ನಾವು ಭಿಕ್ಷುಕರಲ್ಲ ಎಂದ ಕೈ ನಾಯಕನಿಗೆ ಅಹಂ ಬಿಡಿ ಎಂದು ಎಸ್‌ಪಿ ಸಂಸದೆ ತಿರುಗೇಟು!  
ದೇಶ

ಬೀದಿಗೆ ಬಂತು ಇಂಡಿಯಾ ಒಕ್ಕೂಟದ ಕಿತ್ತಾಟ: ನಾವು ಭಿಕ್ಷುಕರಲ್ಲ ಎಂದ ಕೈ ನಾಯಕನಿಗೆ ಅಹಂ ಬಿಡಿ ಎಂದು ಎಸ್‌ಪಿ ಸಂಸದೆ ತಿರುಗೇಟು! | Congress-SP Alliance

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ವಿಚಾರವಾಗಿ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ (Congress-SP Alliance) ನಡುವಿನ ಭಿನ್ನಮತ ತಾರಕಕ್ಕೇರಿದ್ದು, ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರ ಭಿಕ್ಷುಕರು ಎಂಬ ಹೇಳಿಕೆಗೆ ಎಸ್‌ಪಿ ಸಂಸದೆ ಇಕ್ರಾ ಹಸನ್ ತೀವ್ರ ತಿರುಗೇಟು ನೀಡಿದ್ದಾರೆ.

ಸೀಟು ಹಂಚಿಕೆ ಬಿಕ್ಕಟ್ಟು ಉಲ್ಬಣಿಸಿರುವ ಬೆನ್ನಲ್ಲೇ ಸಹರಾನ್‌ಪುರದಲ್ಲಿ ಎಸ್‌ಪಿ ವಿರುದ್ಧವೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು, ಉಭಯ ಪಕ್ಷಗಳ ಮೈತ್ರಿ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮೇಲ್ನೋಟಕ್ಕೆ ಒಗ್ಗಟ್ಟು ಪ್ರದರ್ಶಿಸಿದ್ದ ಉಭಯ ಪಕ್ಷಗಳ ನಡುವಿನ ಅಸಮಾಧಾನ ಈಗ ಬೀದಿಗೆ ಬಂದಿದ್ದು, ಮುಂದಿನ ಕೆಲವೇ ದಿನಗಳಲ್ಲಿ ನಡೆಯಲಿರುವ ಮತ್ತೊಂದು ಸುತ್ತಿನ ಮಾತುಕತೆ ದೋಸ್ತಿಯ ಭವಿಷ್ಯವನ್ನು ನಿರ್ಧರಿಸಲಿದೆ.

ಇಮ್ರಾನ್ ಮಸೂದ್ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಇಕ್ರಾ ಹಸನ್, ಇದು ಬೇಜವಾಬ್ದಾರಿ ಹೇಳಿಕೆ ಎಂದಿದ್ದಾರೆ. ಅಖಿಲೇಶ್ ಯಾದವ್ ಅವರ ಪೋಸ್ಟ್ ಸಾಮರಸ್ಯದಿಂದ ಕೂಡಿತ್ತು ಎಂದಿರುವ ಅವರು, ಕಾಂಗ್ರೆಸ್‌ನ ಒಬ್ಬ ವ್ಯಕ್ತಿ ಮಾತ್ರ ಏಕೆ ಇಷ್ಟೊಂದು ರಾದ್ಧಾಂತ ಮಾಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಯಾವುದೇ ಒಬ್ಬ ವ್ಯಕ್ತಿಯ ಮಹತ್ವಾಕಾಂಕ್ಷೆ ಅಥವಾ ಅಹಂಗಿಂತ ಮೈತ್ರಿಕೂಟ ದೊಡ್ಡದು ಎಂದು ಕುಟುಕಿದ್ದಾರೆ. ಎಸ್‌ಪಿಯ ಮತ್ತೊಬ್ಬ ಸಂಸದ ಜಿಯಾ ಉರ್ ರೆಹಮಾನ್ ಬರ್ಕ್ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದು, ಇದು ಮಸೂದ್ ಅವರ ವೈಯಕ್ತಿಕ ಅಭಿಪ್ರಾಯವಿರಬಹುದು, ಕಾಂಗ್ರೆಸ್‌ನಿಂದ ಯಾವುದೇ ಅಧಿಕೃತ ಸಂದೇಶ ಬಂದಿಲ್ಲ ಎಂದಿದ್ದಾರೆ.

ಸಂಸದ ಇಮ್ರಾನ್ ಮಸೂದ್ ಹೇಳಿದ್ದೇನು?

403 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಕೇವಲ 26 ಸ್ಥಾನಗಳನ್ನು ನೀಡುವ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿಯ ಪ್ರಸ್ತಾವನೆ ಕಾಂಗ್ರೆಸ್ ಪಾಳಯವನ್ನು ಕೆರಳಿಸಿದ್ದು, ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಸಂಸದ ಇಮ್ರಾನ್ ಮಸೂದ್ ನಾವೇನು ಭಿಕ್ಷುಕರಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಇಮ್ರಾನ್ ಮಸೂದ್, ಎಸ್‌ಪಿ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದರು. ನಿಮ್ಮ ಷರತ್ತುಗಳಿಗೆ ತಕ್ಕಂತೆ ನಾವು ಏಕೆ ಚುನಾವಣೆ ಎದುರಿಸಬೇಕು ಮತ್ತು ನಮ್ಮ ಗೆಲುವಿನ ಸರಾಸರಿಯನ್ನು ನಾವೇಕೆ ಹಾಳುಮಾಡಿಕೊಳ್ಳಬೇಕು? ನಿಮಗೆ ಕೆನೆ ಬೇಕು, ಆದರೆ ನಮಗೆ ಮಜ್ಜಿಗೆಯನ್ನೂ ಸಹ ಕೊಡಲು ಸಿದ್ಧರಿಲ್ಲ. ನೀವು ಕೊಟ್ಟಷ್ಟನ್ನು ತೆಗೆದುಕೊಳ್ಳಲು ನಾವೇನು ಭಿಕ್ಷುಕರಲ್ಲ. ನಮಗೆ ಅಖಿಲೇಶ್ ಯಾದವ್​ ಅವರ ಸೂಚನೆಗಳ ಅಗತ್ಯವಿಲ್ಲ ಎಂದು ಮಸೂದ್ ಗುಡುಗಿದ್ದಾರೆ. ಪ್ರಾರಂಭದಲ್ಲಿ 181 ಸ್ಥಾನಗಳನ್ನು ಕೇಳಿದ್ದ ಕಾಂಗ್ರೆಸ್, ನಂತರ ತನ್ನ ಬೇಡಿಕೆಯನ್ನು 131ಕ್ಕೆ ಮತ್ತು ಬಳಿಕ 110ಕ್ಕೆ ಇಳಿಸಿತ್ತು. ಆದರೆ ಎಸ್‌ಪಿ ಕೇವಲ 26 ಸ್ಥಾನಗಳನ್ನು ನೀಡುತ್ತೇವೆ ಎಂದು ಹೇಳಿರುವುದು ಕೈ ನಾಯಕರ ಆಕ್ರೋಶವನ್ನು ಹೆಚ್ಚಿಸಿದೆ.

ಐದು ಕ್ಷೇತ್ರಗಳಿಗೆ ಟಿಕೆಟ್​ ಘೋಷಿಸಿದ ಎಸ್​ಪಿ

ಸೀಟು ಹಂಚಿಕೆ ಮಾತುಕತೆ ಇನ್ನೂ ನಡೆಯುತ್ತಿರುವಾಗಲೇ ಸಮಾಜವಾದಿ ಪಕ್ಷ ಏಕಪಕ್ಷೀಯವಾಗಿ ಐದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವುದು ಕಾಂಗ್ರೆಸ್ ಕೋಪಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಇದರಲ್ಲಿ ಸಹರಾನ್‌ಪುರ ಮತ್ತು ಬೆಹತ್ ಕ್ಷೇತ್ರಗಳು ಕಾಂಗ್ರೆಸ್‌ನ ಬೇಡಿಕೆ ಪಟ್ಟಿಯಲ್ಲಿದ್ದವು. ಪಕ್ಷದ ಆಯ್ಕೆಗಿಂತ ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಸೀಟು ಹಂಚಿಕೆ ಮಾಡಬೇಕು ಎಂಬ ಅಖಿಲೇಶ್ ಯಾದವ್ ಅವರ ನಿಲುವನ್ನೂ ಮಸೂದ್ ಪ್ರಶ್ನಿಸಿದ್ದಾರೆ. ಅವರ ಬಳಿ ಗೆಲ್ಲುವ ಗ್ಯಾರಂಟಿ ಇದ್ದಿದ್ದರೆ 2022ರಲ್ಲೇ ಏಕೆ ಸರ್ಕಾರ ರಚಿಸಲಿಲ್ಲ? 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರ ಬೆಂಬಲದಿಂದಷ್ಟೇ ಎಸ್‌ಪಿ ಗೆಲುವು ಸಾಧಿಸಿತು. ಸಹರಾನ್‌ಪುರದಲ್ಲಿ ನಾನಿಲ್ಲದೆ ನಿಮ್ಮ ಗೆಲ್ಲುವ ಸಾಮರ್ಥ್ಯ ಏನು? 2022ರಲ್ಲಿ ನಾನು ನಿಮ್ಮೊಂದಿಗಿದ್ದಾಗ ಆ ಎರಡು ಸ್ಥಾನಗಳನ್ನು ಗೆದ್ದಿದ್ದಿರಿ, ಅಲ್ಲಿ ಮೊದಲು ಕಾಂಗ್ರೆಸ್ ಶಾಸಕರಿದ್ದರು ಎಂದು ಮಸೂದ್ ತಿರುಗೇಟು ನೀಡಿದ್ದಾರೆ(ಏಜೆನ್ಸೀಸ್​).