

ನವದೆಹಲಿ: ಎಸ್ಐಆರ್ನಲ್ಲಿ ಅಕ್ರಮ ಆರೋಪ ಮತ್ತು ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂದು(ಅ. 12) ಇಂಡಿಯಾ ಒಕ್ಕೂಟ ಮತ್ತೆ ಬೃಹತ್ ಪ್ರತಿಭಟನೆ ಆರಂಭಿಸಲಿದ್ದು, ಸುಪ್ರೀಂಕೋರ್ಟ್ಗೆ ಮೆರವಣಿಗೆ ಹಮ್ಮಿಕೊಂಡಿದೆ. ಈ ಹಿನ್ನೆಲೆ ದೆಹಲಿಯ ಆರು ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.
ಮೆಟ್ರೋ ನಿಲ್ದಾಣಗಳ ಬಂದ್ ಬಗ್ಗೆ ಮಾಹಿತಿ ನೀಡಿರುವ ಡಿಎಂಆರ್ಸಿ, ಭದ್ರತಾ ಕಾರಣಗಳಿಂದಾಗಿ, ದೆಹಲಿಯ ರಾಜೀವ್ ಚೌಕ್, ಜನಪಥ್, ಪಟೇಲ್ ಚೌಕ್, ಮಂಡಿ ಹೌಸ್, ಕೇಂದ್ರ ಸಚಿವಾಲಯ ಮತ್ತು ಬಾರಾಖಂಬಾ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿ ಇಂದು (ಸೋಮವಾರ) ಬೆಳಿಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಮತ್ತು ಪ್ರಯಾಣಿಕರು ತಮ್ಮ ಪ್ರಯಾಣ ಮಾರ್ಗಗಳನ್ನು ಬದಲಾಯಿಸುವಂತೆ ಸೂಚಿಸಿದೆ.
ಇನ್ನೂ ಇಂಡಿಯಾ ಕೂಟವು, ಚಲೋ ದೆಹಲಿ - ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆ' ಎಂಬ ಹೆಸರಿನಲ್ಲಿ ಸುಪ್ರೀಂಕೋರ್ಟ್ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆ ಮತ್ತು ಎಸ್ಐಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ.
ಜೊತೆಗೆ ಸಂಜೆ 4ರಿಂದ 5 ಗಂಟೆವರೆಗೆ ಭೇಟಿಗೆ ತಮಗೆ ಸಮಯ ನೀಡಬೇಕೆಂದು ಕಾಂಗ್ರೆಸ್ ನಾಯಕರು ಸಿಜೆಐ ಅವರಿಗೆ ಸಮಯಾವಕಾಶ ಕೇಳಿದ್ದರು. ಆದ್ರೆ ಸಿಜೆಐ, ಇದೇ ವಿಷಯಗಳು ನ್ಯಾಯಾಂಗ ಪರಿಶೀಲನೆಯ ಹಂತದಲ್ಲಿವೆ ಎಂಬ ಕಾರಣವನ್ನು ನೀಡಿ ಕಾಂಗ್ರೆಸ್ ನಾಯಕರ ಭೇಟಿಗೆ ನಿರಾಕರಿಸಿದ್ದಾರೆ. ಇನ್ನೂ ಈ ಕುರಿತು ಇನ್ನೊಂದು ಔಪಚಾರಿಕ ಪಿಐಎಲ್ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).