Annamalai | ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ 
ದೇಶ

ಪ್ರಧಾನಿ ಬಗ್ಗೆ ಗೌರವ, ರಜನಿಕಾಂತ್ ಆಫರ್, ಕೊಟ್ಟ ಆ 'ಒಂದು ಮಾತು'... ಹಳೆಯ ನೆನಪು ಮೆಲುಕು ಹಾಕಿ ಹೊಸ ಪಕ್ಷ ಘೋಷಿಸಿದ ಅಣ್ಣಾಮಲೈ; ಹೆಸರೇನು ಗೊತ್ತಾ..? | Annamalai

Annamalai: ತಮಿಳುನಾಡು ರಾಜಕೀಯ ವಲಯದಲ್ಲಿ ಭಾರಿ ರಾಜಕೀಯ ಬಿರುಗಾಳಿ ಎದ್ದಿದ್ದು, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಭಾರತೀಯ ಜನತಾ ಪಾರ್ಟಿಯ (BJP) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣಗಳ ಲೈವ್​ನಲ್ಲಿ ಮಾತನಾಡಿರುವ ಅಣ್ಣಾಮಲೈ, ಪಕ್ಷದ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ತಮಿಳುನಾಡಿನಲ್ಲಿ ಪಕ್ಷವನ್ನು ಮುನ್ನಡೆಸುವ ವಿಚಾರದಲ್ಲಿ ನನ್ನ ಸಿದ್ಧಾಂತ ಮತ್ತು ದೃಷ್ಟಿಕೋನಗಳು ಬಿಜೆಪಿಯ ರಾಷ್ಟ್ರೀಯ ನಾಯಕರ ಆಲೋಚನೆಗೆ ಹೊಂದಿಕೆಯಾಗುತ್ತಿಲ್ಲ. ಕಳೆದ 18 ತಿಂಗಳುಗಳಿಂದ ಈ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ವರಿಷ್ಠರ ಜೊತೆ ಹಲವು ಬಾರಿ ಚರ್ಚೆ ನಡೆಸಿದ್ದೆ. ಆದರೆ ಅದು ಸಾಧ್ಯವಾಗದ ಕಾರಣ, ನಾನು ಪಕ್ಷಕ್ಕೆ ಹೊರೆಯಾಗಲು ಬಯಸದೆ ಹೊರನಡೆಯುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಸೇರ್ಪಡೆಯ ಗುಟ್ಟು ಬಿಚ್ಚಿಟ್ಟ ಸಿಂಗಂ

ಬಿಜೆಪಿ ತೊರೆದರೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ತಮಗೆ ಸದಾ ಅತ್ಯುನ್ನತ ಗೌರವ ಇರಲಿದೆ ಎಂದಿರುವ ಅಣ್ಣಾಮಲೈ, ತಮಗೆ ಸಿಕ್ಕ ಅವಕಾಶಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ ತಮ್ಮ ರಾಜಕೀಯ ಎಂಟ್ರಿಯ ರಹಸ್ಯ ಬಿಚ್ಚಿಟ್ಟ ಅವರು, ನಾನು ಬಿಜೆಪಿಯ ಹಿರಿಯ ನಾಯಕರಾದ ಬಿ.ಎಲ್. ಸಂತೋಷ್ ಅವರು ನೀಡಿದ ಭರವಸೆ ಮತ್ತು ಬದ್ಧತೆಯನ್ನು ನಂಬಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೆ. ನನ್ನ ರಾಜಕೀಯ ಪ್ರವೇಶದ ಹಿಂದಿನ ವದಂತಿಗಳಿಗೆ ಈಗ ತೆರೆ ಬಿದ್ದಿದೆ ಎಂದಿದ್ದಾರೆ.

ರಜನಿಕಾಂತ್​ ಆಫರ್ ತಿರಸ್ಕರಿಸಲು 'ಆ ಒಂದು ಮಾತು' ಕಾರಣ!

ಅಣ್ಣಾಮಲೈ ಸಕ್ರಿಯ ರಾಜಕಾರಣಕ್ಕೆ ಬರುವ ಮುನ್ನ, ಅಂದರೆ 2020ರ ಆಗಸ್ಟ್ 24 ರಂದು ಖುದ್ದಾಗಿ ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರಿಂದ ಫೋನ್ ಕರೆ ಬಂದಿತ್ತು. ಆಗ ಅವರು ತಾವು ಸ್ಥಾಪಿಸಲು ಉದ್ದೇಶಿಸಿದ್ದ ಹೊಸ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವಂತೆ ತಮಗೆ ಮುಕ್ತ ಆಹ್ವಾನ ನೀಡಿದ್ದರು ಎಂದು ಅಣ್ಣಾಮಲೈ ಬಹಿರಂಗಪಡಿಸಿದ್ದಾರೆ.
ರಜನಿಕಾಂತ್ ದೊಡ್ಡ ಆಫರ್​ ನೀಡಿದ್ದರು. ಆದರೆ, ಅದಾಗಲೇ ನಾನು ಬಿಜೆಪಿಯ ಹಿರಿಯ ನಾಯಕರಾದ ಬಿ.ಎಲ್. ಸಂತೋಷ್ ಅವರಿಗೆ ಬಿಜೆಪಿಗೆ ಸೇರುವುದಾಗಿ ಮಾತು ಕೊಟ್ಟಿದ್ದೆ. ರಾಜಕೀಯದಲ್ಲಿ ಕೊಟ್ಟ ಮಾತು ಮತ್ತು ಬದ್ಧತೆ ಮುಖ್ಯ. ಹಾಗಾಗಿ, ರಜನಿಕಾಂತ್ ಅವರ ಆಫರ್ ಅತ್ಯಂತ ವಿನಮ್ರವಾಗಿ ತಿರಸ್ಕರಿಸಿದೆ. ತದನಂತರ ಬಿ ಎಲ್​ ಸಂತೋಷ್ ಹಾಗೂ ಬಿಜೆಪಿ ನಾಯಕತ್ವಕ್ಕೆ ನೀಡಿದ್ದ ಮಾತಿನಂತೆಯೇ ನಾನು ಭಾರತೀಯ ಜನತಾ ಪಾರ್ಟಿಯನ್ನು ಅಧಿಕೃತವಾಗಿ ಸೇರಿಕೊಂಡೆ ಎಂದು ಅಣ್ಣಾಮಲೈ ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳನ್ನು ಸ್ಮರಿಸಿದ್ದಾರೆ.

2025ರಲ್ಲೇ ರಾಜೀನಾಮೆಗೆ ನಿರ್ಧರಿಸಿದ್ದ ಅಣ್ಣಾಮಲೈ

ನಾನು ಪಕ್ಷ ಬಿಡುವ ನಿರ್ಧಾರವನ್ನು ಕಳೆದ 2025ರ ಡಿಸೆಂಬರ್ 4 ರಂದೇ ಬಿಜೆಪಿ ಹೈಕಮಾಂಡ್‌ಗೆ ತಿಳಿಸಿದ್ದೆ. ಆದರೆ, ಚುನಾವಣೆಗಳ ಜವಾಬ್ದಾರಿ ಇದ್ದಿದ್ದರಿಂದ ಅಲ್ಲಿಯವರೆಗೂ ಮುಂದುವರಿಯುವಂತೆ ಪಕ್ಷದ ನಾಯಕರು ಕೇಳಿಕೊಂಡಿದ್ದರು. ಅದರಂತೆ ನನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿ ಈಗ ಅಧಿಕೃತವಾಗಿ ಹೊರಬಂದಿದ್ದೇನೆ ಎಂದರು. ತಮಿಳುನಾಡಿನಲ್ಲಿ ಸದ್ಯ ಚಾಲ್ತಿಯಲ್ಲಿರುವ ವ್ಯಕ್ತಿ ಆರಾಧನೆ ಕೊನೆಗಾಣಿಸುವುದೇ ನನ್ನ ಹೊಸ ಪಕ್ಷದ ಮುಖ್ಯ ಉದ್ದೇಶ ಎಂದಿರುವ ಅಣಾಮಲೈ, ಇಲ್ಲಿ ಕೇವಲ ಒಬ್ಬ ನಾಯಕನ ಸುತ್ತ ರಾಜಕೀಯ ನಡೆಯಬಾರದು, ಸಾಮಾನ್ಯನ ರಾಜಕಾರಣ ಆರಂಭವಾಗಬೇಕು. ಮುಂಬರುವ ಸಾರ್ವತ್ರಿಕ ಚುನಾವಣೆಗಳಲ್ಲಿ ನನ್ನ ಹೊಸ ಪಕ್ಷವು ಒಂಟಿಯಾಗಿ ಸ್ಪರ್ಧಿಸಲಿದೆ ಎಂದು ಅವರು ಘೋಷಿಸಿದ್ದಾರೆ.

ಅಮಿತ್​ ಷಾ ಭೇಟಿಯ ಹಿಂದಿನ ರಹಸ್ಯ ಬಯಲು!

ತಾವು ರಾಜೀನಾಮೆ ನೀಡುವ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಖುದ್ದಾಗಿ ಭೇಟಿಯಾಗಿ, ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣಗಳನ್ನು ವಿವರಿಸಿದ್ದಾಗಿ ಹೇಳಿದ್ದಾರೆ. ನಾನು ತಮಿಳುನಾಡಿನಲ್ಲಿ ಸುಮ್ಮನೆ ಕುಳಿತುಕೊಂಡು ವಾಟ್ಸಾಪ್ ಅಥವಾ ಇಮೇಲ್ ಮೂಲಕ ರಾಜೀನಾಮೆ ಪತ್ರ ಕಳುಹಿಸುವಂತಹ ವ್ಯಕ್ತಿಯಲ್ಲ. ಅದಕ್ಕಾಗಿಯೇ ನಾನು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಖುದ್ದಾಗಿ ಮುಖಾಮುಖಿ ಭೇಟಿಯಾದೆ. ತಮಿಳುನಾಡು ಬಿಜೆಪಿಯಲ್ಲಿ ಸದ್ಯ ಇರುವ ಲೋಪದೋಷಗಳು ಮತ್ತು ತೀವ್ರ ಆತಂಕ ಉಂಟುಮಾಡಿರುವ ವಿಷಯಗಳನ್ನು ಅವರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟು, ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟ ನಂತರವೇ ರಾಜೀನಾಮೆ ಪತ್ರವನ್ನು ಅಧಿಕೃತವಾಗಿ ಹಸ್ತಾಂತರಿಸಿರುವುದಾಗಿ ಅಣ್ಣಾಮಲೈ ತಿಳಿಸಿದ್ದಾರೆ.

ಹೊಸ ಪಕ್ಷದ ಹೆಸರು ಘೋಷಿಸಿದ ಸಿಂಗಂ

ಭಾರತೀಯ ಜನತಾ ಪಾರ್ಟಿಗೆ (BJP) ಗುಡ್ ಬೈ ಹೇಳಿದ ಕೆಲವೇ ಗಂಟೆಗಳಲ್ಲಿ ಅಣ್ಣಾಮಲೈ ಹೊಸದಾಗಿ ಆರಂಭಿಸಿರುವ ರಾಜಕೀಯ ಚಳವಳಿ ಅಣ್ಣಾಮಲೈ ಮಕ್ಕಳ್ ಇಯಕ್ಕಂ (AMI) ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆಯ ಮೂಲಕ ಭರ್ಜರಿ ಆರಂಭ ಪಡೆದಿದೆ. 3,000ಕ್ಕೂ ಹೆಚ್ಚು ಜನರು ಸ್ವಯಂಸೇವಕರಾಗಿ (Volunteers) ನೋಂದಾಯಿಸಿಕೊಳ್ಳುವ ಮೂಲಕ ಅಣ್ಣಾಮಲೈ ಅವರ ಹೊಸ ಹಾದಿಗೆ ಸಾಥ್ ನೀಡಿದ್ದಾರೆ. ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಣ್ಣಾಮಲೈ, ತಮಿಳುನಾಡು ಜನತೆಯ ಭಾರಿ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ನಮಗೇನು ನಷ್ಟವಿಲ್ಲ ಎಂದ ಬಿಜೆಪಿ!

ಇತ್ತ ಅಣ್ಣಾಮಲೈ ರಾಜೀನಾಮೆ ನೀಡುತ್ತಿದ್ದಂತೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಪ್ರತಿಕ್ರಿಯೆ ನೀಡಿದ್ದು, ಅಣ್ಣಾಮಲೈ ಪಕ್ಷ ತೊರೆದಿದ್ದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ. ಅವರ ನಿರ್ಗಮನದಿಂದ ಪಕ್ಷ ದುರ್ಬಲಗೊಳ್ಳುವುದಿಲ್ಲ. ನಮ್ಮ ಸಂಘಟನಾ ಶಕ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಿ ನಾವು ಮುನ್ನಡೆಯುತ್ತೇವೆ ಎಂದಿದ್ದಾರೆ(ಏಜೆನ್ಸೀಸ್​).