ಕಾಂಗ್ರೆಸ್​ ಅಧ್ಯಕ್ಷ ರಾಜಾ ವಾರಿಂಗ್ ರಾಜೀನಾಮೆ 
ದೇಶ

ಚುನಾವಣೆ ಹೊಸ್ತಿಲಲ್ಲೇ ಪಂಜಾಬ್ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ: ಅಧ್ಯಕ್ಷ ರಾಜಾ ವಾರಿಂಗ್ ರಾಜೀನಾಮೆ; ಹೊಸ ಸಾರಥಿ ಇವರೇನಾ..? | Raja Waring Resign

ಚಂಡೀಗಢ: ಪಂಜಾಬ್ ಕಾಂಗ್ರೆಸ್‌ನಲ್ಲಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿದ್ದ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯದ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ (Raja Waring Resign) ತಮ್ಮ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಚಂಡೀಗಢ: ಪಂಜಾಬ್ ಕಾಂಗ್ರೆಸ್‌ನಲ್ಲಿ ಕಳೆದ ಅನೇಕ ತಿಂಗಳುಗಳಿಂದ ನಡೆಯುತ್ತಿದ್ದ ಆಂತರಿಕ ಭಿನ್ನಮತ ಮತ್ತು ಬಣ ರಾಜಕೀಯದ ಹಿನ್ನೆಲೆಯಲ್ಲಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅಮರಿಂದರ್ ಸಿಂಗ್ ರಾಜಾ ವಾರಿಂಗ್ (Raja Waring Resign) ತಮ್ಮ ಸ್ಥಾನಕ್ಕೆ ಕೊನೆಗೂ ರಾಜೀನಾಮೆ ನೀಡಿದ್ದಾರೆಂದು ಪಕ್ಷದ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

ಮುಂಬರುವ 2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಈ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲೇ ಆ ಸ್ಥಾನಕ್ಕೆ ಮತ್ತೊಬ್ಬ ವ್ಯಕ್ತಿಯನ್ನು ಘೋಷಿಸುವ ನಿರೀಕ್ಷೆಯಿದೆ. ಪಂಜಾಬ್‌ನಲ್ಲಿ ಮುಂದಿನ ವರ್ಷದ ಆರಂಭದಲ್ಲೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ವಾರಿಂಗ್ ಜೊತೆ ದೂರವಾಣಿ ಮೂಲಕ ಮಾತನಾಡಿ, ರಾಜ್ಯ ಘಟಕದಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಸಿಇಸಿ ರಕ್ಷಣೆ ಕಾಯ್ದೆ ರದ್ದತಿಗೆ ಪ್ರತಿಪಕ್ಷಗಳ ಸುಪ್ರೀಂ ಪ್ಲಾನ್!....ಒಕ್ಕೂಟ ವಿಸ್ತರಣೆಗೆ ಮತ್ತೊಂದು ಪಕ್ಷಕ್ಕೆ ಆಹ್ವಾನ ನೀಡಿದ ಮಮತಾ ಬ್ಯಾನರ್ಜಿ | INDIA Bloc

ರಾಜಾ ವಾರಿಂಗ್ ರಾಜೀನಾಮೆಗೆ ಕಾರಣವೇನು...?

ರಾಜ್ಯ ಕಾಂಗ್ರೆಸ್ ಘಟಕದಲ್ಲಿ ದೀರ್ಘಕಾಲದಿಂದ ಮುಂದುವರಿದಿದ್ದ ಆಂತರಿಕ ಭಿನ್ನಮತದ ಕಾರಣದಿಂದ ವಾರಿಂಗ್ ಬುಧವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದರು ಎನ್ನಲಾಗಿದ್ದು, ಇವರ ಈ ಪದತ್ಯಾಗದಿಂದಾಗಿ ಪಂಜಾಬ್ ಕಾಂಗ್ರೆಸ್‌ನ ಹಲವು ಸಮಿತಿಗಳಲ್ಲಿಯೂ ಬದಲಾವಣೆಗಳಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಪಕ್ಷದ ನೂತನ ಪಂಜಾಬ್ ಉಸ್ತುವಾರಿ ಸಚಿನ್ ಪೈಲಟ್ ಅವರು, ಮುಂಬರುವ ವಿಧಾನಸಭೆ ಚುನಾವಣೆಯ ಸಿದ್ಧತೆಯ ಭಾಗವಾಗಿ ಹಿರಿಯ ನಾಯಕರು ಮತ್ತು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ರಾಜ್ಯ ಘಟಕದಿಂದ ಬಂದಿರುವ ಈ ಪ್ರತಿಕ್ರಿಯೆಗಳು ಹಾಗೂ ಅಭಿಪ್ರಾಯಗಳೇ ನಾಯಕತ್ವ ಬದಲಾವಣೆಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಮೂಲಗಳು ತಿಳಿಸಿವೆ. ವಾರಿಂಗ್ ಅವರನ್ನು ಬದಲಾಯಿಸುವ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ಅವರಿಗೆ ತಿಳಿಸಿದ್ದು, ಇದರ ಬೆನ್ನಲ್ಲೇ ವಾರಿಂಗ್ ತಮ್ಮ ರಾಜೀನಾಮೆಯನ್ನು ಸಲ್ಲಿಸಿರುವ ಸಾಧ್ಯತೆಗಳು ಹೆಚ್ಚು.

ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು 2022ರ ಏಪ್ರಿಲ್‌ನಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಸುಮಾರು ನಾಲ್ಕೂವರೆ ವರ್ಷಗಳ ಕಾಲ ರಾಜ್ಯ ಘಟಕವನ್ನು ಮುನ್ನಡೆಸಿದ್ದಾರೆ.

ಪಕ್ಷದೊಳಗೆ ಭಿನ್ನಮತ ತಾರಕಕ್ಕೇರಿದ್ದರೂ ಸಹ, ಹೈಕಮಾಂಡ್ ರಾಜಾ ವಾರಿಂಗ್ ಅವರನ್ನೇ ಮುಂದುವರಿಸಿ, ಚರಣ್‌ಜಿತ್ ಸಿಂಗ್ ಚನ್ನಿ ಅವರಿಗೆ ಪ್ರಮುಖ ಸಮಿತಿಯ ಜವಾಬ್ದಾರಿ ನೀಡಿತ್ತು. ಆದಾಗ್ಯೂ, ಈ ಅಧಿಕಾರ ಹಂಚಿಕೆಯು ಬಣಗಳ ನಡುವಿನ ತಿಕ್ಕಾಟವನ್ನು ಶಮನಗೊಳಿಸುವಲ್ಲಿ ವಿಫಲವಾಯಿತು. ಬದಲಿಗೆ, ಭಿನ್ನಮತೀಯ ನಾಯಕರು ರಾಜಾ ವಾರಿಂಗ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಲಾರಂಭಿಸಿದರು. ಅಷ್ಟೇ ಅಲ್ಲದೆ, ವಾರಿಂಗ್ ಅವರನ್ನು ಬೆಂಬಲಿಸುತ್ತಿದ್ದ ಅಂದಿನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಿರುದ್ಧವೂ ಬಂಡಾಯ ನಾಯಕರು ಮುನಿಸು ತೋರಿದ್ದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಹೈಕಮಾಂಡ್, ತುರ್ತು ಕ್ರಮವಾಗಿ ಸೆಪ್ಟೆಂಬರ್‌ನಲ್ಲಿ ಸಚಿನ್ ಪೈಲಟ್ ಅವರನ್ನು ಪಂಜಾಬ್‌ನ ನೂತನ ಉಸ್ತುವಾರಿಯನ್ನಾಗಿ ನೇಮಕ ಮಾಡಿತು.

ಯಾರಾಗ್ತಾರೆ ಮುಂದಿನ ಅಧ್ಯಕ್ಷ...?

ಮೂಲಗಳ ಪ್ರಕಾರ, ಗಾಂಧಿ ಜಯಂತಿಯಾದ ಅಕ್ಟೋಬರ್ 2ರಂದು ಕಾಂಗ್ರೆಸ್ ಪಕ್ಷವು ಹೊಸ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ. ಈ ಹುದ್ದೆಗೆ ಹಿಂದೂ ಮುಖವೊಂದನ್ನು ಪರಿಗಣಿಸುವ ಬಗ್ಗೆಯೂ ಪಕ್ಷವು ಚಿಂತನೆ ನಡೆಸಿದೆ. ಎಐಸಿಸಿ ಕೋಶಾಧಿಕಾರಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾದ ವಿಜಯ್ ಇಂದರ್ ಸಿಂಗ್ಲಾ ಅವರು ಮುಂಚೂಣಿಯಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ. ಪಿಟಿಐ ವರದಿಯ ಪ್ರಕಾರ, ಜುಲೈ 1 ರಂದು ಸಿಂಗ್ಲಾ ಅವರನ್ನು ಪಕ್ಷದ ಚುನಾವಣಾ ನಿರ್ವಹಣೆ ಮತ್ತು ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ನೇಮಿಸಲಾಗಿತ್ತು.

ಇವರಲ್ಲದೆ, ಚರ್ಚೆಯಲ್ಲಿರುವ ಇತರ ಪ್ರಮುಖ ನಾಯಕರು

  • ರಾಣಾ ಕೆ.ಪಿ. ಸಿಂಗ್ (ಕಾಂಗ್ರೆಸ್ ನಾಯಕ)

  • ಸುಖಜೀಂದರ್ ಸಿಂಗ್ ರಂಧಾವಾ (ಗುರ್ದಾಸ್ಪುರ ಸಂಸದ)

  • ಪರ್ಗತ್ ಸಿಂಗ್

  • ಚರಣ್‌ಜಿತ್ ಸಿಂಗ್ ಚನ್ನಿ (ಪಂಜಾಬ್‌ನ ಮಾಜಿ ಮುಖ್ಯಮಂತ್ರಿ)

ಪಂಜಾಬ್ ವಿಧಾನಸಭೆ ಚುನಾವಣೆಯು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ಚುನಾವಣೆಯೊಂದಿಗೆ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿದೆ. 2022ರ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಜಯಭೇರಿ ಬಾರಿಸಿ ಒಟ್ಟು 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಆಡಳಿತರೂಢ ಕಾಂಗ್ರೆಸ್ ಪಕ್ಷವು ಕೇವಲ 18 ಸ್ಥಾನಗಳಿಗೆ ಕುಸಿದಿತ್ತು(ಏಜೆನ್ಸೀಸ್).