ಅಖಿಲೇಶ್ ಯಾದವ್ ಮತ್ತು ಅಮಿತ್ ಶಾ
ನವದೆಹಲಿ: ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿ ಚಾರ್ಜ್ ಮತ್ತು ಪೆಲೆಟ್ ಗನ್ ಪ್ರಯೋಗ ಸಂಬಂದ ಸದನದಲ್ಲಿ ಉತ್ತರ ನೀಡುವುದಾಗಿ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮಾತಿಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಖಿಲೇಶ್ ಯಾದವ್(Akhilesh Yadav), ದೇಶ ನಿಮ್ಮ ಭಾಷಣ ಕೇಳುವ ಮೂಡ್ನಲ್ಲಿಲ್ಲ ಎಂದು ಟಾಂಗ್ ನೀಡಿದ್ದಾರೆ.
ವಿದ್ಯಾರ್ಥಿಗಳ ಮೇಲಿನ ಲಾಠಿ ಚಾರ್ಜ್ ಬಗ್ಗೆ ಸದನಲ್ಲಿ ಉತ್ತರ ನೀಡಲು ಸರ್ಕಾರ ನಿಗದಿ ಪಡಿಸಿದ ಸಮಯದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿರುವ ಅವರು, ಸಂಸತ್ತಿನಲ್ಲಿ ಸರ್ಕಾರ ಉತ್ತರಗಳನ್ನು ನೀಡಲು ನಿಗದಿ ಪಡಿಸಿದ ಕಾಲಮಿತಿಯು ಸ್ವತಃ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ವಾಸ್ತವದಲ್ಲಿ ಇದು ಯಾವುದೇ ಅರ್ಥಪೂರ್ಣ ಉತ್ತರವಾಗಿರಲ್ಲ. ಬದಲಿಗೆ, ಕೇವಲ ಒಂದು ಪೊಳ್ಳು ಹೇಳಿಕೆಯಷ್ಟೇ ಆಗಿರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಾಸ್ತವವಾಗಿ ಬಿಜೆಪಿ ಸರ್ಕಾರಕ್ಕೆ ಯಾವುದೇ ಉತ್ತರ ನೀಡುವ ಉದ್ದೇಶವಿಲ್ಲ. ಅದು ಅಧಿವೇಶನವನ್ನು ಮುಕ್ತಾಯಗೊಳಿಸಲು ಆತುರಪಡುತ್ತಿದೆ. ಜವಾಬ್ದಾರಿ ಮತ್ತು ಹೊಣೆಗಾರಿಕೆಯು ಕಾಲಮಿತಿಗಳನ್ನು ಹೇರುವ ಮೂಲಕವಲ್ಲ, ಬದಲಾಗಿ ಕರ್ತವ್ಯಬೋಧನೆಯ ತಾರ್ಕಿಕತೆಯ ಮೂಲಕವೇ ಸಾಕಾರಗೊಳ್ಳುತ್ತವೆ ಎಂದಿದ್ದಾರೆ.
ಸಂಸತ್ನಲ್ಲಿ ಉತ್ತರ ನೀಡುವುದು, ಕೇವಲ ಪ್ರಶ್ನೆಯೊಂದಕ್ಕೆ ಮೇಲ್ನೋಟದ ಉತ್ತರ ನೀಡುವ ಔಪಚಾರಿಕತೆಯಲ್ಲ. ಬದಲಾಗಿ, ಇದು 'ದೇವರು ಮತ್ತು ಮನುಷ್ಯ' ಇಬ್ಬರ ವಿರುದ್ಧವೂ ನಡೆಯುವ ದುರ್ನಡತೆ ಹಾಗೂ ದ್ವೇಷಭಾವನೆಗೆ ಸಂಬಂಧಿಸಿದ ಅತ್ಯಂತ ಗಂಭೀರವಾದ ವಿಷಯವಾಗಿದೆ. ಈಗ ದೇಶವು ನಿಮ್ಮ ಭಾಷಣಗಳನ್ನು ಕೇಳುವ ಮೂಡ್ನಲ್ಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಅಮಿತ್ ಶಾ ಹೇಳಿದ್ದೇನು?
ಜುಲೈ 20ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ಹಾಗೂ ಪೆಲೆಟ್ ಗನ್ ಪ್ರಹಾರದ ಕುರಿತು ಗೃಹ ಸಚಿವರು ಸಂಸತ್ತಿನಲ್ಲಿ ನೇರ ಉತ್ತರ ನೀಡಬೇಕು ಎಂದು ವಿಪಕ್ಷಗಳು ಸತತವಾಗಿ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದವು. ಅಧಿವೇಶನ ಆರಂಭವಾದಾಗಿನಿಂದ ಸದನಕ್ಕೆ ಹಾಜರಾಗದೇ ಇದ್ದ ಅಮಿತ್ ಶಾ ಅವರು, ಇಂದು ಮೊದಲ ಬಾರಿಗೆ ಮೌನ ಮುರಿದು, ರೋಧ ಪಕ್ಷಗಳು ವಿದ್ಯಾರ್ಥಿಗಳ ವಿಚಾರದಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವುದರಿಂದ ಓಡಿಹೋಗುತ್ತಿವೆ ಎಂದಿದ್ದಾರೆ.
ಸಂಸತ್ತಿನಲ್ಲಿ ನಿಯಮಾವಳಿಗಳ ಪ್ರಕಾರ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷಗಳಿಗೆ ಸವಾಲು ಹಾಕಿದ ಗೃಹ ಸಚಿವರು, ಇಂದು ಮಧ್ಯಾಹ್ನ 3 ಗಂಟೆಯಿಂದ ಚರ್ಚೆ ಆರಂಭವಾದರೆ ತಾವು ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸದನದಲ್ಲೇ ಕುಳಿತು, ವಿಪಕ್ಷಗಳ ಎಲ್ಲಾ ಪ್ರಶ್ನೆಗಳಿಗೂ ಸುದೀರ್ಘ ಹಾಗೂ ವಿಸ್ತೃತವಾದ ವಿವರಣೆ ನೀಡಲು ಸಿದ್ಧವಿರುವುದಾಗಿ ತಿಳಿಸಿದರು.
ಇನ್ನೈ ಚರ್ಚೆ ಆರಂಭವಾಗುವ ಮುನ್ನವೇ ತಾವು ಹೇಳಿಕೆ ನೀಡಬೇಕು ಎಂಬ ವಿಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ ಷಾ, ಸಂಸತ್ತಿನ ನಿಯಮಗಳ ಪ್ರಕಾರ ಮೊದಲು ವಿಸ್ತೃತ ಚರ್ಚೆ ನಡೆಯಬೇಕು, ಆ ನಂತರವೇ ಗೃಹ ಸಚಿವನಾಗಿ ನಾನು ಉತ್ತರ ನೀಡಲು ಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ (ಏಜೆನ್ಸೀಸ್).