BRICS Summit | ದೆಹಲಿಯಲ್ಲಿ ಒಂದಾಗಲಿದ್ದಾರೆ ಮೋದಿ, ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ( ಸಂಗ್ರಹ ಚಿತ್ರ) 
ದೇಶ

ಜಾಗತಿಕ ರಾಜಕೀಯದಲ್ಲಿ ಭಾರತವೇ ಬಾಸ್!...ದೆಹಲಿಯಲ್ಲಿ ಒಂದಾಗಲಿದ್ದಾರೆ ಮೋದಿ, ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ | BRICS Summit

ಜಾಗತಿಕ ರಾಜಕೀಯ ಉದ್ವಿಗ್ನತೆಗಳು ಹಾಗೂ ಶಕ್ತಿಶಾಲಿ ದೇಶಗಳ ನಡುವಿನ ಕಾರ್ಯತಂತ್ರದ ಪೈಪೋಟಿ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ನವದೆಹಲಿ ಅತ್ಯಂತ ಪ್ರಮುಖ ರಾಜತಾಂತ್ರಿಕ ಸಮಾವೇಶಕ್ಕೆ ಆತಿಥ್ಯ ವಹಿಸಲು ಸಜ್ಜಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 12 ಮತ್ತು 13 ರಂದು ನಡೆಯಲಿರುವ ಈ ಬ್ರಿಕ್ಸ್‌ ಶೃಂಗಸಭೆಯಲ್ಲಿ (BRICS Summit) ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ.

ಉಕ್ರೇನ್ ಮತ್ತು ಪಶ್ಚಿಮ ಏಷ್ಯಾದ ಸಶಸ್ತ್ರ ಸಂಘರ್ಷಗಳು ಹಾಗೂ ಜಾಗತಿಕ ವ್ಯಾಪಾರದ ಬದಲಾಗುತ್ತಿರುವ ಸಮೀಕರಣಗಳ ನಡುವೆ ಈ ಶೃಂಗಸಭೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿಯನ್ನು ಕ್ರೆಮ್ಲಿನ್ ಈಗಾಗಲೇ ಅಧಿಕೃತವಾಗಿ ಖಚಿತಪಡಿಸಿದೆ. 2025ರ ಡಿಸೆಂಬರ್​​ನಲ್ಲಿ ನಡೆದ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯ ನಂತರ, ಒಂದು ವರ್ಷದ ಅವಧಿಯೊಳಗೆ ಪುಟಿನ್ ಭಾರತಕ್ಕೆ ನೀಡುತ್ತಿರುವ ಎರಡನೇ ಭೇಟಿ ಇದಾಗಿದೆ. ಶೃಂಗಸಭೆಯ ಜೊತೆಗೆ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವೆ ಪ್ರತ್ಯೇಕ ದ್ವಿಪಕ್ಷೀಯ ಮಾತುಕತೆಯೂ ನಡೆಯಲಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, 2020ರ ಗಲ್ವಾನ್ ಕಣಿವೆ ಸಂಘರ್ಷ ಮತ್ತು ಗಡಿ ಉದ್ವಿಗ್ನತೆಯ ನಂತರ ರಾಜತಾಂತ್ರಿಕ ಸಂಬಂಧಗಳು ಸಹ ಕುಸಿದಿದ್ದವು. ಹೀಗಾಗಿ 2019ರ ಮಾಮಲ್ಲಪುರಂ ಭೇಟಿಯ ನಂತರ ಕ್ಸಿ ಜಿನ್‌ಪಿಂಗ್ ಭಾರತಕ್ಕೆ ಆಗಮಿಸುತ್ತಿರುವುದು ತೀವ್ರ ಪ್ರಾಮುಖ್ಯತೆ ಪಡೆದುಕೊಂಡಿದೆ.

ಮೂವರು ನಾಯಕರ ಅಪರೂಪದ ಸಮಾವೇಶ

ಈ ಶೃಂಗಸಭೆಯು ಪ್ರಧಾನಿ ನರೇಂದ್ರ ಮೋದಿ, ವ್ಲಾಡಿಮಿರ್ ಪುಟಿನ್ ಮತ್ತು ಕ್ಸಿ ಜಿನ್‌ಪಿಂಗ್ ಅವರ ಅಪರೂಪದ ಸಮಾವೇಶಕ್ಕೆ ಸಾಕ್ಷಿಯಾಗಲಿದೆ. 2025ರಲ್ಲಿ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯ ನಂತರ ಈ ಮೂವರೂ ನಾಯಕರು ಒಂದೇ ವೇದಿಕೆಯಲ್ಲಿ ಭೇಟಿಯಾಗುತ್ತಿದ್ದಾರೆ. ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮತ್ತು ಚೀನಾ ಗಡಿಯಲ್ಲಿ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆ ಸುಧಾರಣೆ ಕಂಡ ನಂತರ ಉಭಯ ದೇಶಗಳ ಬಾಂಧವ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿತ್ತು. ಇದೀಗ ದೆಹಲಿ ಶೃಂಗಸಭೆಯು ಗಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಸ್ಥಿರಗೊಳಿಸಲು ಉತ್ತಮ ವೇದಿಕೆಯಾಗಲಿದೆ.
ಇತ್ತೀಚೆಗೆ ವಿಸ್ತರಣೆಗೊಂಡಿರುವ ಬ್ರಿಕ್ಸ್‌ ಬಳಗವು ಈಗ ಭಾರತ, ರಷ್ಯಾ, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ ಸೇರಿದಂತೆ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಇಂಡೋನೇಷ್ಯಾಗಳನ್ನು ಒಳಗೊಂಡಿದೆ. ಜಾಗತಿಕ ಜನಸಂಖ್ಯೆ ಮತ್ತು ಜಿಡಿಪಿಯಲ್ಲಿ ಬೃಹತ್ ಪಾಲು ಹೊಂದಿರುವ ಈ ಸಂಘಟನೆಯ ಅಧ್ಯಕ್ಷತೆ ವಹಿಸಿರುವ ಭಾರತವು, ಜಾಗತಿಕ ಆಡಳಿತ ಸಂಸ್ಥೆಗಳ ಸುಧಾರಣೆ, ಅಭಿವೃದ್ಧಿಶೀಲ ದೇಶಗಳ ಆದ್ಯತೆಗಳಿಗೆ ಬೆಂಬಲ, ವ್ಯಾಪಾರದಲ್ಲಿ ಸ್ಥಳೀಯ ಕರೆನ್ಸಿಗಳ ಬಳಕೆ ಮತ್ತು ಪೂರೈಕೆ ಸರಪಳಿಯ ಬಲವರ್ಧನೆಯ ಕುರಿತು ಚರ್ಚೆಗಳನ್ನು ಮುನ್ನಡೆಸಲಿದೆ. ಅಂತಾರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕ ಸವಾಲುಗಳ ನಡುವೆ ಈ ಸಭೆಯು ಜಾಗತಿಕ ಮಟ್ಟದಲ್ಲಿ ಭಾರತದ ರಾಜತಾಂತ್ರಿಕ ಶಕ್ತಿಯನ್ನು ಎತ್ತಿಹಿಡಿಯಲಿದೆ(ಏಜೆನ್ಸೀಸ್​).