ಯೂಟ್ಯೂಬರ್ ಅನುರಾಗ್ ದೋಭಾಲ್ (Anurag Dobhal) 
ದೇಶ

ಅನುರಾಗ್ ದೋಭಾಲ್ ಜೀವನದಲ್ಲಿ ಮತ್ತೊಂದು ತಿರುವು: ಯೂಟ್ಯೂಬರ್ ಮಗನೊಂದಿಗೆ ಸಂಬಂಧ ಕಳೆದುಕೊಂಡ ತಂದೆ! Anurag Dobhal

ನವದೆಹಲಿ: ಯೂಟ್ಯೂಬ್ ಜಗತ್ತಿನ ಜನಪ್ರಿಯ ಮುಖ, ಮೋಟೋ ವ್ಲಾಗರ್ ಹಾಗೂ ಬಿಗ್ ಬಾಸ್ 17ರ ಸ್ಪರ್ಧಿ ದಿ ಯುಕೆ07 ರೈಡರ್ ಖ್ಯಾತಿಯ ಅನುರಾಗ್ ದೋಭಾಲ್ (Anurag Dobhal) ಇದೀಗ ಕಠಿಣ ಪರಿಸ್ಥಿತಿಯಲ್ಲಿದ್ದಾರೆ. ಆತ್ಮಹತ್ಯೆಯ ಪ್ರಯತ್ನ, ಭೀಕರ ಕಾರು ಅಪಘಾತ ಹಾಗೂ ಕುಟುಂಬದೊಂದಿಗಿನ ಮನಸ್ತಾಪದಂತಹ ಸರಣಿ ಘಟನೆಗಳು ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿವೆ.

ಭಾವನಾತ್ಮಕ ವಿಡಿಯೋ; ಆತ್ಮಹತ್ಯೆ ಯತ್ನ

ಕೆಲವು ದಿನಗಳ ಹಿಂದೆ ಅನುರಾಗ್ ಅವರು ಮೌತ್ ಕೆ ಜಿಮ್ಮೆದಾರ್ ಎಂಬ ಶೀರ್ಷಿಕೆಯೊಂದಿಗೆ ಒಂದು ವಿಡಿಯೋ ಪೋಸ್ಟ್ ಮಾಡಿದ್ದರು. ಆ ವಿಡಿಯೋದಲ್ಲಿ ಅವರು ಕಣ್ಣೀರು ಹಾಕುತ್ತಾ, ತಮ್ಮ ಕುಟುಂಬದ ಒಳಗಿನ ಕಲಹಗಳ ಬಗ್ಗೆ ಮಾತನಾಡಿದ್ದರು. ತಮ್ಮ ಸಾವಿಗೆ ಕೆಲ ಕುಟುಂಬದವರೇ ನೇರ ಹೊಣೆ ಎಂದು ಅವರು ಗಂಭೀರ ಆರೋಪ ಮಾಡಿದ್ದರು. ಈ ವಿಡಿಯೋ ಹೊರಬಿದ್ದ ಕೆಲವೇ ಹೊತ್ತಿನಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ಈ ಪ್ರಯತ್ನದ ನಡುವೆಯೇ ದೆಹಲಿ-ಮೀರಟ್​ ಹೆದ್ದಾರಿಯಲ್ಲಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದೆ. ಸದ್ಯ ಅವರು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರ ಮ್ಯಾನೇಜರ್ ರೋಹಿತ್ ಪಾಂಡೆ, ಅನುರಾಗ್ ಶಸ್ತ್ರಚಿಕಿತ್ಸೆಯಲ್ಲಿದ್ದಾರೆ, ದಯವಿಟ್ಟು ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ವಿನಂತಿಸಿದ್ದಾರೆ.

ಮಗನೊಂದಿಗೆ ಸಂಬಂಧ ಕಡಿದುಕೊಂಡ ತಂದೆ!

ಈ ವಿವಾದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು, ಸ್ಥಳೀಯ ಪತ್ರಿಕೆಯೊಂದರಲ್ಲಿ ಅನುರಾಗ್ ಅವರ ತಂದೆ ನೀಡಿರುವ ಪ್ರಕಟಣೆ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ನೋಟಿಸ್‌ನಲ್ಲಿ, ನನಗೆ ನನ್ನ ಮಗ ಅನುರಾಗ್ ಮತ್ತು ಸೊಸೆ ರಿತಿಕಾ ಚೌಹಾಣ್ ಅವರೊಂದಿಗೆ ಇನ್ನು ಮುಂದೆ ಯಾವುದೇ ಸಂಬಂಧವಿಲ್ಲ. ಭವಿಷ್ಯದಲ್ಲಿ ಅವರ ಯಾವುದೇ ಕ್ರಿಯೆಗಳಿಗೆ ನಮ್ಮ ಕುಟುಂಬ ಜವಾಬ್ದಾರಿಯಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಈ ಪ್ರಕಟಣೆ ನಿಜವೇ ಅಥವಾ ಸುಳ್ಳೇ ಎಂಬ ಚರ್ಚೆ ಒಂದು ಕಡೆ ನಡೆಯುತ್ತಿದ್ದರೆ, ಕುಟುಂಬದ ಈ ಕಠಿಣ ನಿರ್ಧಾರ ಎಲ್ಲರನ್ನು ಬೆಚ್ಚಿಬೀಳಿಸಿದೆ.
ಅಂತರ್ಜಾತಿ ವಿವಾಹವೇ ವಿವಾದದ ಮೂಲ?
ಅನುರಾಗ್ ತಮ್ಮ ವಿಡಿಯೋಗಳಲ್ಲಿ ಹೇಳಿಕೊಂಡಿರುವಂತೆ, ಈ ಎಲ್ಲಾ ಕಿತ್ತಾಟಗಳಿಗೆ ಅವರ ಅಂತರ್ಜಾತಿ ವಿವಾಹವೇ ಮೂಲ ಕಾರಣ. ಅವರು ರಿತಿಕಾ ಚೌಹಾಣ್ ಅವರನ್ನು ಮದುವೆಯಾಗಿದ್ದು, ಇದನ್ನು ಅನುರಾಗ್ ಅವರ ಪೋಷಕರು ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದರಂತೆ. ಕುಟುಂಬದವರ ಈ ವಿರೋಧವೇ ಅನುರಾಗ್ ಅವರನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದು, ಅವರು ಇಂತಹ ವಿಪರೀತ ನಿರ್ಧಾರಕ್ಕೆ ಬರುವಂತೆ ಮಾಡಿದೆ ಎಂದು ಅವರ ಹತ್ತಿರದ ಆಪ್ತರು ಹೇಳುತ್ತಿದ್ದಾರೆ.

ಅಭಿಮಾನಿಗಳ ಆತಂಕ

ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅನುರಾಗ್ ಅವರ ಈ ಸ್ಥಿತಿಯನ್ನು ಕಂಡು ಫ್ಯಾನ್ಸ್ ಕಂಗಾಲಾಗಿದ್ದಾರೆ. ಅನುರಾಗ್ ಭಾಯ್ ಬೇಗ ಗುಣಮುಖರಾಗಿ ಬನ್ನಿ, ಕುಟುಂಬದ ಸಮಸ್ಯೆ ಏನೇ ಇರಲಿ, ಆತ್ಮಹತ್ಯೆ ಪರಿಹಾರವಲ್ಲ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ,(ಏಜನ್ಸೀಸ್​).