ನಮ್ಮ ಸಮಾಧಿಯ ಮೇಲೆ ತಾಜ್ ಮಹಲ್ ಕಟ್ಟಲು ಬಿಡಲ್ಲ, ಗುಡ್​ ಬೈ: ಸೀಟು ಹಂಚಿಕೆ ವಿಚಾರದಲ್ಲಿ ಎಸ್‌ಪಿ ವಿರುದ್ಧ ಕೈ ನಾಯಕನ ಆಕ್ರೋಶ! | Imran Masood

ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, ಮಾಜಿ ಸಿಎಂ ಅಖಿಲೇಶ್ ಯಾದವ್
ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, ಮಾಜಿ ಸಿಎಂ ಅಖಿಲೇಶ್ ಯಾದವ್
Published on: 

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆಗಳು ದಿನದಿಂದ ದಿನಕ್ಕೆ ತೀವ್ರ ಕಾವು ಪಡೆದುಕೊಳ್ಳುತ್ತಿವೆ. ಈ ನಡುವೆ, ಸಮಾಜವಾದಿ ಪಕ್ಷದ ನಡೆಯ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿರುವ ಕಾಂಗ್ರೆಸ್ ಸಂಸದ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, ಅಖಿಲೇಶ್ ಯಾದವ್ ಅವರು ಮುಖ್ಯಮಂತ್ರಿಯಾಗಬೇಕೆಂದರೆ ಕಾಂಗ್ರೆಸ್‌ಗೆ ತಕ್ಕ ಗೌರವ ಮತ್ತು ಪ್ರಾಮುಖ್ಯತೆ ನೀಡಲೇಬೇಕು, ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ, ನಮ್ಮ ದಾರಿ ನಮಗೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ಇಂಡಿಯಾ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಮಸೂದ್, ಉಭಯ ಪಕ್ಷಗಳ ನಡುವೆ ಯಾವುದೇ ಜಂಟಿ ಘೋಷಣೆಯಾಗುವ ಮೊದಲೇ ಸಮಾಜವಾದಿ ಪಕ್ಷವು ಏಕಪಕ್ಷೀಯವಾಗಿ ಐದು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿರುವುದನ್ನು ಖಾರವಾಗಿ ಪ್ರಶ್ನಿಸಿದ್ದಾರೆ. ಸೀಟು ಹಂಚಿಕೆ ಮಾತುಕತೆಯ ಗಂಭೀರತೆಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿರುವ ಅವರು, ಗೌರವಯುತ ಸೀಟು ಹಂಚಿಕೆ ಎಂದರೆ ಕಾಂಗ್ರೆಸ್‌ಗೆ ಕನಿಷ್ಠ 105 ಸ್ಥಾನಗಳನ್ನು ಬಿಟ್ಟುಕೊಡುವುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Also Read
'ನಾವೇನು ಭಿಕ್ಷುಕರೇ, ಹೀಗಾದ್ರೆ ಮೈತ್ರಿ ಉಳಿಯತ್ತಾ?'; ಸಮಾಜವಾದಿ ಪಕ್ಷದ 26 ಸೀಟುಗಳ ಆಫರ್‌ಗೆ ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್ ಕಿಡಿ
ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, ಮಾಜಿ ಸಿಎಂ ಅಖಿಲೇಶ್ ಯಾದವ್

ನಿಮ್ಮ ಶಕ್ತಿಯನ್ನು ಹತ್ತು ಪಟ್ಟು ಹೆಚ್ಚಿಸುತ್ತೇವೆ!

ಮೈತ್ರಿ ಕುರಿತು ಮಾತನಾಡಿದ ಮಸೂದ್, ಗೌರವಯುತ ಒಪ್ಪಂದವಾಗಬೇಕು ಎಂದು ನಾವು ಈಗಾಗಲೇ ಹೇಳಿದ್ದೇವೆ. ಅಂದರೆ ನಮಗೆ 105 ಸೀಟುಗಳು ಬೇಕು. ಈ ಹಿಂದೆ ಅಖಿಲೇಶ್ ಜೀ ಮುಖ್ಯಮಂತ್ರಿಯಾಗಿದ್ದಾಗ ನಾವು ಕೇವಲ ಏಳು ಸ್ಥಾನಗಳಲ್ಲಿ ಸ್ಪರ್ಧಿಸಿದ್ದೆವು. ಈಗ ಅಖಿಲೇಶ್ ಜೀ ಮತ್ತೆ ಮುಖ್ಯಮಂತ್ರಿಯಾಗಬೇಕೆಂದರೆ ನಮಗೆ ಗೌರವ ಕೊಡಬೇಕು. ಇಲ್ಲದಿದ್ದರೆ ನೀವು ನಿಮ್ಮ ಕೆಲಸ ಮಾಡಿ, ನಾವು ನಮ್ಮ ಕೆಲಸ ಮಾಡುತ್ತೇವೆ ಎಂದು ಖಡಕ್ ಆಗಿ ಹೇಳಿದ್ದಾರೆ. ಒಂದು ವೇಳೆ 105ಕ್ಕಿಂತ ಕಡಿಮೆ ಸ್ಥಾನಗಳು ಸಿಕ್ಕರೆ ಮೈತ್ರಿಯ ಬಗ್ಗೆ ಮರುಪರಿಶೀಲಿಸುತ್ತೀರಾ ಎಂಬ ಪ್ರಶ್ನೆಗೆ, ಪಕ್ಷದ ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದಕ್ಕೆ ನಾನು ಬದ್ಧ. ನಾನು ಪಕ್ಷದ ಅಸ್ತಿತ್ವ ಮತ್ತು ಕಾರ್ಯಕರ್ತರ ಗೌರವಕ್ಕಾಗಿ ಹೋರಾಡುತ್ತಿದ್ದೇನೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ತಳಮಟ್ಟದಲ್ಲಿ ಕಾರ್ಯಕರ್ತರ ಬಲವಿಲ್ಲ ಎಂಬ ಟೀಕೆಗಳಿಗೆ ತಿರುಗೇಟು ನೀಡಿದ ಅವರು, ನಮ್ಮ ಬಳಿ ಬೂತ್ ನಿರ್ವಹಿಸಲು ಕಾರ್ಯಕರ್ತರೇ ಇಲ್ಲ ಎಂದಾದರೆ ಮೈತ್ರಿಯಲ್ಲಿ ನಮ್ಮ ಅವಶ್ಯಕತೆಯಾದರೂ ಏನಿದೆ? ನಾವೇನೋ ಸೊನ್ನೆ ಇರಬಹುದು. ಆದರೆ ನೀವು ನಮ್ಮನ್ನು ಎಲ್ಲಿ ನಿಲ್ಲಿಸುತ್ತೀರೋ ಅಲ್ಲಿ ನಿಮ್ಮ ಶಕ್ತಿಯನ್ನು ಹತ್ತು ಪಟ್ಟು ಹೆಚ್ಚಿಸುತ್ತೇವೆ. ಒಂದರ ಮುಂದೆ ಸೊನ್ನೆ ಸೇರಿದರೆ ಹತ್ತಾಗುತ್ತದೆ, ಹತ್ತರ ಮುಂದೆ ಸೇರಿದರೆ ನೂರಾಗುತ್ತದೆ, ನೂರರ ಮುಂದೆ ಸೇರಿದರೆ ಸಾವಿರವಾಗುತ್ತದೆ. ನಮ್ಮ ಮಹತ್ವವನ್ನು ಅರ್ಥಮಾಡಿಕೊಳ್ಳಿ. ಒಂದು ವೇಳೆ ಅರ್ಥವಾಗದಿದ್ದರೆ ಸರಿ, ಓಕೆ, ಗುಡ್‌ಬೈ. ತುಂಬಾ ಧನ್ಯವಾದಗಳು ಎಂದು ವ್ಯಂಗ್ಯವಾಡಿದ್ದಾರೆ.

2024ರ ಕ್ರೆಡಿಟ್ ರಾಹುಲ್ ಗಾಂಧಿಗೆ ಸಲ್ಲಬೇಕು

2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ ಇಂಡಿಯಾ ಮೈತ್ರಿಕೂಟ 43 ಸ್ಥಾನಗಳನ್ನು ಗೆಲ್ಲಲು ರಾಹುಲ್ ಗಾಂಧಿ ಅವರ ನಾಯಕತ್ವವೇ ಪ್ರಮುಖ ಕಾರಣ ಎಂದು ಮಸೂದ್ ಪ್ರತಿಪಾದಿಸಿದ್ದಾರೆ. ಬಿಜೆಪಿಯನ್ನು ಸೋಲಿಸುವ ಗ್ಯಾರಂಟಿ ಇರುವುದು ನಮ್ಮ ನಾಯಕರಿಗೆ ಮಾತ್ರ. 2024ರ ಚುನಾವಣೆಯನ್ನು ಗೆದ್ದವರು ರಾಹುಲ್ ಗಾಂಧಿ. ಭಾರತ್ ಜೋಡೋ ಯಾತ್ರೆಯ ನಂತರ ದೇಶದ ರಾಜಕೀಯ ವಾತಾವರಣದಲ್ಲಿ ದೊಡ್ಡ ಬದಲಾವಣೆಯಾಯಿತು ಎಂದು ಹೇಳಿದ್ದಾರೆ.

ಸಮಾಜವಾದಿ ಪಕ್ಷದ ಧೋರಣೆಯನ್ನು ಟೀಕಿಸಿದ ಮಸೂದ್​​, ನಿಮ್ಮ ಹೋರಾಟ ಬಿಜೆಪಿ ವಿರುದ್ಧವೋ ಅಥವಾ ನಮ್ಮ ವಿರುದ್ಧವೋ ಎಂಬುದೇ ಅರ್ಥವಾಗುತ್ತಿಲ್ಲ. ನಮ್ಮ ಕುತ್ತಿಗೆಯ ಮೇಲೆ ಕಾಲಿಟ್ಟು, ನಮ್ಮ ಸಮಾಧಿಯ ಮೇಲೆ ತಾಜ್ ಮಹಲ್ ಕಟ್ಟಲು ನೀವು ಬಯಸಿದರೆ ನಮಗೆ ಉಸಿರುಗಟ್ಟುತ್ತದೆ. ನಾವು ಖಂಡಿತವಾಗಿಯೂ ಹೋರಾಡುತ್ತೇನೆ ಮತ್ತು ತಿರುಗಿ ಬೀಳುತ್ತೇನೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ(ಏಜೆನ್ಸೀಸ್​).