ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋಗಿ ಜೀವನ್ಮರಣ ಹೋರಾಟ: ಆನೆಗೆ ಮರುಜನ್ಮ ಕೊಟ್ಟ ಅನಂತ್​ ಅಂಬಾನಿಯ ವಂತಾರಾ! Vantara  
ದೇಶ

ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿ ಹೋಗಿ ಜೀವನ್ಮರಣ ಹೋರಾಟ: ಆನೆಗೆ ಮರುಜನ್ಮ ಕೊಟ್ಟ ಅನಂತ್​ ಅಂಬಾನಿಯ ವಂತಾರಾ! Vantara

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿಹೋಗಿ ಗಾಯಗೊಂಡಿದ್ದ 53 ವರ್ಷದ ಜೋಮೋತಿ ಆನೆ
  • ತುರ್ತು ಹಾಗೂ ಉನ್ನತ ವೈದ್ಯಕೀಯ ಚಿಕಿತ್ಸೆಗಾಗಿ ವಂತಾರಾ ಕೇಂದ್ರಕ್ಕೆ ಏರ್‌ಲಿಫ್ಟ್
  • ಆನೆಯ ಪ್ರಾಣ ಉಳಿಸಲು ವಿಶೇಷ ವಿಮಾನದ ಮೂಲಕ ಕರೆತರುತ್ತಿರುವ ವಂತಾರಾ ತಂಡ
  • ತೀವ್ರ ಗಾಯ ಹಾಗೂ ವಯೋಸಹಜ ಸಮಸ್ಯೆಯಿಂದ ಬಳಲುತ್ತಿರುವ ಆನೆಗೆ 24 ಗಂಟೆಗಳ ಆರೈಕೆ
ಜಾಮ್​ನಗರ : ಅಸ್ಸಾಂನಲ್ಲಿ ಸಂಭವಿಸಿದ ಭೀಕರ ಪ್ರವಾಹದ ಅಲೆಗಳಿಗೆ ಕೊಚ್ಚಿಹೋಗಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 53 ವರ್ಷ ವಯಸ್ಸಿನ 'ಜೋಮೋತಿ' ಎಂಬ ವೃದ್ಧ ಆನೆಗೆ ತುರ್ತು ಹಾಗೂ ಉನ್ನತ ವೈದ್ಯಕೀಯ ಚಿಕಿತ್ಸೆ ನೀಡುವ ಸಲುವಾಗಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್​ ಅಂಬಾನಿ ಅವರ ಕನಸಿನ ಕೂಸಾದ ವಂತಾರಾ ( Vantara ) ವನ್ಯಜೀವಿ ಕೇಂದ್ರಕ್ಕೆ ವಿಶೇಷ ವಿಮಾನದ ಮೂಲಕ ಕರೆತರಲಾಗುತ್ತಿದೆ.
ತಮ್ಮ ಕನಸಿನ ಯೋಜನೆಯಾದ ‘ವಂತಾರಾ’ ಮೂಲಕ ವಿಶ್ವದ ಅತಿ ದೊಡ್ಡ ಮೃಗಾಲಯ, ಪ್ರಾಣಿ ಸಂರಕ್ಷಣಾ ಹಾಗೂ ಪುನರ್ವಸತಿ ಕೇಂದ್ರ ತೆರೆದಿರುವ ರಿಲಯನ್ಸ್​ ಇಂಡಸ್ಟ್ರೀಸ್​ ನಿರ್ದೇಶಕ ಅನಂತ್​ ಅಂಬಾನಿ, ಜೀವ ಸಂಕುಲಕ್ಕೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಇದರ ಭಾಗವಾಗಿ ಅಪಾಯದಲ್ಲಿರುವ ಸಾಕು ಪ್ರಾಣಿಗಳನ್ನು ರಕ್ಷಿಸಿ ಅವುಗಳನ್ನು ಆರೈಕೆ ಮಾಡುತ್ತಿರುವ ವಂತಾರಾ, ಇದೀಗ ವೃದ್ಧ ಆನೆಯ ರಕ್ಷಣೆಗೆ ಮುಂದಾಗಿದೆ.
ಅಸ್ಸಾಂ ಪ್ರವಾಹದಲ್ಲಿ ಕೊಚ್ಚಿಹೋಗಿ ಜೋಮೋತಿ ಆನೆ ಅನುಭವಿಸಿದ ಯಾತನೆ ಮತ್ತು ಕಳೆದ ಕೆಲವು ದಿನಗಳಿಂದ ನಡೆದ ರಕ್ಷಣಾ ಕಾರ್ಯಾಚರಣೆಯ ಮಾಹಿತಿ ಇರುವ ಭಾವನಾತ್ಮಕ ವಿಡಿಯೋವನ್ನು ವಂತಾರಾ ಸಂಸ್ಥೆ ಇತ್ತೀಚೆಗೆ ಹಂಚಿಕೊಂಡಿದೆ. ಪ್ರವಾಹದ ನೀರಿನ ಸೆಳೆತಕ್ಕೆ ಸಿಲುಕಿದ್ದ ಈ ಆನೆಯನ್ನು ಸ್ಥಳೀಯ ಸಮುದಾಯಗಳು ಹಾಗೂ ಸರ್ಕಾರದ ಸಂಸ್ಥೆಗಳ ಸಹಾಯದಿಂದ ರಕ್ಷಿಸಲಾಗಿದೆಯಾದರೂ, ಈ ದುರ್ಘಟನೆಯಿಂದಾಗಿ ಆನೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ನಡೆಯಲು ಕೂಡ ಕಷ್ಟಪಡುವ ಗಂಭೀರ ಪರಿಸ್ಥಿತಿ ಎದುರಾಗಿದೆ.
ವಂತಾರಾ ಸಂಸ್ಥೆಯು ಜೋಮೋತಿಯ ಪ್ರಕರಣವನ್ನು ಕೈಗೆತ್ತಿಕೊಂಡಾಗಿನಿಂದಲೂ, ಅದರ ರಕ್ಷಣೆ ಮತ್ತು ಪುನರ್ವಸತಿ ತಂಡವು ಆನೆಗೆ ಪ್ರಥಮ ಚಿಕಿತ್ಸೆ ಹಾಗೂ ಪ್ರಾಥಮಿಕ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿತ್ತು. ಆದಾಗ್ಯೂ, ಆನೆಗೆ ಆಗಿರುವ ಗಾಯಗಳ ತೀವ್ರತೆ, ಅದರ ವಯಸ್ಸು ಮತ್ತು ನಡೆಯಲು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಗಣಿಸಿ, ಜೋಮೋತಿಗೆ ಆಸ್ಪತ್ರೆಗೆ ದಾಖಲಿಸಿ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ನೀಡುವುದು ಅತ್ಯವಶ್ಯಕ ಎಂದು ನಿರ್ಧರಿಸಲಾಗಿದೆ.
ಜೋಮೋತಿಯನ್ನು ವಿಮಾನದ ಮೂಲಕ ಕರೆದೊಯ್ಯುವುದರಿಂದ ಸುದೀರ್ಘ ಪ್ರಯಾಣದಿಂದ ಉಂಟಾಗುವ ದೈಹಿಕ ಆಯಾಸ ಹಾಗೂ ಮಾನಸಿಕ ಒತ್ತಡವನ್ನು ತಗ್ಗಿಸಬಹುದು ಮತ್ತು ಆಕೆಗೆ ತುರ್ತಾಗಿ ಬೇಕಿರುವ ವೈದ್ಯಕೀಯ ಚಿಕಿತ್ಸೆ ತಕ್ಷಣವೇ ಲಭ್ಯವಾಗುವಂತೆ ಮಾಡಬಹುದು ಎಂದು ವಂತಾರಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. 53 ವರ್ಷ ವಯಸ್ಸಿನ ಜೋಮೋತಿ ಕಳೆದ ಹಲವು ದಿನಗಳಿಂದ ಜೀವಕ್ಕಾಗಿ ಹೋರಾಟ ನಡೆಸುತ್ತಿದ್ದಾಳೆ ಎಂದು ಸಂಸ್ಥೆಯು ತಿಳಿಸಿದ್ದು, ಆಕೆಯ ಚೇತರಿಕೆಗೆ ತಮ್ಮ ಪಶುವೈದ್ಯಕೀಯ ತಂಡವು ಎಲ್ಲಾ ರೀತಿಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಲಿದೆ ಎಂದು ಭರವಸೆ ನೀಡಿದೆ.
ರಸ್ತೆಯ ಮೂಲಕ ಪ್ರಯಾಣಿಸುವುದರಿಂದ ಈಗಾಗಲೇ ಗಾಯಗೊಂಡಿರುವ ಆನೆಯ ದೇಹಕ್ಕೆ ಮತ್ತಷ್ಟು ಆಯಾಸ ಮತ್ತು ತೊಂದರೆಯಾಗಬಹುದು ಎಂಬ ಕಾರಣದಿಂದ, ಆಕೆಯ ಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ವಿಶೇಷ ವಿಮಾನದ ಮೂಲಕ ಸಾಗಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ವಿಶೇಷ ಚಿಕಿತ್ಸೆ ಹಾಗೂ ನಿರಂತರ 24 ಗಂಟೆಗಳ ಪಶುವೈದ್ಯಕೀಯ ಆರೈಕೆಗಾಗಿ ಜೋಮೋತಿಯನ್ನು ತಾತ್ಕಾಲಿಕವಾಗಿ ವಂತಾರಾ ಕೇಂದ್ರದಲ್ಲಿ ಇರಿಸಲಾಗುವುದು.
ಅಸ್ಸಾಂನ ಪ್ರವಾಹಪೀಡಿತ ಪ್ರದೇಶದಿಂದ ವಿಶೇಷ ವೈದ್ಯಕೀಯ ಆರೈಕೆ ಕೇಂದ್ರದವರೆಗೆ ಜೋಮೋತಿ ನಡೆಸಿದ ಕಠಿಣ ಹಾಗೂ ಸಂಕಷ್ಟದ ಪ್ರಯಾಣದ ವಿಡಿಯೋವು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿ ಪ್ರಿಯರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ, (ಏಜೆನ್ಸೀಸ್​).