು 9 ಕೊಲೆಗಳನ್ನು ಮಾಡಿಸಿದ್ದ ಎಂದು ಹೇಳಿದ್ದರು. ಇದು ವಿವಾದವಾಗುತ್ತಿದ್ದಂತೆ ಉಲ್ಟಾ ಹೊಡೆದಿದ್ದರು (ಏಜೆನ್ಸೀಸ್).