ಸಂಸದ ನಿಶಿಕಾಂತ್ ದುಬೆ ಮತ್ತು ಅಖಿಲೇಶ್ ಯಾದವ್
ನವದೆಹಲಿ: ರಾಮಮಂದಿರ ದೇಣಿಗೆ ಕಳ್ಳತನ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ರಾಮಶಂಕರ್@ ಟಿನ್ನು ಯಾದವ್ ಜೊತೆ ಎಸ್ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಹೆಸರು ತಳುಕು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ನಿಶಿಕಾಂತ್ ದುಬೆ(Nishikant Dubey) ಮಂಗಳವಾರ(ಜು. 14) ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.
ಕಳೆದ ವಾರ ನಿಶಿಕಾಂತ್ ದುಬೆ ಅವರು, ಅಖಿಲೇಶ್ ಯಾದವ್ ಮತ್ತು ಮಂದಿರದ ದೇಣಿಗೆ ಕದ್ದ ಆರೋಪಿ ಟಿನ್ನು ಯಾದವ್ ನಡುವೆ ಸಂಬಂಧವಿದೆ ಎಂದು ಆರೋಪಿಸಿ, ಟಿನ್ನು ಟಿಪ್ಪು ಜೊತೆ ಮಾತನಾಡುತ್ತಿದ್ದನೇ? ಎಂದು ಎಕ್ಸ್ನಲ್ಲಿ ಟಿನ್ನು ಮತ್ತು ಅಖಿಲೇಶ್ ಯಾದವ್ ನಡುವೆ ಸಂಪರ್ಕವಿದೆ ಎಂಬ ರೀತಿಯಲ್ಲಿ ಬರೆದ ಸರವಣಪ್ರಸಾದ್ ಬಾಲಸುಬ್ರಮಣಿಯನ್ ಎಂಬುವರ ಪೋಸ್ಟ್ ಅನ್ನು ಹಂಚಿಕೊಂಡು ವಿವಾದ ಹುಟ್ಟು ಹಾಕಿದ್ದರು.
ಪೋಸ್ಟ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಸಮಾಜವಾದಿ ಪಕ್ಷದ ಅಧಿವಕ್ತ ಸಭಾದ ಅಧ್ಯಕ್ಷ ಕೃಷ್ಣ ಕನ್ಹಯ್ಯಾ ಪಾಲ್, ನಿಶಿಕಾಂತ್ ದುಬೆ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದರು. ಉದ್ದೇಶಪೂರ್ವಕವಾಗಿ ಮಾನಹಾನಿ ಮತ್ತು ಚಾರಿತ್ರ್ಯ ಹರಣ ಮಾಡಲು ಅಖಿಲೇಶ್ ಯಾದವ್ ಅವರ ಹೆಸರನ್ನು ಪ್ರಕರಣದಲ್ಲಿ ತಳುಕು ಹಾಕಿ ಸುಳ್ಳು ಸುದ್ದಿ ಹಬ್ಬಿಸಿದ್ದೀರಿ. ಎರಡು ವಾರಗಳಲ್ಲಿ ಬಹಿರಂಗವಾಗಿ ಕ್ಷಮೆಯಾಚನೆ ಮಾಡದಿದ್ದರೇ ನಿಮ್ಮ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದರು.
ದುಬೆ ಆರಂಭದಲ್ಲಿ ತಮ್ಮ ಹೇಳಿಕೆಗೆ ಬದ್ಧರಾಗಿದ್ದರು, ತಾವು ಕೇವಲ ಒಂದು ಪ್ರಶ್ನೆಯನ್ನು ಕೇಳಿದ್ದೇವೆಯೇ ಹೊರತು ಯಾವುದೇ ನೇರ ಆರೋಪವನ್ನು ಮಾಡಿಲ್ಲ ಎಂದು ವಾದಿಸಿದ್ದರು. ಆದರೆ ಇಂದು ಮಾನಹಾನಿ ಮಾಡುವ ಉದ್ದೇಶವಿಲ್ಲ ಎಂದು ಅಖಿಲೇಶ್ ಯಾದವ್ ಅವರ ವಕೀಲರ ಮುಂದೆ ಕ್ಷಮೆಯಾಚನೆ ಮಾಡಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).