

ಚೆನ್ನೈ: ಅಮೆರಿಕದ ತಾಂತ್ರಿಕ ಬೆಳವಣಿಗೆಗೆ ಭಾರತೀಯರು ಅಪಾರ ಕೊಡುಗೆ ನೀಡುತ್ತಿದ್ದರೂ, ಅಲ್ಲಿನ ಒಂದು ದೊಡ್ಡ ವರ್ಗಕ್ಕೆ ಈಗ ನೀವು ಅಲ್ಲಿರುವುದು ಇಷ್ಟವಿಲ್ಲ. ವಾಪಸ್ ದೇಶಕ್ಕೆ ಬನ್ನಿ, ನಾವೆಲ್ಲಾ ಸೇರಿ ಭಾರತವನ್ನು ಅಭಿವೃದ್ಧಿ ಮಾಡೋಣ ಎಂದು ಅಮೆರಿಕದಲ್ಲಿರುವ ಎನ್ಆರ್ಐಗಳಿಗೆ ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಕರೆ ನೀಡಿದ್ದಾರೆ.
ಗುರುವಾರ(ಅ. 08) ಅಮೆರಿಕಾದ ಕಾರ್ಮಿಕ ಇಲಾಖೆ, ವಿದೇಶಿ ಉದ್ಯೋಗಿಗಳಿಗೆ ಶಾಶ್ವತ ನಿವಾಸಿ ಸ್ಥಾನಮಾನ ನೀಡುವ ಗ್ರೀನ್ ಕಾರ್ಡ್ ಯೋಜನೆಯಿಂದ ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS), ವಿಪ್ರೋ ಮತ್ತು ಎಚ್ಸಿಎಲ್ (HCL) ಸೇರಿದಂತೆ ಎಂಟು ಪ್ರಮುಖ ಭಾರತೀಯ ಐಟಿ ಕಂಪನಿಗಳನ್ನು ಅಮಾನತುಗೊಳಿಸಿದೆ. ಮತ್ತು ಈ ಕ್ರಮ ಭಾರತೀಯ ಟೆಕ್ಕಿಗಳಿಗೆ ಪರಿಣಾಮದ ಆತಂಕವನ್ನು ಮೂಡಿಸಿದೆ.
ಈ ಹಿನ್ನೆಲೆ ತಮ್ಮ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಶ್ರೀಧರ್ ವೆಂಬು, ಅಮೆರಿಕದ ತಾಂತ್ರಿಕ ಅಭಿವೃದ್ಧಿಗೆ ಭಾರತೀಯರು ಅಪಾರ ಕೊಡುಗೆ ನೀಡಿದ್ದಾರೆ. ಆದರೂ, ಅಮೆರಿಕದ ಒಂದು ದೊಡ್ಡ ವರ್ಗಕ್ಕೆ ಈಗ ನಾವು ಅಲ್ಲಿರುವುದು ಇಷ್ಟವಿಲ್ಲ ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕದಲ್ಲಿ ವೀಸಾದ ಮೇಲೆ ನೆಲೆಸಿರುವ ಭಾರತೀಯರು, ತಾವು ಕಷ್ಟಪಟ್ಟು ಕಟ್ಟಿಕೊಂಡ ಜೀವನವನ್ನು ಇದ್ದಕ್ಕಿದ್ದಂತೆ ಸ್ವದೇಶಕ್ಕೆ ಮರಳಬೇಕಾದ ನೋವಿನ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇದು ಒಂದು ಧೈರ್ಯಶಾಲಿ ಹಾಗೂ ಹೊಸ ಭವಿಷ್ಯದ ಉದಯದ ನೋವು ಎಂದು ಭಾವಿಸೋಣ. ವಾಪಸ್ ಬನ್ನಿ, ನಾವೆಲ್ಲರೂ ಸೇರಿ ಭಾರತವನ್ನು ಕಟ್ಟೋಣ ಎಂದು ಕರೆ ನೀಡಿದ್ದಾರೆ.
ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಯುಎಸ್ ಕಾರ್ಮಿಕ ಸಚಿವ ಕೀತ್ ಸೋಂಡರ್ಲಿಂಗ್, ಎಚ್-1ಬಿ ವೀಸಾದ ಗ್ರೀನ್ ಕಾರ್ಡ್ ಯೋಜನೆಯಿಂದ ಅಡೋಬ್, ಕಾಗ್ನಿಜೆಂಟ್, ಇನ್ಫೋಸಿಸ್, ಟಾಟಾ, ವಿಪ್ರೋ, ಎಚ್ಸಿಎಲ್ ಮತ್ತು ಕೇಪ್ಜೆಮಿನಿ ಸೇರಿದಂತೆ ಹಲವು ಪ್ರಮುಖ ಐಟಿ ಕಂಪನಿಗಳನ್ನು ಪಟ್ಟಿಯಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದರು.
ಮುಂದುವರೆದು, ಕಾರ್ಮಿಕ ಇಲಾಖೆ ಹೊಸದಾಗಿ PERM ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಮತ್ತು ಈ ಕಂಪನಿಗಳಿಗೆ ಸಂಬಂಧಿಸಿದ ಬಾಕಿ ಇರುವ ಅರ್ಜಿಗಳನ್ನೂ ಪ್ರಕ್ರಿಯೆಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು (ಏಜೆನ್ಸೀಸ್).