Amit Shah | ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡಲು ನಾನು ಸಿದ್ಧ: ಅಮಿತ್​ ಷಾ 
ದೇಶ

ಚರ್ಚೆಯಿಂದ ಓಡಿಹೋಗಬೇಡಿ, ಪ್ರತಿಯೊಂದು ಪ್ರಶ್ನೆಗೂ ಉತ್ತರ ಕೊಡಲು ನಾನು ಸಿದ್ಧ: ಅಮಿತ್​ ಷಾ | Amit Shah

ಸಂಸತ್ತಿನ ಕಲಾಪಗಳಲ್ಲಿ ಉಂಟಾಗಿರುವ ಗೊಂದಲಗಳಿಗೆ ತೆರೆ ಎಳೆಯಲು ಮುಂದಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ (

Amit Shah)

, ವಿರೋಧ ಪಕ್ಷಗಳಿಗೆ 24 ಗಂಟೆಗಳ ಕಾಲಾವಕಾಶದ ಸುದೀರ್ಘ ಚರ್ಚೆಗೆ ಬಹಿರಂಗ ಆಹ್ವಾನ ನೀಡಿದ್ದಾರೆ. ಬುಧವಾರ ಮಧ್ಯಾಹ್ನ 3 ಗಂಟೆಯಿಂದ ಗುರುವಾರ ಮಧ್ಯಾಹ್ನ 3 ಗಂಟೆಯವರೆಗೆ ತಾವು ನಿರಂತರವಾಗಿ ಸದನದಲ್ಲಿಯೇ ಉಪಸ್ಥಿತರಿರುವುದಾಗಿ ಘೋಷಿಸಿರುವ ಅವರು, ವಿಪಕ್ಷಗಳು ಎತ್ತುವ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನೀಟ್ ವಿದ್ಯಾರ್ಥಿಗಳ ಮೇಲಿನ ಪೋಲಿಸ್ ಲಾಠಿಚಾರ್ಜ್​ ಹಾಗೂ ಅಯೋಧ್ಯೆ ರಾಮಮಂದಿರದ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗೆ ಆಗ್ರಹಿಸಿ ವಿರೋಧ ಪಕ್ಷಗಳು ಧರಣಿ ನಡೆಸುತ್ತಿದ್ದು, ಕಲಾಪ ಸಂಪೂರ್ಣ ಕಗ್ಗಂಟಾಗಿದೆ. ಈ ಕಾಯಂ ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿರುವ ಷಾ, ಚರ್ಚೆಗೆ ಸಿದ್ಧರಿರುವುದಾಗಿ ತಿಳಿಸಿ ವಿಪಕ್ಷಗಳಿಗೆ ಅಧಿಕೃತ ಪತ್ರ ಸಲ್ಲಿಸುವಂತೆ ಸವಾಲು ಹಾಕಿದ್ದಾರೆ.

ಸಂಸತ್ತಿನ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಷಾ, ನಾನು ವಿಪಕ್ಷಗಳ ಪ್ರತಿಯೊಂದು ಪ್ರಶ್ನೆಗೂ ಸ್ಪಷ್ಟೀಕರಣ ನೀಡಲು ತಯಾರಾಗಿದ್ದೇನೆ. ಆದರೆ ಈಗ ನಿರ್ಧಾರ ವಿರೋಧ ಪಕ್ಷಗಳ ಕೈಯಲ್ಲಿದೆ. ಅವರಿಗೆ ನಿಜವಾಗಿಯೂ ದೇಶದ ಪ್ರಮುಖ ವಿಚಾರಗಳ ಮೇಲೆ ಅರ್ಥಪೂರ್ಣ ಚರ್ಚೆ ಬೇಕಿದೆಯೋ ಅಥವಾ ಕೇವಲ ಕಲಾಪವನ್ನು ಮುಂದೂಡಿ ಗದ್ದಲ ಎಬ್ಬಿಸುವುದು ಮಾತ್ರ ಉದ್ದೇಶವೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಸವಾಲ್ ಹಾಕಿದರು.

ನಾನೆಲ್ಲೂ ಹೋಗಿಲ್ಲ!...

ಸಂಸತ್ತಿನಲ್ಲಿ ತಮ್ಮನ್ನು ಕಾಣೆಯಾಗಿದ್ದಾರೆ, ಓಡಿಹೋಗಿದ್ದಾರೆ, ತಲೆಮರೆಸಿಕೊಂಡಿದ್ದಾರೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ಟೀಕೆಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಾವು ಮಳೆಗಾಲದ ಅಧಿವೇಶನ ಪ್ರಾರಂಭವಾದಂದಿನಿಂದಲೂ ನಿಯಮಿತವಾಗಿ ಸಂಸತ್ತಿಗೆ ಆಗಮಿಸಿ, ತಮ್ಮ ಕಚೇರಿಯಲ್ಲಿ ಕುಳಿತು ಕಾರ್ಯನಿರ್ವಹಿಸುತ್ತಿದ್ದು, ಪ್ರತಿಪಕ್ಷಗಳು ಎರಡೂ ಸದನಗಳಲ್ಲಿ ಯಾವುದೇ ಕಲಾಪ ನಡೆಯಲು ಬಿಡದೆ ಗದ್ದಲ ಎಬ್ಬಿಸುತ್ತಿದ್ದರೆ ಒಬ್ಬ ಸಚಿವರಾಗಿ ನಾನು ಏನು ಮಾಡಲು ಸಾಧ್ಯ? ಎಂದು ಪ್ರಶ್ನಿಸಿದರು.
ಸಂಸತ್ತನ್ನು ಸುಸೂತ್ರವಾಗಿ ನಡೆಸಲು ಬಿಡದಿರುವುದೇ ವಿಪಕ್ಷಗಳ ಮುಖ್ಯ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದ ಷಾ, ಸದನದ ಕಲಾಪಗಳೇ ನಡೆಯದಿದ್ದಾಗ ಸುಮ್ಮನೆ ಒಳಗೆ ಬಂದು ಕುಳಿತುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟರು. ನೀಟ್ ವಿದ್ಯಾರ್ಥಿ ಪ್ರತಿಭಟನೆ ಮೇಲಿನ ಪೊಲೀಸ್ ಕ್ರಮ ಹಾಗೂ ರಾಮಮಂದಿರ ದೇಣಿಗೆ ವಿಚಾರಗಳ ಮೇಲಿನ ಚರ್ಚೆಯ ಕುರಿತು ಮಾತನಾಡಿದ ಅವರು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಸರ್ಕಾರವು ಈ ವಿಷಯದ ಪ್ರತಿಯೊಂದು ಮಜಲುಗಳ ಬಗ್ಗೆಯೂ ಚರ್ಚಿಸಲು ಪೂರ್ಣವಾಗಿ ಸಿದ್ಧವಿದೆ ಎಂದರು.

ನುಣುಚಿಕೊಳ್ಳುತ್ತಿರುವವರ ಬಗ್ಗೆ

ಈ ಹಿಂದೆ ವಿಪಕ್ಷಗಳು ಚರ್ಚೆಗೆ ಸಮಯ ಕೋರಿದಾಗಲೂ ನಾವು ಒಪ್ಪಿಕೊಂಡಿದ್ದೆವು. ಸಂಸತ್ತಿನಲ್ಲಿ ಎದುರಾಗುವ ಪ್ರತಿಯೊಂದು ಪ್ರಶ್ನೆಗೂ ಉತ್ತರ ನೀಡಲು ನಾನು ತಯಾರಾಗಿದ್ದೇನೆ, ಆದರೆ ಅವರಿಗೆ ನಿಜಕ್ಕೂ ಚರ್ಚೆ ನಡೆಸುವ ಉದ್ದೇಶವೇ ಇಲ್ಲ. ಕೇವಲ ಗದ್ದಲ ಎಬ್ಬಿಸಿ ವಿಷಯದಿಂದ ನುಣುಚಿಕೊಳ್ಳುತ್ತಿದ್ದಾರೆ. ಈಗ ಸತ್ಯ ಏನೆಂಬುದನ್ನು ಮತ್ತು ಯಾರು ಚರ್ಚೆಯಿಂದ ಓಡಿಹೋಗುತ್ತಿದ್ದಾರೆ ಎಂಬುದನ್ನು ದೇಶದ ಜನರೇ ತೀರ್ಮಾನಿಸಲಿ ಎಂದು ಗೃಹ ಸಚಿವರು ಸವಾಲು ಹಾಕಿದರು.
ಸರ್ಕಾರದ ಬಳಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದು ಸ್ಪಷ್ಟಪಡಿಸಿರುವ ಅಮಿತ್​ ಷಾ, ವಿಪಕ್ಷಗಳು ಎತ್ತುತ್ತಿರುವ ಎಲ್ಲ ವಿಷಯಗಳ ಬಗ್ಗೆಯೂ ಸವಿಸ್ತಾರವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ನಾನು ಸದನದಲ್ಲೇ ಕುಳಿತು, ಪ್ರತಿಯೊಬ್ಬರ ಮಾತನ್ನು ಆಲಿಸಿ, ಎತ್ತಲಾಗುವ ಪ್ರತಿಯೊಂದು ಪ್ರಶ್ನೆಗೂ ನೇರವಾಗಿ ಉತ್ತರಿಸುತ್ತೇನೆ ಎಂದು ಪುನರುಚ್ಚರಿಸಿದರು(ಏಜೆನ್ಸೀಸ್​).