ದೇಶ

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಪ್ರಾಧ್ಯಪಕ ಹುದ್ದೆಯಿಂದ ಕಾಂಗ್ರೆಸ್​ ಸಂಸದನನ್ನು ವಜಾಗೊಳಿಸಿದ ಜೆಎನ್​ಯು ವಿಶ್ವವಿದ್ಯಾಲಯ | Congress MP

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ(ಅ. 09) ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವು, ಪ್ರಾಧ್ಯಾಪಕ ಮತ್ತು ಇನ್ನರ್ ಮಣಿಪುರ ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿದೆ.

ನವದೆಹಲಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶುಕ್ರವಾರ(ಅ. 09) ದೆಹಲಿಯ ಪ್ರತಿಷ್ಠಿತ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯವು, ಪ್ರಾಧ್ಯಾಪಕ ಮತ್ತು ಇನ್ನರ್ ಮಣಿಪುರ ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಿದೆ.

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದ ಆಂತರಿಕ ಸಮಿತಿಯು ತನಿಖೆ ನಡೆಸಿ ನೀಡಿದ ವರದಿ ಮತ್ತು ಶಿಫಾರಸು ಆಧಾರದ ಮೇಲೆ ಕುಲಪತಿ ಶಾಂತಿಶ್ರೀ ಡಿ. ಪಂಡಿತ್ ಅವರು, ಅಂಗೋಮ್ಚಾ ಬಿಮೋಲ್ ಅಕೋಯಿಜಮ್ ಅವರನ್ನು ವಜಾಗೊಳಿಸಿದ್ದಾರೆ.

ಈ ಕುರಿತು ಕುಲಪತಿ ಹೊರಡಿಸಿರುವ ಆದೇಶದಲ್ಲಿ, ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿದ ನಂತರ ಹಾಗೂ ಲಭ್ಯವಿರುವ ಸಂಗತಿಗಳು ಮತ್ತು ಸಮಿತಿಯ ವರದಿಯನ್ನು ಪರಿಗಣಿಸಿದ ಬಳಿಕ ಅಕೋಯಿಜಮ್ ಅವರನ್ನು ವಜಾಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ.

ಕಳೆದ ಕೆಲವು ತಿಂಗಳ ಹಿಂದೆ ಸಂಸದರ ವಿರುದ್ಧ ಒಟ್ಟು 11 ವಿದ್ಯಾರ್ಥಿನಿಯರು ವಿಶ್ವವಿದ್ಯಾಲಯದ ಆಂತರಿಕ ಸಮಿತಿಗೆ ದೂರು ನೀಡಿದ್ದರು. ಮೊದಲಿಗೆ ಓರ್ವ ವಿದ್ಯಾರ್ಥಿನಿ ವೈವಾ ಸಮಯದಲ್ಲಿ ಹೆಚ್ಚಿನ ಅಂಕಗಳನ್ನು ನೀಡುವುದಾಗಿ ತನ್ನ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದರು. ಇತರೆ ವಿದ್ಯಾರ್ಥಿಗಳು ತರಗತಿಯಲ್ಲಿ ಅನುಚಿತ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಔತಣಕೂಟಗಳನ್ನು ಏರ್ಪಡಿಸಿ ಅಲ್ಲಿ ದುರ್ನಡತೆ ತೋರಿದ್ದಾರೆ ಎಂದು ದೂರಿದ್ದರು.

ಆದರೆ ವಿದ್ಯಾರ್ಥಿನಿಯರ ಆರೋಪಗಳನ್ನು ತಳ್ಳಿ ಹಾಕಿರುವ ಸಂಸದ ಅಕೋಯಿಜಮ್, ಜನಾಂಗೀಯವಾಗಿ ದುರುಳರು ಸುಳ್ಳು ಆರೋಪಗಳ ಮೂಲಕ ತಮ್ಮ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ (ಏಜೆನ್ಸೀಸ್).

ಅಕೋಯಿಜಮ್ ಅವರು ಜೆಎನ್‌ಯುನ 'ಸ್ಕೂಲ್ ಆಫ್ ಸೋಶಿಯಲ್ ಸೈನ್ಸಸ್'ನ 'ಸೆಂಟರ್ ಫಾರ್ ದಿ ಸ್ಟಡಿ ಆಫ್ ಸೋಶಿಯಲ್ ಸಿಸ್ಟಮ್ಸ್'ನಲ್ಲಿ ಪ್ರಾಧ್ಯಾಪಕರಾಗಿದ್ದರು. 2024ರಲ್ಲಿ ಮಣಿಪುರದ 'ಇನ್ನರ್ ಮಣಿಪುರ' ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ (ಏಜೆನ್ಸೀಸ್).