ದೇಶ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಜೆಎನ್​ಯು ಮಾಜಿ ಪ್ರಾಧ್ಯಾಪಕ ಮತ್ತು ಕಾಂಗ್ರೆಸ್ ಸಂಸದ ಅಕೋಯಿಜಮ್ ವಿರುದ್ಧ ಎಫ್​ಐಆರ್ | MP Akoijam

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ಪ್ರಾಧ್ಯಾಪಕ ಮತ್ತು ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ಪ್ರಾಧ್ಯಾಪಕ ಮತ್ತು ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ವಿರುದ್ಧ ದೆಹಲಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ(ಅ. 11) ಜೆಎನ್‌ಯು ಮುಖ್ಯ ಭದ್ರತಾ ಅಧಿಕಾರಿ ನೀಡಿದ ದೂರಿನ ಮೇರೆಗೆ ವಸಂತ್ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75, 75(1)(i), 75(1)(iv) ಮತ್ತು 79 ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಶ್ವವಿದ್ಯಾಲಯವು, ವಿಶ್ವವಿದ್ಯಾಲಯದ ಆಂತರಿಕ ಸಮಿತಿಯು ತನಿಖೆ ನಡೆಸಿ ನೀಡಿದ ವರದಿ ಮತ್ತು ಶಿಫಾರಸು ಆಧಾರದ ಮೇಲೆ ಅಕೋಯಿಜಮ್ ಅವರನ್ನು ಪ್ರಾಧ್ಯಾಪಕ ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿತ್ತು.

ಕಳೆದ ಕೆಲವು ತಿಂಗಳ ಹಿಂದೆ ಸಂಸದರ ವಿರುದ್ಧ ಒಟ್ಟು 11 ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಆಂತರಿಕ ಸಮಿತಿಗೆ ದೂರು ನೀಡಿದ್ದರು. ಮೊದಲಿಗೆ ಓರ್ವ ವಿದ್ಯಾರ್ಥಿನಿ ವೈವಾ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ನೀಡುವುದಾಗಿ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಇತರೆ ವಿದ್ಯಾರ್ಥಿಗಳು ತರಗತಿಯಲ್ಲಿ ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ. ನಿವಾಸದಲ್ಲಿ ಔತಣಕೂಟ ಏರ್ಪಡಿಸಿ ಅಲ್ಲಿ ದುರ್ನಡತೆ ತೋರಿದ್ದಾರೆ ಎಂದು ದೂರಿದ್ದರು.

ಆದರೆ ವಿದ್ಯಾರ್ಥಿನಿಯರ ಆರೋಪಗಳನ್ನು ತಳ್ಳಿ ಹಾಕಿರುವ ಸಂಸದ ಅಕೋಯಿಜಮ್, ಜನಾಂಗೀಯವಾಗಿ ದುರುಳರು ಸುಳ್ಳು ಆರೋಪಗಳ ಮೂಲಕ ತಮ್ಮ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).