

ಯುಪಿ ಚುನಾವಣೆ ಸೀಟು ಹಂಚಿಕೆ ಬಿಕ್ಕಟ್ಟು, 26 ಸೀಟು ಕೊಟ್ಟ SP ವಿರುದ್ಧ ಕಾಂಗ್ರೆಸ್ ನಾಯಕ ಇಮ್ರಾನ್ ಮಸೂದ್ ಕಿಡಿ.
ನಾವು ಸೀಟು ಕೇಳದೆಯೇ ನೀವು 26 ಸೀಟುಗಳನ್ನು ಘೋಷಿಸುವ ಮೂಲಕ ನಮ್ಮನ್ನು ಹೀಗೆ ನಡೆಸಿಕೊಳ್ಳುತ್ತೀರಾ?.
ನಾನು ನನ್ನ ಪಕ್ಷಕ್ಕೆ ಬದ್ಧನಾಗಿದ್ದೇನೆ ಮತ್ತು ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ ಎಂದ ಇಮ್ರಾನ್ ಮಸೂದ್.
ಲಖನೌ: 'ನನಗೆ ಅರ್ಥವಾಗುತ್ತಿಲ್ಲ. ನಾವೇನು ಭಿಕ್ಷುಕರೇ?. ನಾವು ಸೀಟು ಕೇಳದೆಯೇ 26 ಸೀಟು ಘೋಷಿಸುವ ಮೂಲಕ ನಮ್ಮನ್ನು ಸಮಾಜವಾದಿ ಪಕ್ಷ ಹೀಗೆ ನಡೆಸಿಕೊಳ್ಳುವುದೇ?. ಮೈತ್ರಿ ಎಲ್ಲಿದೆ? ನೀವು ಹೀಗೆ ವರ್ತಿಸಿದರೆ ಮೈತ್ರಿ ಎಲ್ಲಿ ಉಳಿಯುತ್ತದೆ' ಎಂದು ಕಿಡಿಕಾರಿದ್ದು ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ2027ಕ್ಕಾಗಿ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿರುವ ನಡುವೆಯೇ ಎಸ್ಪಿ ಮತ್ತು ಕಾಂಗ್ರೆಸ್ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿದೆ.
403 ಸ್ಥಾನಗಳಿಗೆ 2027ರ ಫೆಬ್ರವರಿ-ಮಾರ್ಚ್ನಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ. ಈಗಾಗಲೇ ಸಮಾಜವಾದಿ ಪಕ್ಷ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಕಾಂಗ್ರೆಸ್ ಸುಮಾರು 130 ಸೀಟುಗಳಿಗೆ ಬೇಡಿಕೆ ಇಟ್ಟಿದ್ದರೂ, ಕೇವಲ 26 ಸೀಟು ನೀಡಲು SP ಮುಂದಾಗಿರುವುದು ತಕ್ಷಣದ ಸಂಘರ್ಷಕ್ಕೆ ಕಾರಣವಾಗಿದೆ. ಅಖಿಲೇಶ್ ಯಾದವ್ ಅವರ ಈ ನಿರ್ಧಾರಕ್ಕೆ ಉತ್ತರ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಸಂಸದ ಇಮ್ರಾನ್ ಮಸೂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2027ರ ಉತ್ತರ ಪ್ರದೇಶ ಚುನಾವಣೆಗಾಗಿ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿವೆ. ಈ ಹೊತ್ತಿನಲ್ಲಿ ಸಂಸದ ಇಮ್ರಾನ್ ಮಸೂದ್ ಅವರಿಂದ ಕೇಳಿ ಬಂದಿರುವ ಈ ಪ್ರತಿಕ್ರಿಯೆಯು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
'ಮೈತ್ರಿ ಎಲ್ಲಿದೆ? ನೀವು ಹೀಗೆ ವರ್ತಿಸಿದರೆ ಮೈತ್ರಿ ಎಲ್ಲಿ ಉಳಿಯುತ್ತದೆ? ನಾವು ಏನು ಮಾಡಬೇಕೆಂದು ನಮ್ಮ ನಾಯಕತ್ವ ನಿರ್ಧರಿಸುತ್ತದೆ. ಇಲ್ಲೊಂದು ಮಾತನಾಡುತ್ತೀರಿ, ಅಲ್ಲಿ ಬೇರೆಯದೇ ನಡೆಯುತ್ತದೆ'ಎಂದು ಬೇಸರ ವ್ಯಕ್ತಪಡಿಸಿದರು.
'ಇದು ನನ್ನ ಗ್ರಹಿಕೆಗೆ ಮೀರಿದ್ದು, ಪಕ್ಷವೇ ಈಬಗ್ಗೆ ನಿರ್ಧಾರ ಕೈಗೊಳ್ಳಬೇಕು. ನಾವೇನು ಭಿಕ್ಷುಕರೇ? ನಾವು ನಿಮ್ಮನ್ನು ಸೀಟು ಕೇಳದೆಯೇ ನೀವು 26 ಸೀಟುಗಳನ್ನು ಘೋಷಿಸುವ ಮೂಲಕ ನಮ್ಮನ್ನು ಹೀಗೆ ನಡೆಸಿಕೊಳ್ಳುತ್ತೀರಾ? ನಾವು ನಿಮ್ಮ ಬಳಿ ಸೀಟು ಕೇಳಿಯೇ ಇರಲಿಲ್ಲ. ನೀವೇ ಷರತ್ತುಗಳನ್ನು ವಿಧಿಸುವುದು ನಿಮ್ಮ ಕೆಲಸದ ಶೈಲಿಯಾಗಿದ್ದರೆ, ನನ್ನಂತಹ ಸ್ವಾಭಿಮಾನಿ ವ್ಯಕ್ತಿಗೆ ಇವು ಅರ್ಥವಾಗುವುದಿಲ್ಲ. ನಿಮಗೆ ಹೇಗೂ ಮೈತ್ರಿಯ ಬಗ್ಗೆ ಕಾಳಜಿ ಇಲ್ಲ. ನೀವು ನಿಮ್ಮದೇ ಪಕ್ಷವನ್ನು ನಡೆಸುತ್ತಿದ್ದೀರಿ, ಹಾಗೆಯೇ ಮುಂದುವರಿಸಿ. ನಾವು ನಿಮಗೆ ಅಡ್ಡಿಪಡಿಸುವುದಿಲ್ಲ' ಎಂದು ನೇರ ವಾಗ್ದಾಳಿ ನಡೆಸಿದ್ದಾರೆ ಮಸೂದ್.
'ಅಂತಿಮ ನಿರ್ಧಾರ ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟಿದ್ದು. ಅಖಿಲೇಶ್ ಜಿ ಏನು ಮಾಡುತ್ತಿದ್ದಾರೆ ಅಥವಾ ಮಾಡುತ್ತಿಲ್ಲ ಎಂಬುದು ನನಗೆ ದೊಡ್ಡ ವಿಷಯವಲ್ಲ. ನಾನು ನನ್ನ ಪಕ್ಷಕ್ಕೆ ಬದ್ಧನಾಗಿದ್ದೇನೆ ಮತ್ತು ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ' ಎಂದು ಸ್ಪಷ್ಟನೆ ಕೊಟ್ಟರು.
'ರಾಹುಲ್ ಗಾಂಧಿ ಬರುತ್ತಾರೆ, ಪ್ರಿಯಾಂಕಾ ಗಾಂಧಿ ಬರುತ್ತಾರೆ, ನಮ್ಮ ನಾಯಕತ್ವ ಯಾವ ಸೂಚನೆ ನೀಡುತ್ತದೆಯೋ ಅದನ್ನು ನಾವು ಪಾಲಿಸಬೇಕು. ಎಸ್ಪಿ ಘೋಷಣೆಯಿಂದ ನಮಗೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಆದರೆ, ಹೋರಾಟ ಇರುವುದು ಬಿಜೆಪಿ ವಿರುದ್ಧವೋ ಅಥವಾ ಕಾಂಗ್ರೆಸ್ ವಿರುದ್ಧವೋ ಎಂಬುದನ್ನು ಖಂಡಿತವಾಗಿಯೂ ಅವರು ನಿರ್ಧರಿಸಬೇಕು' ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಉದಿತ್ ರಾಜ್ ಪ್ರತಿಕ್ರಿಯಿಸಿ, 'ಉತ್ತರ ಪ್ರದೇಶದಲ್ಲಿ ಸಾಕಷ್ಟು ರಾಜಕೀಯ ಲೆಕ್ಕಾಚಾರಗಳ ಅಗತ್ಯವಿದೆ. ರಾಜಕೀಯ ಹೊಂದಾಣಿಕೆ, ಗೆಲ್ಲುವ ಸಾಮರ್ಥ್ಯ ಮತ್ತು ಅಭ್ಯರ್ಥಿಗಳ ಆಯ್ಕೆಯಂತಹ ಅಂಶಗಳನ್ನು ಪರಿಗಣಿಸಲಾಗುವುದು'ಎಂದು ತಿಳಿಸಿದ್ದಾರೆ.
2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸೀಟು ಹಂಚಿಕೆ ಕುರಿತು ಮಂಗಳವಾರ ನವದೆಹಲಿಯಲ್ಲಿ ಉಭಯ ಪಕ್ಷಗಳ ನಡುವೆ ನಡೆದ 3.5 ಗಂಟೆಗಳ ಸುದೀರ್ಘ ಸಭೆಯ ನಂತರ ಈ ಬೆಳವಣಿಗೆ ನಡೆದಿದೆ.
ಮೊದಲ ಪಟ್ಟಿ ಪ್ರಕಟಿಸಿದ ಬಳಿಕ ಎಕ್ಸ್ ಖಾತೆಯಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ಅಖಿಲೇಶ್ ಯಾದವ್, ಮೊದಲ 26 ಸೀಟುಗಳೊಂದಿಗೆ ಗೆಲುವಿನ ಆರಂಭ ಮಾಡಲಾಗಿದೆ. ಬುದ್ಧಿವಂತಿಕೆಯಿಂದ ಒಟ್ಟಾಗಿ ಕೆಲಸ ಮಾಡಿದರೆ, ವಿಷಯಗಳು ಮುಂದುವರಿಯುತ್ತವೆಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).