ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರದಲ್ಲಿ ತಪಾಸಣೆ ವೇಳೆ ಆಕಸ್ಮಿಕವಾಗಿ ಮತ್ತೆ ಗ್ರೆನೇಡ್ ಸ್ಫೋಟ; ನಾಲ್ವರು ಸೈನಿಕರಿಗೆ ಗಂಭೀರ ಗಾಯ | grenade explosion

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ನೌಶೇರಾ ಸೆಕ್ಟರ್‌ನಲ್ಲಿ ಮಂಗಳವಾರ(ಜೂ. 16) ಮತ್ತೆ ದಿನನಿತ್ಯದ ಗಸ್ತು ಮತ್ತು ತಪಾಸಣೆ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡು(grenade explosion) ನಾಲ್ವರು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಕುಮಾವೂನ್ ರೆಜಿಮೆಂಟ್ ಘಟಕದ ಸೈನಿಕರು ದಿನನಿತ್ಯದ ಗಸ್ತು ನಡೆಸುತ್ತಿದ್ದಾಗ ಮಲ್ಟಿ-ಮೋಡ್ ಗ್ರೆನೇಡ್ ಆಕಸ್ಮಿಕವಾಗಿ ಸ್ಫೋಟಗೊಂಡಿದೆ ಎನ್ನಲಾಗಿದೆ. ಕರ್ತವ್ಯದಲ್ಲಿದ್ದ ಮೂವರು ಸೈನಿಕರು ಮತ್ತು ಓರ್ವ ಜೂನಿಯರ್ ಕಮಿಷನ್ಡ್ ಆಫೀಸರ್​ಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರ ಆರೋಗ್ಯ ಸ್ಥಿತಿಯ ಸಂಪೂರ್ಣ ವಿವರಗಳನ್ನು ನಿರೀಕ್ಷಿಸಲಾಗಿದ್ದು, ಇದು ವಾರದಲ್ಲಿ ನಡೆದ ಎರಡನೇ ಘಟನೆಯಾಗಿದೆ. ಸೇನಾ ಸಿಬ್ಬಂದಿ ಸಾಮಾನ್ಯವಾಗಿ ಗಡಿ ಪ್ರದೇಶದಲ್ಲಿ ಗಸ್ತು ತಿರುಗುತ್ತಾರೆ ಮತ್ತು ಮೇಲ್ವಿಚಾರಣೆ ಮಾಡುತ್ತಾರೆ. ಗಡಿಯಲ್ಲಿ ಇಂತಹ ತಪಾಸಣೆಗಳು ಸಾಮಾನ್ಯವಾಗಿದೆ. ರಾಜೌರಿ ಜಿಲ್ಲೆಯಲ್ಲಿ ಘಟನೆ ನಡೆದ ಪ್ರದೇಶವು ತುಂಬಾ ಸೂಕ್ಷ್ಮವಾಗಿದೆ.
ಇನ್ನೂ ಕೆಲವೊಮ್ಮೆ ಶಸ್ತ್ರಾಸ್ತ್ರಗಳ ಆಕಸ್ಮಿಕ ಸ್ಫೋಟಗಳಿಂದ ಸೈನಿಕರು ಸಾವನ್ನಪ್ಪುವ ಘಟನೆಗಳು ನಡೆಯುತ್ತವೆ. ಕಳೆದ ವಾರ ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಆಕಸ್ಮಿಕವಾಗಿ ಗ್ರೆನೇಡ್ ಸ್ಫೋಟಗೊಂಡಿತು. ಈ ಘಟನೆಯಲ್ಲಿ ಇಬ್ಬರು ಸೈನಿಕರು ಮೃತಪಟ್ಟಿದ್ದರು (ಏಜೆನ್ಸೀಸ್).