ಮಮತಾ ಬ್ಯಾನರ್ಜಿಯನ್ನು ಸನ್ಮಾನಿಸುತ್ತಿರುವ ಅಖಿಲೇಶ್ ಯಾದವ್
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಸೋಲಿನ ಬಳಿಕ ಕೋಲ್ಕತ್ತಾ ತೆರಳಿ ಮಮತಾ ಬ್ಯಾನರ್ಜಿ ಬೆಂಬಲಿಸಿರುವ ಯುಪಿ ಮಾಜಿ ಸಿಎಂ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್(Akhilesh Yadav), ನೀವು ಸೋತಿಲ್ಲ, ಗೆದ್ದಿದ್ದೀರಿ ಎಂದು ಸನ್ಮಾನ ಮಾಡಿದ್ದಾರೆ. ಜೊತೆಗೆ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.
ಗುರುವಾರ(ಮೇ 07) ಬ್ಯಾನರ್ಜಿ ಅವರ ಕಾಲಿಘಾಟ್ ನಿವಾಸದಲ್ಲಿ ಭೇಟಿಯಾದ ಅಖಿಲೇಶ್, ಬಂಗಾಳದಲ್ಲಿ ಚುನಾವಣೆಯಲ್ಲಿ ಸೋಲಿನ ನಂತರ ಟಿಎಂಸಿ ನಾಯಕತ್ವದೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿರುವ ಯಾದವ್, ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯನ್ನು ಉತ್ತರ ಪ್ರದೇಶ ಮಾದರಿಯಲ್ಲಿ ನಡೆಸಲಾಗಿದ್ದು, ಕುಶಲತೆ ಮತ್ತು ಬೆದರಿಕೆಯ ಮೂಲಕ ನಡೆಸಲಾಗಿದೆ. ಬಿಜೆಪಿ, ಚುನಾವಣಾ ಆಯೋಗ ಹಾಗೂ ಭೂಗತ ಶಕ್ತಿಗಳನ್ನು ಒಳಗೊಂಡ ಬಹು-ಪದರದ ಮಾಫಿಯಾ ತಂತ್ರಗಳಿಗೆ ಸಾಕ್ಷಿಯಾಗಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಅವರ ಸುರಕ್ಷತೆಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿರುವ ಅವರು, ಬಿಜೆಪಿಯನ್ನು ಮಹಿಳಾ ವಿರೋಧಿ ಎಂದು ಕರೆದಿದ್ದು, ದೇಶಾದ್ಯಂತದ ಪ್ರಜಾಪ್ರಭುತ್ವ ಶಕ್ತಿಗಳು ಒಂದಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಏ. 23 ಮತ್ತು 29ರಂದು ಎರಡು ಹಂತದಲ್ಲಿ ನಡೆದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ 294 ಸ್ಥಾನಗಳ ಪೈಕಿ ಕೇವಲ 80 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ತೃಣಮೂಲ ಪಕ್ಷವು ಬಿಜೆಪಿ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಬಿಜೆಪಿ 207 ಸ್ಥಾನಗಳಲ್ಲಿ ಭಾರಿ ಗೆಲುವು ಸಾಧಿಸಿದ್ದು, ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲಿದೆ (ಏಜೆನ್ಸೀಸ್).