ಅಣ್ಣಾಮಲೈ ಭವಿಷ್ಯ ನಿಜವಾಯ್ತು..": ಸಿಂಗಂ ಹೆಣೆದ ಚದುರಂಗದಾಟದಲ್ಲಿ ಗೆದ್ದು ಬೀಗಿದ್ದು ನಟ ವಿಜಯ್?! ಏನಿದು ದ್ರಾವಿಡನಾಡಿನ ಅಸಲಿ ಕ್ಲೈಮ್ಯಾಕ್ಸ್?
ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲೇ ಇದೊಂದು ಅಭೂತಪೂರ್ವ ತಿರುವು. ಕಳೆದ ಆರು ದಶಕಗಳಿಂದ ಕರುಣಾನಿಧಿ ಮತ್ತು ಜಯಲಲಿತಾ ಅವರ ನೆರಳಿನಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳೇ ತಮಿಳುನಾಡನ್ನು ಆಳುತ್ತಿದ್ದವು. ಆದರೆ, 2026ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಎರಡೇ ವರ್ಷಗಳ ಹಿಂದೆ ಆರಂಭವಾದ ನಟ ವಿಜಯ್ ಅವರ 'ಟಿವಿಕೆ' ಪಕ್ಷವು ಒಟ್ಟು 234 ಸೀಟುಗಳ ಪೈಕಿ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಂದು ವಿಜಯ್ ಸಾಧಿಸಿರುವ ಈ ಯಶಸ್ಸಿನ ಹಿಂದೆ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ(Annamalai Formula) ಅವರ ರಾಜಕೀಯ ಸೂತ್ರ ಅಡಗಿದೆ ಎಂಬ ಚರ್ಚೆ ಈಗ ಜೋರಾಗಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ, ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಯಾಗುತ್ತಿರುವ ಬೆನ್ನಲ್ಲೇ ಕೆ. ಅಣ್ಣಾಮಲೈ ಅವರು ಶುಕ್ರವಾರ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರೀಯ ಪಕ್ಷಗಳನ್ನು ತೊರೆದು ಸ್ವತಂತ್ರವಾಗಿ ಹೊಸದೊಂದು ಜನಪರ ಚಳವಳಿ ಆರಂಭಿಸುವುದಾಗಿ ಘೋಷಿಸಿದ್ದಾರೆ.
ಅಣ್ಣಾಮಲೈ ಭವಿಷ್ಯ ನಿಜವಾಯಿತು, ಆದರೆ ಲಾಭ ವಿಜಯ್ ಪಾಲು!
ಕರ್ನಾಟಕದಲ್ಲಿ ಸಿಂಗಂ ಎಂದೇ ಖ್ಯಾತರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ 2020ರಲ್ಲಿ ಬಿಜೆಪಿ ಸೇರಿದ್ದರು. ಅಂದಿನಿಂದಲೇ ಅವರು ತಮಿಳುನಾಡಿನಲ್ಲಿ ಒಂದು ಮಾತು ಹೇಳುತ್ತಾ ಬಂದಿದ್ದರು.
ತಮಿಳುನಾಡಿನಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ಅವರ ನಿಧನದ ನಂತರ ದೊಡ್ಡ ರಾಜಕೀಯ ಶೂನ್ಯತೆ ಸೃಷ್ಟಿಯಾಗಿದೆ. ಇಲ್ಲಿನ ಯುವ ಪೀಳಿಗೆಗೆ ಸಾಂಪ್ರದಾಯಿಕ ದ್ರಾವಿಡ ರಾಜಕೀಯದ ಬಗೆಗಿನ ವ್ಯಾಮೋಹ ಕಡಿಮೆಯಾಗುತ್ತಿದೆ. ತಮಿಳು ಹೆಮ್ಮೆ, ಉತ್ತಮ ಆಡಳಿತ ಮತ್ತು ರಾಷ್ಟ್ರೀಯತೆಯ ಮಿಶ್ರಣದ ಹೊಸ ರಾಜಕೀಯ ಶಕ್ತಿಯನ್ನು ಜನರು ಬಯಸುತ್ತಿದ್ದಾರೆ ಎಂದು ಹೇಳಿದ್ದರು.
ಅಣ್ಣಾಮಲೈ ಅವರ ಈ ಆಲೋಚನೆ ಅತ್ಯಂತ ಪ್ರಖರವಾಗಿದ್ದರೂ, ಅದನ್ನು ತಮಿಳುನಾಡಿನ ಜನರಿಗೆ ತಲುಪಿಸಲು ಸಮಯದ ಅಗತ್ಯವಿತ್ತು. ಆದರೆ ಬಿಜೆಪಿಯ ರಾಷ್ಟ್ರೀಯ ನಾಯಕತ್ವಕ್ಕೆ ತಾಳ್ಮೆಯಿರಲಿಲ್ಲ. ಹೀಗಾಗಿ ಅವರು ಅಣ್ಣಾಮಲೈ ಅವರ ಸ್ವತಂತ್ರ ಹೋರಾಟದ ಹಾದಿಯನ್ನು ಬದಿಗಿಟ್ಟು, ಹಳೆಯ ಮಿತ್ರ ಪಕ್ಷ ಎಐಎಡಿಎಂಕೆ ಜೊತೆ ಮತ್ತೆ ಮೈತ್ರಿ ಮಾಡಿಕೊಂಡರು.
ಅತ್ತ, ನಟ ವಿಜಯ್ ಅವರು ಅಣ್ಣಾಮಲೈ ಅವರದೇ ರಾಜಕೀಯ ಸೂತ್ರಗಳನ್ನು (ಯುವ ಮತದಾರರ ಸೆಳೆಯುವುದು, ಡಿಜಿಟಲ್ ತಂತ್ರಜ್ಞಾನದ ಬಳಕೆ, ದ್ರಾವಿಡ ಮುಖವಾಡದ ಆಚೆಗಿನ ಆಡಳಿತದ ಮಾತು) ತೆಗೆದುಕೊಂಡು, ಅದಕ್ಕೆ ತಮಿಳು ಸಂಸ್ಕೃತಿಯ ಹೊಸ ಪ್ಯಾಕೇಜ್ ನೀಡಿ ಕಣಕ್ಕಿಳಿದರು. ಫಲಿತಾಂಶ ವಿಜಯ್ ಇಂದು ಮುಖ್ಯಮಂತ್ರಿಯಾಗಿದ್ದಾರೆ.
ಬಿಜೆಪಿಗೆ ಮುಳುವಾಯಿತೇ ಹೈಕಮಾಂಡ್ ತರಾತುರಿ..?
ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ನಡೆಸಿದ 1,700 ಕಿಲೋಮೀಟರ್ ಉದ್ದದ ಎನ್ ಮಣ್ಣ್, ಎನ್ ಮಕ್ಕಳ್ ಪಾದಯಾತ್ರೆಯು ಬಿಜೆಪಿಯ ಮತ ಹಂಚಿಕೆಯನ್ನು ಶೇ. 3 ರಿಂದ ಶೇ. 11 ಕ್ಕೆ ಹೆಚ್ಚಿಸಿತ್ತು. ತಮಿಳುನಾಡಿನಲ್ಲಿ ಬಿಜೆಪಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದ್ದು ಅದೇ ಮೊದಲು. ಆದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಅಣ್ಣಾಮಲೈ ಸೇರಿದಂತೆ ಬಿಜೆಪಿ ಯಾವುದೇ ಸೀಟು ಗೆಲ್ಲಲು ಸಾಧ್ಯವಾಗಲಿಲ್ಲ.
ಇದರಿಂದ ಆತಂಕಗೊಂಡ ಬಿಜೆಪಿಯ ದೆಹಲಿ ನಾಯಕರು, ಅಣ್ಣಾಮಲೈ ಅವರ ಕಠಿಣ ನಿಲುವನ್ನು ಸಡಿಲಗೊಳಿಸಲು ಒತ್ತಾಯಿಸಿದರು. ಅಣ್ಣಾಮಲೈ ಅವರು ಡಿಎಂಕೆ ಮತ್ತು ಎಐಎಡಿಎಂಕೆ ಎರಡು ಪಕ್ಷಗಳ ಭ್ರಷ್ಟಾಚಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದರು. ಆದರೆ ಮೈತ್ರಿಗಾಗಿ ಹೈಕಮಾಂಡ್ ಅಣ್ಣಾಮಲೈ ಅವರನ್ನು 2025ರಲ್ಲಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ನಯನಾರ್ ನಾಗೇಂದ್ರನ್ ಅವರಿಗೆ ಜವಾಬ್ದಾರಿ ನೀಡಿತು. 2026ರ ಚುನಾವಣೆಯಲ್ಲಿ ಅಣ್ಣಾಮಲೈ ಅವರಿಗೆ ಸ್ಪರ್ಧಿಸಲು ಟಿಕೆಟ್ ಕೂಡ ನೀಡಲಿಲ್ಲ.
ಫಲಿತಾಂಶ ಏನಾಯಿತು: ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡರೂ ಬಿಜೆಪಿಯ ಮತ ಗಳಿಕೆ ಮತ್ತೆ ಶೇ. 3ಕ್ಕೆ ಕುಸಿಯಿತು. ಬಿಜೆಪಿ ಕೇವಲ 1 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಅಣ್ಣಾಮಲೈ ಅವರನ್ನು ಮೂಲೆಗುಂಪು ಮಾಡಿದ ಬಿಜೆಪಿಗೆ ತಮಿಳು ಮತದಾರರು ತಕ್ಕ ಪಾಠ ಕಲಿಸಿದ್ದಾರೆ.
'ನವ-ದ್ರಾವಿಡ ಸಿದ್ಧಾಂತ' ಹಿಡಿದು ಗೆದ್ದ ವಿಜಯ್
ಅಣ್ಣಾಮಲೈ ಸೃಷ್ಟಿಸಿದ ರಾಜಕೀಯ ಜಾಗವನ್ನು ನಟ ವಿಜಯ್ ಅತ್ಯಂತ ಚಾಣಾಕ್ಷತನದಿಂದ ಬಳಸಿಕೊಂಡರು. ಬಿಜೆಪಿಗೆ ತಮಿಳುನಾಡಿನಲ್ಲಿ ಹಿಂದಿ ಮತ್ತು ಹಿಂದುತ್ವದ ಪಕ್ಷ ಎನ್ನುವ ಹೊರಗಿನ ಮುದ್ರೆ ಇತ್ತು. ಆದರೆ ವಿಜಯ್ ಅವರಿಗೆ ಅಂತಹ ಯಾವುದೇ ಹಿನ್ನೆಲೆ ಇರಲಿಲ್ಲ. ಜೊತೆಗೆ ಅವರ ಸಿನಿಮಾ ತಾರೆಯ ವರ್ಚಸ್ಸು ಮತ್ತು ಬಲಿಷ್ಠ ಅಭಿಮಾನಿ ಬಳಗ ಅವರಿಗೆ ಆನೆಯ ಬಲ ನೀಡಿತು.
ವಿಜಯ್ ಕೇವಲ ಪೆರಿಯಾರ್ ಸಿದ್ಧಾಂತಕ್ಕೆ ಅಂಟಿಕೊಳ್ಳದೆ, ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್, ಸರಳತೆಯ ರಾಜಕಾರಣಿ ಕೆ. ಕಾಮರಾಜ್, ಬ್ರಿಟಿಷರ ವಿರುದ್ಧ ಹೋರಾಡಿದ ರಾಣಿ ವೇಲು ನಾಚಿಯಾರ್ ಮತ್ತು ಅಂಜಲೈ ಅಮ್ಮಾಳ್ ಅವರಂತಹ ಐಕಾನ್‌ಗಳನ್ನು ತಮ್ಮ ಸಿದ್ಧಾಂತಕ್ಕೆ ಸೇರಿಸಿಕೊಂಡರು. ಇದನ್ನು ನವ-ದ್ರಾವಿಡ ಸಿದ್ಧಾಂತ ಎಂದು ಕರೆಯಲಾಯಿತು. ಇದು ದ್ರಾವಿಡ ಮತದಾರರು, ಯುವಕರು ಮತ್ತು ಬದಲಾವಣೆ ಬಯಸಿದ್ದ ಮಧ್ಯಮ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.
ಬಿಜೆಪಿಗೆ ಗುಡ್‌ಬೈ ಹೇಳಿದ ಅಣ್ಣಾಮಲೈ: ಮುಂದಿನ ಹಾದಿ ಏನು?
ಶುಕ್ರವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಅಣ್ಣಾಮಲೈ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅವರ ರಾಜೀನಾಮೆ ಪತ್ರದಲ್ಲಿದ್ದ ಸಾಲುಗಳು ದೆಹಲಿ ನಾಯಕರ ವಿರುದ್ಧ ಅವರಿಗಿದ್ದ ಅಸಮಾಧಾನವನ್ನು ಎತ್ತಿ ತೋರಿಸುತ್ತವೆ.
ರಾಷ್ಟ್ರೀಯ ಪಕ್ಷಗಳಿಗೆ ತಮಿಳುನಾಡಿನ ಜನರ ಭಾಷೆ ಮತ್ತು ನಾಡಿಮಿಡಿತ ಎಂದಿಗೂ ಅರ್ಥವಾಗುವುದಿಲ್ಲ. ನಾನು ಪ್ರಾದೇಶಿಕ ಆಕಾಂಕ್ಷೆಗಳನ್ನು ಹೊಂದಿರುವ ಒಬ್ಬ ರಾಷ್ಟ್ರವಾದಿ. ನಮ್ಮ ಭಾಷೆ, ಸಂಸ್ಕೃತಿಯ ಹೆಮ್ಮೆಯನ್ನು ಉಳಿಸಿಕೊಂಡೇ ದೇಶದ ಏಕತೆಯನ್ನು ಕಾಯ್ದುಕೊಳ್ಳಬಹುದು ಎಂದು ನಾನು ನಂಬುತ್ತೇನೆ ಎಂದು ತಿಳಿಸಿದ್ದಾರೆ.
ಕಲಾಂ ಹೆಸರಲ್ಲಿ ಹೊಸ ಆಂದೋಲನ
ಅಣ್ಣಾಮಲೈ ಅವರು ರಾಜಕೀಯ ಪಕ್ಷಗಳಿಂದ ದೂರ ಸರಿದು, ಯುವಕರಿಗಾಗಿ 'ಎ.ಪಿ.ಜೆ. ಅಬ್ದುಲ್ ಕಲಾಂ ನೈತಿಕತೆ ಮತ್ತು ರಾಜಕಾರಣ ಕೇಂದ್ರವನ್ನು ಕೊಯಮತ್ತೂರಿನಲ್ಲಿ ಸ್ಥಾಪಿಸುತ್ತಿದ್ದಾರೆ. ಇದರ ಮೂಲಕ ತಳಮಟ್ಟದ ನಾಯಕತ್ವವನ್ನು ಬೆಳೆಸಲು ಅವರು ಮುಂದಾಗಿದ್ದಾರೆ.
ಅಣ್ಣಾಮಲೈ ಅವರು ಶುಕ್ರವಾರ ರಾತ್ರಿ Xನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, ಅವರು ಆರಂಭಿಸಿರುವ ಹೊಸ ಸಾಮಾಜಿಕ ಚಳವಳಿಗೆ ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಯುವಕರು ನೊಂದಾಯಿಸಿಕೊಂಡಿದ್ದಾರೆ. ಇದು ತಮಿಳುನಾಡಿನಲ್ಲಿ ಅಣ್ಣಾಮಲೈ ಅವರಿಗಿರುವ ಜನಪ್ರಿಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದರು.
ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಗೆಲುವು ಒಂದು ಹೊಸ ಅಧ್ಯಾಯ ಬರೆದಿದೆ. ಅಣ್ಣಾಮಲೈ ಅವರ ರಾಜಕೀಯ ಸೂತ್ರ ಸೂಪರ್ ಹಿಟ್ ಆಗಿದೆ, ಆದರೆ ಅದರ ಯಶಸ್ಸಿನ ಕಿರೀಟ ತೊಟ್ಟಿರುವುದು ಮಾತ್ರ ನಟ ವಿಜಯ್! ಈಗ ಬಿಜೆಪಿಯಿಂದ ಮುಕ್ತರಾಗಿರುವ ಅಣ್ಣಾಮಲೈ, ಯುವಕರ ಬಲದೊಂದಿಗೆ ತಮಿಳುನಾಡಿನಲ್ಲಿ ಮತ್ತೊಂದು ಹೊಸ ರಾಜಕೀಯ ಪರ್ವಕ್ಕೆ ಮುನ್ನುಡಿ ಬರೆಯಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).