ದೇಶ

ಡಿ. 12ರಂದು ರಾಮಮಂದಿರಕ್ಕೆ ಅಖಿಲೇಶ್ ಯಾದವ್ ದಂಪತಿ​ ಭೇಟಿ; ಮೊದಲು ರಾಮಭಕ್ತರ ಕ್ಷಮೆ ಕೇಳಿ ಎಂದ್ರು ಸಿಎಂ ಯೋಗಿ | CM Yogi

ರಾಮ ಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿದವರು, ಸಾಧು-ಸಂತರನ್ನು ಲಾಠಿಚಾರ್ಜ್‌ಗೆ ಒಳಪಡಿಸಿದವರು ಹಾಗೂ ಅಯೋಧ್ಯೆಯನ್ನು ನಿರ್ಲಕ್ಷಿಸಿದವರು ಭಕ್ತರು ಮತ್ತು ಸಂತರಲ್ಲಿ ಕ್ಷಮೆಯಾಚಿಸಿದ ಬಳಿಕವೇ ರಾಮ ಮಂದಿರಕ್ಕೆ ಭೇಟಿ ನೀಡಬೇಕು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ .

ಲಖನೌ: ರಾಮ ಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿದವರು, ಸಾಧು-ಸಂತರನ್ನು ಲಾಠಿಚಾರ್ಜ್‌ಗೆ ಒಳಪಡಿಸಿದವರು ಹಾಗೂ ಅಯೋಧ್ಯೆಯನ್ನು ನಿರ್ಲಕ್ಷಿಸಿದವರು ಭಕ್ತರು ಮತ್ತು ಸಂತರಲ್ಲಿ ಕ್ಷಮೆಯಾಚಿಸಿದ ಬಳಿಕವೇ ರಾಮ ಮಂದಿರಕ್ಕೆ ಭೇಟಿ ನೀಡಬೇಕು ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ .

ಡಿಸೆಂಬರ್ 12ರಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ರಾಮ ಮಂದಿರ ಮತ್ತು ಹನುಮಾನ್‌ಗಢಿಗೆ ಭೇಟಿ ನೀಡಲಿದ್ದಾರೆ ಎಂದು ಎಸ್​ಪಿ ಮಾಜಿ ಶಾಸಕ ಪವನ್ ಪಾಂಡೆ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಯೋಗಿ ಈ ಹೇಳಿಕೆ ನೀಡಿದ್ದಾರೆ. 2024ರ ಜನವರಿಯಲ್ಲಿ ಉದ್ಘಾಟನೆಯಾದ ಬಳಿಕ ಅಖಿಲೇಶ್ ಯಾದವ್ ರಾಮ ಮಂದಿರಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು.

ಅಯೋಧ್ಯೆಯಲ್ಲಿ ಇಂದು(ನ. 07) ನಡೆದ 10 ನೇ ಆವೃತ್ತಿಯ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಸಮಾಜವಾದಿ ಪಕ್ಷ ಅಥವಾ ಯಾದವ್ ಅವರ ಹೆಸರನ್ನು ಹೇಳದೆ, ಅಯೋಧ್ಯೆಯನ್ನು ರಕ್ತಸಿಕ್ತಗೊಳಿಸಿದವರು ಅಯೋಧ್ಯೆಯನ್ನು ಸಹ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಅಯೋಧ್ಯೆಗೆ ಬರಲಿ, ಆದರೆ ಮೊದಲು ರಾಮಭಕ್ತರ ಕ್ಷಮೆ ಕೇಳಬೇಕು ಎಂದಿದ್ದಾರೆ.

ಮುಂದುವರೆದು, ಭಗವಂತ ತುಂಬಾ ಕರುಣಾಮಯಿ. ಅವನು ಎಲ್ಲರನ್ನೂ ಕ್ಷಮಿಸುತ್ತಾನೆ. ಅಧಿಕಾರದ ದುರಹಂಕಾರವನ್ನು ಕೊನೆಗೊಳಿಸಲು ಭಗವಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ರಾಮ ಭಕ್ತರಾದ ನೀವು ಸೃಷ್ಟಿಸಿರುವ ಇತಿಹಾಸವನ್ನು ನೋಡಿದರೆ, ಅಯೋಧ್ಯೆಯಲ್ಲಿ ಭಕ್ತರ ಮೇಲೆ ಗುಂಡು ಹಾರಿಸಲು ಈಗ ಯಾರೂ ಧೈರ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಆದಿತ್ಯನಾಥ್ ಅವರು ಉಲ್ಲೇಖಿಸಿದ ರಕ್ತಸಿಕ್ತ ಘಟನೆ 1990ರಲ್ಲಿ ನಡೆಯಿತು. ರಾಮ ಮಂದಿರವನ್ನು ನಿರ್ಮಿಸುವ ಚಳುವಳಿಯ ಉತ್ತುಂಗದಲ್ಲಿದ್ದಾಗ ಬಾಬರಿ ಮಸೀದಿಯನ್ನು ತಲುಪಲು ಪ್ರಯತ್ನಿಸುತ್ತಿದ್ದ 'ಕರಸೇವಕರ' ಮೇಲೆ ಪೊಲೀಸರು ಗೋಲಿ ಬಾರ್ ನಡೆಸಿದ್ದರು. ಅಂದು ಅಖಿಲೇಶ್ ಯಾದವ್ ಅವರ ತಂದೆ ಮುಲಾಯಂ ಸಿಂಗ್ ಯಾದವ್ ಅವರು ಸಿಎಂ ಆಗಿದ್ದರು.

ಕೇಂದ್ರದಲ್ಲಿ ಆಗ ಅಧಿಕಾರದಲ್ಲಿದ್ದ ಚಂದ್ರಶೇಖರ್ ಸರ್ಕಾರವು, ಈ ಘಟನೆಯಲ್ಲಿ 15 ಜನರು ಮೃತಪಟ್ಟಿದ್ದಾರೆ ಎಂದು ತಿಳಿಸಿತ್ತು. ಮುಲಾಯಂ ಸಿಂಗ್ ಅವರು ಕಾಲಕಾಲಕ್ಕೆ ಬೇರೆ ಬೇರೆ ಅಂಕಿಅಂಶಗಳನ್ನು ನೀಡಿದ್ದರು. ಆದರೆ ಬಿಜೆಪಿ, ವಿಎಚ್‌ಪಿ (VHP) ಮತ್ತು ಇತರ ಹಿಂದುತ್ವ ಸಂಘಟನೆಗಳು 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿವೆ (ಏಜೆನ್ಸೀಸ್).