ರಾಜಸ್ಥಾನ ವಿವಿಯಲ್ಲಿ ಭಾರಿ ಯಡವಟ್ಟು: ಪ್ರಶ್ನೆ ಪತ್ರಿಕೆ ಬದಲು ಕೀ ಆನ್ಸರ್ ಹಂಚಿಕೆ, ಎಂಎ ಪರೀಕ್ಷೆಯೇ ರದ್ದು! Answer Keys
- ರಾಜಸ್ಥಾನ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಕಾಣದ ಘೋರ ಯಡವಟ್ಟು!
- ಪರೀಕ್ಷಾ ಹಾಲ್‌ನಲ್ಲಿ ವಿತರಿಸಿದ ಪೇಪರ್ ನೋಡಿ ವಿದ್ಯಾರ್ಥಿಗಳೇ ಶಾಕ್
- ಪ್ರಶ್ನೆ ಪತ್ರಿಕೆ ಬದಲು ನೇರ 'ಉತ್ತರ'ಗಳನ್ನೇ ವಿತರಿಸಿದ ಇನ್ವಿಜಿಲೇಟರ್
- ರಾಜಸ್ಥಾನ ವಿಶ್ವವಿದ್ಯಾಲಯದ ಎಂಎ ಪರೀಕ್ಷೆ ಕೊನೇ ಕ್ಷಣದಲ್ಲಿ ರದ್ದು!
ಜೈಪುರ: ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಪರೀಕ್ಷಾ ಮಂಡಳಿಯ ಘೋರ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ. ಎಂಎ ಸೋಷಿಯಾಲಜಿ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆಗಳನ್ನು ನೀಡುವ ಬದಲಾಗಿ ನೇರವಾಗಿ ಉತ್ತರಗಳ ಕೀಲಿ ಕೈಯನ್ನೇ (Answer Keys) ಹಂಚಲಾಗಿದೆ!
ವಿಶ್ವವಿದ್ಯಾಲಯದ ಇತಿಹಾಸದಲ್ಲೇ ನಡೆದ ಈ ಪ್ರಮುಖ ಪರೀಕ್ಷಾ ಲೋಪದಿಂದಾಗಿ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಪರೀಕ್ಷೆಯನ್ನು ರದ್ದುಗೊಳಿಸಿದ್ದಾರೆ. ಸದ್ಯ ಈ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಮರುಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಗಂಭೀರ ಯಡವಟ್ಟಿನ ಕುರಿತು ಉನ್ನತ ಮಟ್ಟದ ತನಿಖೆಗೆ ವಿಶ್ವವಿದ್ಯಾಲಯ ಆದೇಶಿಸಿದೆ.
ಜೈಪುರದ ಪರೀಕ್ಷಾ ಕೇಂದ್ರವೊಂದರಲ್ಲಿ ‘ಇಂಡಿಯನ್ ಸೊಸೈಟಿ’ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಪರೀಕ್ಷೆಯ ವೇಳೆ ಈ ಘಟನೆ ವರದಿಯಾಗಿದೆ. ಪರೀಕ್ಷಾ ಕೊಠಡಿಯಲ್ಲಿ ವಿತರಿಸಲಾದ ಪತ್ರಿಕೆಗಳಲ್ಲಿ ಪ್ರಶ್ನೆಗಳ ಬದಲಿಗೆ ವಿವರವಾದ ಉತ್ತರಗಳು ಮತ್ತು ವಿವರಣಾತ್ಮಕ ಮಾಹಿತಿಗಳಿರುವುದನ್ನು ಕಂಡು ವಿದ್ಯಾರ್ಥಿಗಳು ಆಶ್ಚರ್ಯಚಕಿತರಾಗಿದ್ದಾರೆ. ಇದರ ಬೆನ್ನಲ್ಲೇ ಸುಮಾರು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ತೀವ್ರ ಗೊಂದಲಕ್ಕೊಳಗಾಗಿ, ಪರೀಕ್ಷಾ ಕೇಂದ್ರದ ಆವರಣದಲ್ಲೇ ಪ್ರತಿಭಟನೆ ನಡೆಸಲು ಆರಂಭಿಸಿದರು. ಅಷ್ಟೇ ಅಲ್ಲದೆ, ವಿತರಿಸಲಾದ ಆ ಉತ್ತರ ಪತ್ರಿಕೆಗಳ ಕೆಲವು ಭಾಗಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಸಿದ್ಧಪಡಿಸಿದ ಪ್ರಿ-ರಿಟನ್ ಉತ್ತರಗಳಂತೆ ಕಾಣಿಸುತ್ತಿದ್ದವು ಎಂದು ಕೆಲವು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.
ಈ ಘೋರ ಯಡವಟ್ಟು ತಕ್ಷಣವೇ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿದ್ಯಾರ್ಥಿಗಳಿಗೆ ಹಂಚಲಾಗಿದ್ದ ಆ ಉತ್ತರ ಪತ್ರಿಕೆಗಳನ್ನು ವಾಪಸ್ ಪಡೆದು ಪರೀಕ್ಷೆಯನ್ನು ಅರ್ಧಕ್ಕೆ ನಿಲ್ಲಿಸಿದರು. ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಗೌರವವನ್ನು ಕಾಯ್ದುಕೊಳ್ಳುವ ಸಲುವಾಗಿ ವಿಶ್ವವಿದ್ಯಾಲಯವು ತಕ್ಷಣವೇ ಆ ಪರೀಕ್ಷೆಯನ್ನು ರದ್ದುಗೊಳಿಸಿತು.
ಈ ಕುರಿತು ಮಾಹಿತಿ ನೀಡಿರುವ ಪರೀಕ್ಷಾ ನಿಯಂತ್ರಣಾಧಿಕಾರಿ ರಾಕೇಶ್ ರಾವ್ ಅವರು, ವಿಷಯದ ಗಂಭೀರತೆಯನ್ನು ಪರಿಗಣಿಸಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದ್ದು, 2026ರ ಜೂನ್ 27ಕ್ಕೆ ಮರುಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಈ ತಪ್ಪು ಹೇಗೆ ಸಂಭವಿಸಿತು ಎಂಬುದನ್ನು ಪತ್ತೆಹಚ್ಚಲು ಮತ್ತು ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲು ತನಿಖೆ ಪ್ರಗತಿಯಲ್ಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಶ್ವವಿದ್ಯಾಲಯವು ತನ್ನ ಅಧಿಕೃತ ಪ್ರಕಟಣೆಯಲ್ಲಿ "ಅನಿವಾರ್ಯ ಕಾರಣಗಳಿಂದಾಗಿ" ಪರೀಕ್ಷೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದು, ಆಂತರಿಕ ತನಿಖೆಗೆ ಆದೇಶಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಮುದ್ರಣ ಅಥವಾ ಪ್ಯಾಕೇಜಿಂಗ್ ಪ್ರಕ್ರಿಯೆಯಲ್ಲಿ ಪ್ರಶ್ನೆ ಪತ್ರಿಕೆಗಳು ಮತ್ತು ಕೀ ಆನ್ಸರ್‌ಗಳಿದ್ದ ಸೀಲ್ಡ್ ಪ್ಯಾಕೆಟ್‌ಗಳು ಪರಸ್ಪರ ಬದಲಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಪರೀಕ್ಷಾ ಪ್ಯಾಕೆಟ್‌ಗಳನ್ನು ಪರೀಕ್ಷೆಯ ಸಮಯದಲ್ಲಿ ಮಾತ್ರ ತೆರೆಯಲಾಗುವುದರಿಂದ, ಪರೀಕ್ಷೆ ಆರಂಭವಾಗುವವರೆಗೂ ಈ ಲೋಪ ಯಾರಿಗೂ ತಿಳಿಯದೆ ಹಾಗೇ ಉಳಿದುಕೊಂಡಿತ್ತು ಎನ್ನಲಾಗಿದೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.
ಆದರೆ, ಈ ಘಟನೆಯಿಂದಾಗಿ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ಶೈಕ್ಷಣಿಕ ವೇಳಾಪಟ್ಟಿಗೆ ಅಡ್ಡಿಯುಂಟಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಯ ಪತ್ರಿಕೆಗಳನ್ನು ವಾಪಸ್ ಪಡೆದ ನಂತರ, ಈ ವಿಷಯವನ್ನು ಸಾರ್ವಜನಿಕವಾಗಿ ಎಲ್ಲಿಯೂ ಚರ್ಚಿಸದಂತೆ ಅಧಿಕಾರಿಗಳು ತಮಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಎಂದು ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆ ಭಾರಿ ಟೀಕೆಗೆ ಒಳಗಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಪರೀಕ್ಷಾ ನಿರ್ವಹಣಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 'ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ' (NSUI) ಪ್ರತಿನಿಧಿಗಳು ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಈ ಲೋಪಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿವೆ.
ದೇಶಾದ್ಯಂತ ಸ್ಪರ್ಧಾತ್ಮಕ ಮತ್ತು ವಿಶ್ವವಿದ್ಯಾಲಯ ಮಟ್ಟದ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇಲಾಖಾ ವೈಫಲ್ಯಗಳು ವರದಿಯಾಗುತ್ತಿರುವ ಬೆನ್ನಲ್ಲೇ ಈ ವಿವಾದ ಸೃಷ್ಟಿಯಾಗಿದೆ. ಸದೃಢ ಪರೀಕ್ಷಾ ಪ್ರೋಟೋಕಾಲ್ ಹಾಗೂ ಗುಣಮಟ್ಟದ ನಿಯಂತ್ರಣ ವ್ಯವಸ್ಥೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ನೆನಪಿಸಿದೆ ಎಂದು ಶಿಕ್ಷಣ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ರಚಿಸಲಾಗಿರುವ ತನಿಖಾ ಸಮಿತಿಯು ಮುಂಬರುವ ದಿನಗಳಲ್ಲಿ ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದ್ದು, ವರದಿ ಬಂದ ತಕ್ಷಣ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ವಿಶ್ವವಿದ್ಯಾಲಯ ಮುಂದಾಗಿದೆ, (ಏಜೆನ್ಸೀಸ್).