ಅಪ್ಪಟ ವೈರಿಗಳ 'ಅಪವಿತ್ರ' ಮೈತ್ರಿ? ವಿಜಯ್ ಅಬ್ಬರಕ್ಕೆ ನಡುಗಿದ ದ್ರಾವಿಡ ಕೋಟೆ; ಒಂದಾಗುತ್ತಾರಾ ಸ್ಟಾಲಿನ್-ಇಪಿಎಸ್? ಇದು ತಮಿಳು ರಾಜಕೀಯದ ಕ್ಲೈಮ್ಯಾಕ್ಸ್ ಪ್ಲಾನ್!
ಚೆನ್ನೈ: ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇದು ಅತ್ಯಂತ ಆಶ್ಚರ್ಯಕರ ಮತ್ತು ಸಂಚಲನ ಮೂಡಿಸಿರುವ ಸುದ್ದಿ ಬರುತ್ತಿದೆ. ಕಳೆದ ಐದು ದಶಕಗಳಿಂದ ಪರಸ್ಪರ ಬದ್ಧ ವೈರಿಗಳಂತೆ ಹೋರಾಡುತ್ತಾ ಬಂದಿರುವ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು(DMK - AIADMK Alliance) ಈಗ ಕೈಜೋಡಿಸಲು ಮುಂದಾಗಿವೆಯೇ ಎಂಬ ಪ್ರಶ್ನೆಗೆ ಈಗ ತಮಿಳುನಾಡು ರಾಜಕೀಯ ಪಡಸಾಲೆಯಲ್ಲಿ ಹೌದು ಎಂಬ ಉತ್ತರ ಕೇಳಿಬರುತ್ತಿದೆ. ಈ ಅನಿರೀಕ್ಷಿತ ಬೆಳವಣಿಗೆಗೆ ಕಾರಣವಾಗಿರುವ ಏಕೈಕ ಹೆಸರು ದಳಪತಿ ವಿಜಯ್ ಆಗಿದ್ದಾರೆ.
ಎಂಜಿಆರ್ ದಿನಗಳ ನೆನಪು: ಉದಯನಿಧಿ ಸ್ಟಾಲಿನ್ ಪಾಳಯದಲ್ಲಿ ಆತಂಕ
ವರದಿಗಳ ಪ್ರಕಾರ, ಡಿಎಂಕೆ ಪಕ್ಷದೊಳಗೆ ಅದರಲ್ಲೂ ವಿಶೇಷವಾಗಿ ಉದಯನಿಧಿ ಸ್ಟಾಲಿನ್ ಅವರ ಆಪ್ತ ವಲಯದಲ್ಲಿ ಒಂದು ದೊಡ್ಡ ಮಟ್ಟದ ಆತಂಕ ಮನೆಮಾಡಿದೆ. ನಟ ವಿಜಯ್ ಅವರ ಜನಪ್ರಿಯತೆ ಮತ್ತು ಅವರ ಪಕ್ಷ ತಮಿಳುನಾಡು ವೆಟ್ರಿ ಕಳಗಂಗೆ ಸಿಗುತ್ತಿರುವ ಬೆಂಬಲವು, ಹಿಂದೆ ಎಂ.ಜಿ. ರಾಮಚಂದ್ರನ್ ಅವರು ಸೃಷ್ಟಿಸಿದ್ದ ಅಲೆಯನ್ನು ನೆನಪಿಸುತ್ತಿದೆ.
ಅಂದು ಎಂಜಿಆರ್ ತಮ್ಮ ವರ್ಚಸ್ಸಿನಿಂದ ಡಿಎಂಕೆಯನ್ನು ದಶಕಗಳ ಕಾಲ ಅಧಿಕಾರದಿಂದ ದೂರವಿಟ್ಟಿದ್ದರು. ಇಂದು ವಿಜಯ್ ಕೂಡ ಅದೇ ರೀತಿಯ ಮಾಸ್ ಫಿನಾಮಿನಾ ಸೃಷ್ಟಿಸಿ ದ್ರಾವಿಡ ರಾಜಕಾರಣದ ಅಡಿಪಾಯವನ್ನೇ ಅಲ್ಲಾಡಿಸಬಹುದು ಎಂಬ ಭಯ ಡಿಎಂಕೆ ನಾಯಕರನ್ನು ಕಾಡುತ್ತಿದೆ.
ಎಐಎಡಿಎಂಕೆ ಅಸ್ತಿತ್ವದ ಹೋರಾಟ
ಮತ್ತೊಂದೆಡೆ, ಜಯಲಲಿತಾ ಅವರ ನಿಧನದ ನಂತರ ಎಐಎಡಿಎಂಕೆ ಸತತ ನಾಲ್ಕು ಚುನಾವಣೆಗಳಲ್ಲಿ ಸೋಲನ್ನು ಅನುಭವಿಸಿದೆ. ಪಕ್ಷವು ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ವಿಜಯ್ ಅವರ ಪ್ರವೇಶದಿಂದ ಎಐಎಡಿಎಂಕೆಯ ಸಾಂಪ್ರದಾಯಿಕ ಮತಬ್ಯಾಂಕ್ ಕುಸಿಯುವ ಭೀತಿ ಇರುವುದರಿಂದ, ಡಿಎಂಕೆ ಜೊತೆಗೂಡಿ ವಿಜಯ್ ಅವರನ್ನು ತಡೆಯಲು ಪಕ್ಷದ ಒಂದು ವರ್ಗ ಉತ್ಸುಕವಾಗಿದೆ ಎನ್ನಲಾಗಿದೆ.
ಬಿಜೆಪಿ ಎಂಬ ಅಚ್ಚರಿಯ ಕೊಂಡಿ..?
ಈ ಎರಡು ಶತ್ರು ಪಕ್ಷಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿರುವುದು ಬಿಜೆಪಿ ಎಂಬ ಮಾತುಗಳು ಕೇಳಿಬರುತ್ತಿವೆ. ವಿಜಯ್ ಮತ್ತು ಕಾಂಗ್ರೆಸ್ ಮೈತ್ರಿಯಿಂದ ಕೇಂದ್ರದಲ್ಲಿ ಕಾಂಗ್ರೆಸ್‌ಗೆ ಬಲ ಸಿಗಬಾರದು ಎಂಬುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಹೀಗಾಗಿ, ದ್ರಾವಿಡ ಪಕ್ಷಗಳನ್ನು ಒಗ್ಗೂಡಿಸಿ ವಿಜಯ್ ಅವರನ್ನು ಏಕಾಂಗಿಯಾಗಿಸಲು ತೆರೆಯ ಮರೆಯ ಸಂಚು ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ದ್ರಾವಿಡ ಸಿದ್ಧಾಂತಕ್ಕೆ ಹೊಸ ಸವಾಲು
1969ರಲ್ಲಿ ಅಣ್ಣಾದೊರೈ ನಿಧನದ ನಂತರ ಕರುಣಾನಿಧಿ ಮತ್ತು ಎಂಜಿಆರ್ ನಡುವೆ ಉಂಟಾದ ಬಿರುಕು ತಮಿಳುನಾಡನ್ನು ಎರಡು ಧ್ರುವಗಳನ್ನಾಗಿ ವಿಭಜಿಸಿತ್ತು. 1990ರ ನಂತರ ಯಾವುದೇ ಮೂರನೇ ಪಕ್ಷ ಇಲ್ಲಿ ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗಿರಲಿಲ್ಲ. ಆದರೆ, ವಿಜಯ್ ಈಗ ಆ ಪದ್ಧತಿಯನ್ನು ಮುರಿಯಲು ಸಜ್ಜಾಗಿದ್ದಾರೆ.
ಸಿನೆಮಾ ವರ್ಚಸ್ಸು: ವಿಜಯ್ ಅವರ ಯುವ ಮತದಾರರ ಮೇಲಿನ ಹಿಡಿತ.
ಆಡಳಿತ ವಿರೋಧಿ ಅಲೆ: ಸಾಂಪ್ರದಾಯಿಕ ದ್ರಾವಿಡ ಪಕ್ಷಗಳ ಮೇಲಿನ ಬೇಸರ ವಿಜಯ್‌ಗೆ ಪ್ಲಸ್ ಆಗುತ್ತಿದೆ.
ಪೋಸ್ಟ್-ದ್ರಾವಿಡ ಯುಗ: ತಮಿಳುನಾಡು ಈಗ ದ್ರಾವಿಡ ಸಿದ್ಧಾಂತದಿಂದ ಹೊರಬಂದು ಹೊಸ ನಾಯಕತ್ವದ ಹುಡುಕಾಟದಲ್ಲಿದೆಯೇ ಎಂಬ ಚರ್ಚೆ ಶುರುವಾಗಿದೆ.
ಒಂದು ವೇಳೆ ಈ ಮಹಾ ಮೈತ್ರಿ ಸಂಭವಿಸಿದರೆ, ಅದು ತಮಿಳುನಾಡಿನ 50 ವರ್ಷಗಳ ರಾಜಕೀಯ ಇತಿಹಾಸದ ಅಂತ್ಯ ಮತ್ತು ಒಂದು ಹೊಸ ಸಂಘರ್ಷದ ಆರಂಭವಾಗಲಿದೆ. ಬದ್ಧ ವೈರಿಗಳು ಒಂದಾಗುತ್ತಿದ್ದಾರೆ ಎಂದರೆ, ವಿಜಯ್ ಅವರ ಶಕ್ತಿ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ,(ಏಜೆನ್ಸೀಸ್).