Bengal Booth Officer | ಮೃತ ಮಹಿಳೆ ರಿಂಕು 
ದೇಶ

Bengal Booth Officer | ಬಂಗಾಳದ ಬೂತ್​ ಮಟ್ಟದ ಅಧಿಕಾರಿ ಸಾವಿಗೆ ಶರಣು; ಆಕೆಗೆ ಈ ಆತಂಕವಿತ್ತು ಎಂದ ಕುಟುಂಬಸ್ಥರು!

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮತ್ತೊಬ್ಬ ಬೂತ್ ಮಟ್ಟದ ಅಧಿಕಾರಿಯೊಬ್ಬರು ವಿಶೇಷ ತೀವ್ರ ಪರಿಷ್ಕರಣೆ (SIR) ಕರ್ತವ್ಯಗಳ ಒತ್ತಡವನ್ನು ಇನ್ನು ಮುಂದೆ ನಿಭಾಯಿಸಲು ಸಾಧ್ಯವಿಲ್ಲ ಎಂದು ಎರಡು ಪುಟಗಳ ಟಿಪ್ಪಣಿಯನ್ನು ಬರೆದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಬಂಗಾಳದ ನಾಡಿ ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಘಟನೆಯಿಂದ ಕೆರಳಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಪ್ರಕ್ರಿಯೆಯಡಿಯಲ್ಲಿ ಇನ್ನೂ ಎಷ್ಟು ಬಿಎಲ್‌ಒಗಳು ಸಾಯಬೇಕು ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯ ಸಮಯದಲ್ಲಿ ಇಲ್ಲಿಯವರೆಗೆ ಮೂರು ಬಿಎಲ್‌ಒಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ, ಇದು ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಮತದಾರರ ಪರಿಶೀಲನೆಯನ್ನು ತ್ವರಿತಗೊಳಿಸಲು ಚುನಾವಣಾ ಆಯೋಗದ ಒತ್ತಾಯದ ಬಗ್ಗೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಎಸ್​ಐಆರ್​ ಕೆಲಸದ ಹೊರೆ ಅವಳನ್ನು ದಿಕ್ಕು ತೋಚದ ಸ್ಥಿತಿಗೆ ತಳ್ಳಿದೆ.......

ಮೃತ ರಿಂಕು ತರಫ್ದಾರ್, ಕೃಷ್ಣನಗರದ ಶಾಸ್ಥಿತಲದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಚಪ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬಂಗಾಳ್ಜಿ ಪ್ರದೇಶದ ಬೂತ್ ಸಂಖ್ಯೆ 202 ರ ಬಿಎಲ್ಒ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸದ ಹೊರೆಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಸಹೋದ್ಯೋಗಿಗಳು ಮತ್ತು ನೆರೆಹೊರೆಯವರಿಗೆ ಪದೇ ಪದೇ ಹೇಳುತ್ತಿದ್ದರೂ, ಎಸ್‌ಐಆರ್‌ಗೆ ಅಗತ್ಯವಾದ ಆನ್‌ಲೈನ್ ಕೆಲಸಕ್ಕಾಗಿ ಆಕೆ ಅನೇಕ ದಿನಗಳಿಂದ ಹೆಣಗಾಡುತ್ತಿದ್ದರು ಎನ್ನುವುದು ಕುಟುಂಬಸ್ಥರ ಆರೋಪ.
ರಿಂಕು, ಡೆತ್​ ನೊಟ್​​ನಲ್ಲಿ ತೊಂಬತ್ತು ಪ್ರತಿಶತ ಕೆಲಸವನ್ನು ಪೂರ್ಣಗೊಳಿಸಿದ್ದೇನೆ, ಆದರೆ ಡಿಜಿಟಲ್ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಬರೆದಿದ್ದಾಳೆ. ಅದಕ್ಕಾಗಿ ಶಿಕ್ಷೆಗೆ ಗುರಿಯಾಗುವುದಾಗಿ ಅವಳು ಭಯಪಡುತ್ತಿದ್ದಳು, ಹಿಡಿದಿರುವ ಕೆಲಸ ಮಾಡಲು ವಿಫಲವಾದಲ್ಲಿ ಈ ವಯಸ್ಸಿನಲ್ಲಿ ಜೈಲಿಗೆ ಹೋಗುವ ಸಾಧ್ಯತೆಯ ಬಗ್ಗೆ ಅವಳು ಭಯಪಡುತ್ತಿದ್ದಳು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಾಮಾನ್ಯ ಗೃಹಿಣಿಗೆ ಅಸಾಧ್ಯವಾದ ಕೆಲಸದ ಹೊರೆ'
ಬೆಳಿಗ್ಗೆ ಏಳು ಗಂಟೆ ಸುಮಾರಿಗೆ ನನಗೆ ಆಕೆಯ ಸಾವಿನ ಸುದ್ದಿ ತಿಳಿಯಿತು. ನನ್ನ ತಂಗಿ ಕರೆ ಮಾಡಿ ನನ್ನ ಅತ್ತಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಒತ್ತಡವನ್ನು ಸಹಿಸಲಾಗದೆ ಎರಡು ಪುಟಗಳಷ್ಟು ಪೂರ್ಣ ಟಿಪ್ಪಣಿ ಬರೆದಿದ್ದಳು. ಅವಳಿಗೆ ಆನ್‌ಲೈನ್ ವಿಷಯದಲ್ಲಿ ಅಷ್ಟಾಗಿ ತಿಳುವಳಿಕೆ ಇರಲಿಲ್ಲ, ಒತ್ತಡವನ್ನು ನಿಭಾಯಿಸಲು ಸಾಧ್ಯವಿಲ್ಲ, ಅನಾರೋಗ್ಯಕ್ಕೆ ತುತ್ತಾಗುವುದು ಇಷ್ಟವಿಲ್ಲ, ಅಧಿಕಾರಿಗಳ ಕಿರುಕುಳ ಎದುರಿಸಲು ಅಥವಾ ಜೈಲಿಗೆ ಹೋಗಲು ಬಯಸುವುದಿಲ್ಲ ಎಂದು ಡೆತ್​ ನೋಟ್​​ ಬರೆದಿಟ್ಟಿದ್ದಾಳೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಇದೇ ಮೊದಲಲ್ಲ.......

ಗುಜರಾತ್​​ ಮೂಲದ 40 ವರ್ಷದ ಶಿಕ್ಷಕ ಅರವಿಂದ್ ವಧೇರ್ ಮೃತ ದುರ್ದೈವಿ ಎನ್ನಲಾಗಿದ್ದು, ಕೊಡಿನಾರ್ ತಾಲ್ಲೂಕಿನ ಛಾರಾ ಗ್ರಾಮದಲ್ಲಿ ಬಿಎಲ್‌ಒ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಪತ್ನಿಯನ್ನು ಉಲ್ಲೇಖಿಸಿ ಬರೆದಿರುವ ಡೆತ್​ ನೋಟ್​​ನಲ್ಲಿ ಎಸ್‌ಐಆರ್ ಅಡಿಯಲ್ಲಿ ಕೆಲಸದ ಹೊರೆಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದಾರೆ. ಈ ಎಸ್‌ಐಆರ್ ಕೆಲಸವನ್ನು ನಾನು ಇನ್ನು ಮುಂದೆ ಮಾಡಲು ಸಾಧ್ಯವಾಗುವುದಿಲ್ಲ. ಕಳೆದ ಕೆಲವು ದಿನಗಳಿಂದ ನಾನು ದಣಿದಿದ್ದೇನೆ ಮತ್ತು ಇದರಿಂದ ತೊಂದರೆಗೊಳಗಾಗಿದ್ದೇನೆ ಎಂದು ಅವರು ಬರೆದಿದ್ದಾರೆ. ಅಧಿಕೃತ ದಾಖಲೆಗಳನ್ನು ಹೊಂದಿರುವ ತಮ್ಮ ಬ್ಯಾಗ್ ಅನ್ನು ಶಾಲೆಗೆ ಸಲ್ಲಿಸಬೇಕೆಂದು ಸಹ ಅದರಲ್ಲಿ ಉಲ್ಲೇಖಿಸಿದ್ದಾರೆ.
ಅರವಿಂದ್ ವಧೇರ್​ರ ಈ ಸಾವು ಗುಜರಾತ್‌ನ ಶೈಕ್ಷಣಿಕ ಸಂಘಗಳಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಗುಜರಾತ್‌ನ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಣಿಕ ಮಹಾಸಂಘವು ಆನ್‌ಲೈನ್ SIR ಪ್ರಕ್ರಿಯೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ ಮತ್ತು ಮುಂದಿನ ಕ್ರಮದ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ.
ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ, 50 ವರ್ಷದ ಬಿಎಲ್‌ಒ ರಮೇಶ್‌ಭಾಯ್ ಪರ್ಮಾರ್ ಹೃದಯಾಘಾತದಿಂದ ನಿಧನರಾಗಿದ್ದು, ಎಸ್‌ಐಆರ್ ಕೆಲಸದ ಅತಿಯಾದ ಒತ್ತಡ ಕಾರಣವೇ ಹೀಗಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿಯ ಮಹಿಳಾ ಬಿಎಲ್‌ಒ ಒಬ್ಬರು ಕೆಲಸದ ಹೊರೆ ಅಸಹನೀಯವಾಗಿದೆ ಎಂಬ ಹೇಳಿಕೆ ನೀಡಿದ್ದು, ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಆಕೆ, ತಮ್ಮ ನಾಲ್ಕು ವರ್ಷದ ಮಗಳು ಸೇರಿದಂತೆ ತಮ್ಮ ಕುಟುಂಬಕ್ಕೆ ಸಮಯವನ್ನು ನೀಡಲಾಗದೆ, ಗಣತಿ ನಮೂನೆಗಳನ್ನು ಸಂಗ್ರಹಿಸುವುದರಲ್ಲಿಯೇ ಇಡೀ ದಿನಗಳನ್ನು ಕಳೆಯುವಂತಾಗಿದೆ ಎಂದರು. ಈ ಪ್ರಕ್ರಿಯೆಯ ಬಗ್ಗೆ ಜನರು ಗೊಂದಲಕ್ಕೊಳಗಾಗಿದ್ದಾರೆ ಮತ್ತು ಭಯಭೀತರಾಗಿದ್ದಾರೆ, ಆದ್ದರಿಂದ ನಾವು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ರಾಜಸ್ಥಾನದಲ್ಲೂ ಇದೇ ರೀತಿಯ ಹಲವು ಪ್ರಕರಣಗಳು ವರದಿಯಾಗಿದ್ದು. ಸವಾಯಿ ಮಾಧೋಪುರ ಜಿಲ್ಲೆಯ ಹರಿಯೋಮ್ ಬೈರ್ವಾ ಎಂಬ ಬಿಎಲ್‌ಒ ಬುಧವಾರ ಹೃದಯಾಘಾತದಿಂದ ನಿಧನರಾಗಿರುವ ಮಾಹಿತಿ ಲಭ್ಯವಾಗಿದೆ. ಸ್ಥಳೀಯ ಅಧಿಕಾರಿಗಳು ಮಾನಸಿಕ ಒತ್ತಡ ಹೇರುತ್ತಿದ್ದಾರೆ ಎಂದು ಆತನ ಸಂಬಂಧಿಕರು ಆರೋಪಿಸಿದ್ದು, ಕೆಲವು ದಿನಗಳ ಹಿಂದೆ, ಜೈಪುರದಲ್ಲಿ, ಸರ್ಕಾರಿ ಶಾಲಾ ಶಿಕ್ಷಕ ಮತ್ತು ಬಿಎಲ್‌ಒ ಮುಖೇಶ್ ಜಂಗಿದ್ (45) ಚಲಿಸುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗಡುವನ್ನು ಪೂರೈಸಲು ಬೂತ್​ ಮಟ್ಟದ ಅಧಿಕಾರಿಗಳು ತುಂಬಾ ಒತ್ತಡದಲ್ಲಿ ಪ್ರತಿದಿನ ಸುಮಾರು 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ಕೇರಳದ ಬಿಎಲ್‌ಒ ಅನೀಶ್ ಜಾರ್ಜ್ (44), ಕಣ್ಣೂರಿನ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಕುಂಭಕೋಣಂನಲ್ಲಿ, ಬಿಎಲ್‌ಒ ಆಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ನಾಗರಿಕ ಅಂಗನವಾಡಿ ಕಾರ್ಯಕರ್ತೆಯೊಬ್ಬರು ತಡರಾತ್ರಿ ಎಸ್‌ಐಆರ್ ಕೆಲಸಗಳನ್ನು ಮುಗಿಸಲು ಒತ್ತಡ ಹೇರಿದ ನಂತರ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಬಿಎಲ್ಒಗಳ ಸಮಸ್ಯೆ ಏನು..?

ನವೆಂಬರ್ 4 ರಂದು 12 ರಾಜ್ಯಗಳಲ್ಲಿ ಪ್ರಾರಂಭಿಸಲಾದ SIR ಕಾರ್ಯವು, BLO ಗಳು ಗಣತಿ ನಮೂನೆಗಳನ್ನು ವಿತರಿಸುವುದು, ಅವುಗಳನ್ನು ಸಂಗ್ರಹಿಸುವುದು ಮತ್ತು ಅಪ್ಲಿಕೇಶನ್ ಬಳಸಿ ಡೇಟಾವನ್ನು ಡಿಜಿಟಲೀಕರಣಗೊಳಿಸುವುದನ್ನು ಕಡ್ಡಾಯಗೊಳಿಸುತ್ತದೆ. BLO ಗಳು ಹೆಚ್ಚಾಗಿ ಶಿಕ್ಷಕರು ಅಥವಾ ಸರ್ಕಾರಿ ನೌಕರರಾಗಿದ್ದಾರೆ.
ಪ್ರತಿಯೊಂದು ಮತಗಟ್ಟೆಯಲ್ಲಿ ಸಾಮಾನ್ಯವಾಗಿ 1,000–1,200 ಮತದಾರರಿರುತ್ತಾರೆ ಮತ್ತು ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಬಿಎಲ್‌ಒ ಮೂರು ಬಾರಿ ಭೇಟಿ ನೀಡಬೇಕು. ಡಿಜಿಟಲ್ ನಮೂದುಗಳ ವೇಗ, ತಡರಾತ್ರಿಯ ನಿರ್ದೇಶನಗಳು ಮತ್ತು ಹಠಾತ್ ಸೂಚನೆಗಳು ನಿಯಂತ್ರಿಸಲಾಗದಂತಾಗಿದೆ ಎಂದು ಬಂಗಾಳದ ಅನೇಕ ಅಧಿಕಾರಿಗಳು ಹೇಳುತ್ತಾರೆ.

ಟಿಎಂಸಿ ಆರೋಪಕ್ಕೆ ಬಿಜೆಪಿ ತಿರುಗೇಟು..

ನಡೆದಿರುವ ಈ ಸಾವುಗಳು ಎಸ್‌ಐಆರ್ ಡ್ರೈವ್‌ಗೆ ಸಂಬಂಧಿಸಿವೆ ಎಂಬ ಆರೋಪವನ್ನು ಬಿಜೆಪಿ ತಳ್ಳಿಹಾಕಿದ್ದು, ಅಕ್ರಮ ಮತದಾರರನ್ನು ಹೊರಹಾಕುವ ಗುರಿಯನ್ನು ಹೊಂದಿರುವ ಈ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಈ ಮಾರ್ಗ ಅನುಸರಿಸುತ್ತಿದೆ ಎಂದಿದ್ದಾರೆ(ಏಜೆನ್ಸೀಸ್​).