ನವದೆಹಲಿ: ಅ. 12ರಂದು ನ್ಯಾಯಾಲಯಕ್ಕೆ ಪ್ರತಿಪಕ್ಷಗಳು ನಡೆಸಿದ ಮೆರವಣಿಗೆ ವೇಳೆ ಗರ್ಭಿಣಿ ಪತ್ರಕರ್ತೆಯ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಮಂಗಳವಾರ(ಅ. 27) ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ರಾಹುಲ್ ಗಾಂಧಿಯವರ ಪ್ರತಿಕ್ರಯೆ ಕೇಳಿ ನೋಟಿಸ್ ಜಾರಿ ಮಾಡಿದೆ.
ಘಟನೆಗೆ ಸಂಬಂಧಿಸಿದಂತೆ ಹಿರಿಯ ವಕೀಲ ಗೌರವ್ ಭಾಟಿಯಾ ಅವರು ಬಾಕಿ ಇರುವ ಅರ್ಜಿಯಲ್ಲಿ ಸಲ್ಲಿಸಲಾದ ಅರ್ಜಿಯನ್ನು ಉಲ್ಲೇಖಿಸಿದ ಬಳಿಕ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ರಾಹುಲ್ ಗಾಂಧಿ ಸೇರಿ ಇತರೆ ನಾಯಕರಿಗೆ ನೋಟಿಸ್ ಜಾರಿ ಮಾಡಿದೆ.
ಅರ್ಜಿಯಲ್ಲಿ, ರಾಹುಲ್ ಗಾಂಧಿ ಅವರು ಪತ್ರಕರ್ತೆಯೊಬ್ಬರನ್ನು ಸುಪ್ರೀಂ ಕೋರ್ಟ್ ಆವರಣದಲ್ಲಿನ ಗೇಟ್ ಒಂದರ ಕಡೆಗೆ ತಳ್ಳಿದ್ದರಿಂದ, ಅವರು ಸಮತೋಲನ ಕಳೆದುಕೊಂಡು ಬಿದ್ದರು ಎಂದು ಆರೋಪಿಸಲಾಗಿದೆ. ಭದ್ರತಾ ಸಿಬ್ಬಂದಿ, ಪತ್ರಕರ್ತರು ಮತ್ತು ಇತರರು ಇದ್ದ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಇದು ಕೇವಲ ಜನಸಂದಣಿಯಲ್ಲಿ ಉಂಟಾದ ನೂಕುನುಗ್ಗಲಿನ ಪರಿಣಾಮವಲ್ಲ ಎಂದು ಪ್ರತಿಪಾದಿಸಲಾಗಿದೆ.
ಈ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ತಕ್ಷಣವೇ ಎಫ್ಐಆರ್ ದಾಖಲಿಸಲು ನಿರ್ದೇಶನ ನೀಡುವಂತೆ ಹಾಗೂ ಪತ್ರಕರ್ತೆಗೆ ಪರಿಹಾರ ಒದಗಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಪತ್ರಕರ್ತೆ ಮೂರು ತಿಂಗಳ ಗರ್ಭಿಣಿಯಾಗಿದ್ದು, ಘಟನೆಯ ನಂತರ ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಭಾಟಿಯಾ ಅಕ್ಟೋಬರ್ 16 ರಂದು ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದರು.
ಅಕ್ಟೋಬರ್ 12ರಂದು, ಗಾಂಧಿ ಮತ್ತು ಹಲವಾರು ವಿರೋಧ ಪಕ್ಷದ ನಾಯಕರು, ಬೆಂಬಲಿಗರೊಂದಿಗೆ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಲ್ಲಿ ದೊಡ್ಡ ಪ್ರಮಾಣದ ಮತದಾರರ ಅಳಿಸುವಿಕೆ ಮತ್ತು ಅಕ್ರಮಗಳನ್ನು ಆರೋಪಿಸಿ ಅರ್ಜಿ ಸಲ್ಲಿಸಲು ಸುಪ್ರೀಂಕೋರ್ಟ್ಗೆ ಮೆರವಣಿಗೆ ನಡೆಸಿದ್ದರು (ಏಜೆನ್ಸೀಸ್).