ಸರ್ಕಾರಿ ಕೆಲ್ಸ ಸಿಕ್ಕ ನಂತ್ರ​ ಕಂಡಕ್ಟರ್​ ಜತೆ ಎಸ್ಕೇಪ್... ಖ್ಯಾತ ಯೂಟ್ಯೂಬರ್​​ ಪತ್ನಿಯ ಕುರಿತ ಮತ್ತಷ್ಟು ಕರಾಳ ಸಂಗತಿಗಳು ಬಯಲು! Akhil NRD 
ದೇಶ

ಸರ್ಕಾರಿ ಕೆಲ್ಸ ಸಿಕ್ಕ ನಂತ್ರ​ ಕಂಡಕ್ಟರ್​ ಜತೆ ಎಸ್ಕೇಪ್... ಖ್ಯಾತ ಯೂಟ್ಯೂಬರ್​​ ಪತ್ನಿಯ ಕುರಿತ ಮತ್ತಷ್ಟು ಕರಾಳ ಸಂಗತಿಗಳು ಬಯಲು! Akhil NRD

ಪ್ರಮುಖ ಮುಖ್ಯಾಂಶಗಳು

  • ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಅಖಿಲ್ ಎನ್‌ಆರ್‌ಡಿ ಅವರ ಪತ್ನಿ ಓಡಿಹೋಗಿರುವುದು ನಿಜ
  • ಕಂಡಕ್ಟರ್​ಗೆ ಸರ್ಕಾರಿ ಉದ್ಯೋಗ ಕನ್ಫರ್ಮ್​ ಆದ ಕೂಡಲೇ ಆತನ ಜತೆ ಎಸ್ಕೇಪ್​ ಆದ ಮೇಘಾ
  • ಹಣ ಹಾಗೂ ಆಭರಣಗಳೊಂದಿಗೆ ಕಂಡಕ್ಟರ್​ ಜೊತೆ ಎಸ್ಕೇಪ್​ ಆಗಿರುವ ಮೇಘಾ
  • ಸಿಸಿಟಿವಿ ದೃಶ್ಯಾವಳಿಗಳಿಂದ ರಾತ್ರಿಯ ವೇಳೆ ಮೇಘಾ ಓಡಿಹೋಗಿರುವುದು ಬೆಳಕಿಗೆ
ತಿರುವನಂತಪುರಂ: ಮಲಯಾಳಂ ಕಂಟೆಂಟ್ ಕ್ರಿಯೇಟರ್ ಅಖಿಲ್ ಎನ್‌ಆರ್‌ಡಿ ( Akhil NRD ) ಮತ್ತು ಮೇಘಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಜನಪ್ರಿಯತೆ ಪಡೆದಿದ್ದ ದಂಪತಿ. ಆದರೆ, ಅಖಿಲ್ ಅವರು ಪ್ರಸ್ತುತ ತಮ್ಮ ಜೀವನದಲ್ಲಿ ಕಷ್ಟದ ಕಾಲವನ್ನು ಎದುರಿಸುತ್ತಿದ್ದು, ಅವರ ಪತ್ನಿ ಮೇಘಾ ಮನೆಬಿಟ್ಟು ಬಸ್​ ಕಂಡಕ್ಟರ್​ ಜೊತೆ ಎಸ್ಕೇಪ್​ ಆಗಿದ್ದಾರೆ ಎಂದು ವರದಿಯಾಗಿದೆ. ಕಂಡಕ್ಟರ್​ಗೆ ಸರ್ಕಾರಿ ಉದ್ಯೋಗ ಸಿಕ್ಕ ತಕ್ಷಣವೇ ಮೇಘಾ ಓಡಿಹೋಗಿದ್ದಾರೆ. ಈ ಘಟನೆಯನ್ನು ತಿಳಿದು ಅಖಿಲ್ ಅವರ ಸ್ನೇಹಿತರು ಹಾಗೂ ಹಿತೈಸಿಗಳೂ ಸಹ ಆತಂಕಗೊಂಡಿದ್ದಾರೆ.
ಮೇಘಾ ಅವರು ತಮ್ಮ ಪ್ರೇಮಿಯೊಂದಿಗೆ ಓಡಿಹೋಗಿದ್ದಾರೆ ಎಂಬ ಸುದ್ದಿ ಹೊರಬಂದಾಗ ಅಖಿಲ್​ ಅವರು ಅಭಿಮಾನಿಗಳು ಕೂಡ ಆಘಾತಕ್ಕೆ ಒಳಗಾದರು. ವಾಸ್ತವವಾಗಿ, ಮದುವೆಗೂ ಮುಂಚೆ ಮೇಘಾ ಅವರ ಹಿನ್ನೆಲೆಯು ಸಂಪೂರ್ಣವಾಗಿ ಭಿನ್ನವಾಗಿತ್ತು. ಆದರೆ, ಅವರನ್ನು ಕಂಟೆಂಟ್ ಕ್ರಿಯೇಷನ್ ಲೋಕಕ್ಕೆ ಕರೆತಂದವರೇ ಅಖಿಲ್. ಅಖಿಲ್ ಅವರು ಮಾಡುತ್ತಿದ್ದ ವಿಡಿಯೋ ವ್ಲಾಗ್‌ಗಳಲ್ಲಿ ಮೇಘಾ ಅವರು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು.
ಅಂದಹಾಗೆ, ಮೇಘಾ ಅವರು ಎಲ್‌ಎಲ್‌ಬಿ (LLB) ಪದವಿ ಪಡೆದಿದ್ದಾರೆ. ಆದರೆ, ಅವರು ವಕೀಲ ವೃತ್ತಿಯನ್ನು ಅಭ್ಯಾಸ ಮಾಡಿದ್ದಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಅಖಿಲ್ ಮತ್ತು ಮೇಘಾ ದೀರ್ಘಕಾಲದ ಪ್ರೇಮ ಸಂಬಂಧದಲ್ಲಿದ್ದರು. ಇವರ ಪ್ರೇಮವು ಲಾ ಕಾಲೇಜಿನಲ್ಲಿ ಅಥವಾ ಅದಕ್ಕೂ ಮುಂಚೆಯೇ ಪ್ರಾರಂಭವಾಗಿರಬಹುದು. ಕೆಲವು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ, ಇಬ್ಬರು ಮದುವೆಯಾಗಲು ನಿರ್ಧರಿಸಿದರು. ನಂತರ ಅಖಿಲ್ ಮತ್ತು ಮೇಘಾ 2024ರ ನವೆಂಬರ್ ತಿಂಗಳಲ್ಲಿ ಸಾಂಪ್ರದಾಯಿಕ ಸಮಾರಂಭದಲ್ಲಿ ವಿವಾಹವಾದರು.
ಅಖಿಲ್ ಮತ್ತು ಮೇಘಾ ದಂಪತಿಗೆ ಮಕ್ಕಳಿಲ್ಲ. ಮದುವೆಯ ನಂತರ ಅಖಿಲ್ ಅವರು ಮೇಘಾ ಅವರನ್ನು ವ್ಲಾಗಿಂಗ್ ಮಾಡಲು ಪ್ರೋತ್ಸಾಹಿಸಿದರು. ಇವರ ಲೈಫ್‌ಸ್ಟೈಲ್ ಮತ್ತು ಕಾಮಿಡಿ ವಿಡಿಯೋಗಳಲ್ಲಿ ಇವರಿಬ್ಬರನ್ನು ಜೊತೆಯಾಗಿ ನೋಡಲು ಅಭಿಮಾನಿಗಳು ತುಂಬಾ ಇಷ್ಟಪಡುತ್ತಿದ್ದರು. ಅಖಿಲ್ ಅವರ ಪ್ರೇಕ್ಷಕರೊಂದಿಗೆ ಪರಿಚಯವಾದ ನಂತರ, ಮೇಘಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮದೇ ಆದ ಪ್ರತ್ಯೇಕ ಪುಟವನ್ನು ಪ್ರಾರಂಭಿಸಿದರು. ಅವರು ಫ್ಯಾಷನ್ ಮತ್ತು ಬ್ಯೂಟಿಗೆ ಸಂಬಂಧಿಸಿದ ಕಂಟೆಂಟ್‌ಗಳನ್ನು ಪೋಸ್ಟ್ ಮಾಡುತ್ತಾರೆ.
ಮದುವೆಯ ನಂತರವೂ ಮೇಘಾ ಅವರು ವಿದ್ಯಾಭ್ಯಾಸದಲ್ಲಿ ಆಸಕ್ತಿ ಹೊಂದಿದ್ದರು. ಅವರು ನಿರ್ದಿಷ್ಟ ಕೋರ್ಸ್ ಮಾಡಲು ಬಯಸಿದ್ದರು. ಆ ಬಯಕೆಯನ್ನು ಅರಿತ ಅಖಿಲ್, ಮೇಘಾರನ್ನು ಕೇಳದೆ ಆ ಕೋರ್ಸ್‌ಗೆ ಸೇರಿಸಿ ಸಪ್ರೈಸ್​ ನೀಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ, ಆ ಕೋರ್ಸ್‌ಗೆ ಹೋಗಲು ಮೇಘಾ ಅವರು ಬಸ್‌ನಲ್ಲಿ ಪ್ರಯಾಣಿಸಬೇಕಿತ್ತು. ಆ ಸಂದರ್ಭದಲ್ಲಿ ಬಸ್ ಕಂಡಕ್ಟರ್ ಪರಿಚಯವಾಗಿದ್ದು, ಕಾಲಕ್ರಮೇಣ ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆಯಿತು ಎನ್ನಲಾಗಿದೆ.
ಅಖಿಲ್ ಮತ್ತು ಮೇಘಾ ಅವರ ದಾಂಪತ್ಯ ಜೀವನದಲ್ಲಿ ಬಹಳ ದಿನಗಳಿಂದ ಏರಿಳಿತಗಳು ಉಂಟಾಗಿದ್ದವು. ಮೇಘಾ ಮನೆಯಿಂದ ಹೊರಟು ಹೋದ ನಂತರ ಮತ್ತು ಅವರ ವೈಯಕ್ತಿಕ ಜೀವನದ ಬಗ್ಗೆ ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆದವು. ಇದನ್ನು ನೋಡಿದ ಮೇಘಾ ತಮ್ಮ ಕಡೆಯ ಸ್ಪಷ್ಟನೆಯನ್ನು ನೀಡಲು ಒಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈಗ ಡಿಲೀಟ್​ ಮಾಡಿರುವ ಆ ವಿಡಿಯೋದಲ್ಲಿ, ತಮ್ಮ ಹಾಗೂ ಅಖಿಲ್ ಅವರ ಸಂಬಂಧದಲ್ಲಿ ತುಂಬಾ ದಿನಗಳಿಂದ ಮನಸ್ತಾಪ ಇತ್ತು, ಇದಕ್ಕೆಲ್ಲ ಅಖಿಲ್ ಅವರೇ ಕಾರಣ ಎಂದಿದ್ದರು. ಅಖಿಲ್ ಅವರು ಹಲವಾರು ಮಹಿಳೆಯರೊಂದಿಗೆ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಮೇಘಾ ಆರೋಪಿಸಿದ್ದರು. ಈ ಕಾರಣದಿಂದಲೇ ಅವರು ಮನೆಯನ್ನು ತೊರೆಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಕೊನೆಗೆ ಮೇಘಾ ಸ್ಥಳೀಯ ಬಸ್ ಕಂಡಕ್ಟರ್ ಜತೆ ಓಡಿಹೋಗಿದ್ದಾರೆ. ಆ ಕಂಡಕ್ಟರ್​ಗೆ ಇತ್ತೀಚೆಗೆ ಸರ್ಕಾರಿ ಉದ್ಯೋಗ ದೊರೆತಿತ್ತು. ಮೇಘಾ ಅವರು ತಮ್ಮೊಂದಿಗೆ ಹಣ, ಆಭರಣಗಳು ಹಾಗೂ ಇತ್ಯಾದಿ ದುಬಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ, ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಅದರಲ್ಲಿ ಮೇಘಾ ಅವರು ನೈಟ್‌ಗೌನ್ ಧರಿಸಿ ಓಡಿಹೋಗುತ್ತಿರುವುದು ಕಂಡುಬಂದಿದೆ.
ಮೇಘಾ ಓಡಿಹೋಗಿರುವ ಬಗ್ಗೆ ಅಖಿಲ್‌ಗೆ ಯಾವುದೇ ಸುಳಿವು ಇರಲಿಲ್ಲ ಮತ್ತು ಅವರು ನಾಪತ್ತೆಯಾಗಿದ್ದಾರೆ ಎಂದೇ ಅಖಿಲ್ ಭಾವಿಸಿದ್ದರು. ಈ ವಿಷಯ ಬೆಳಕಿಗೆ ಬರುವ ಮುಂಚೆಯೇ ಅಖಿಲ್ ನಾಪತ್ತೆ ದೂರು ದಾಖಲಿಸಿದ್ದರು. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ನಂತರ ಅವರಿಗೆ ಸತ್ಯಾಂಶ ತಿಳಿದುಬಂದಿದೆ. ವೈರಲ್ ಆಗಿರುವ ಆ ವಿಡಿಯೋದಲ್ಲಿ, ರಾತ್ರಿಯ ವೇಳೆ ಮೇಘಾ ಅವರು ಬಸ್ ಕಂಡಕ್ಟರ್ ಜೊತೆ ಓಡಿಹೋಗುತ್ತಿರುವುದು ಕಂಡುಬಂದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಅವರು ನೈಟ್‌ಗೌನ್ ಧರಿಸಿ ಸೂಟ್‌ಕೇಸ್ ಹಿಡಿದುಕೊಂಡು ಹೋಗುತ್ತಿರುವುದು ಸೆರೆಯಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿಯು ಮೇಘಾಳಿಗಾಗಿ ಕಾಯುತ್ತಿರುವುದು ಮತ್ತು ನಂತರ ಇಬ್ಬರೂ ಒಟ್ಟಿಗೆ ಓಡಿಹೋಗುತ್ತಿರುವುದು ಕಾಣಿಸಿಕೊಂಡಿದೆ.
ಅಂದಹಾಗೆ, ಅಖಿಲ್ ಮತ್ತು ಮೇಘಾ ಅವರ ವಿವಾಹವು 2024ರಲ್ಲಿ ಅದ್ಧೂರಿಯಾಗಿ ನೆರವೇರಿತ್ತು. ಆ ಸಂದರ್ಭದಲ್ಲಿ ಇವರ ಮದುವೆಯ ತಮಾಷೆಯ ರೀಲ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ ಎಲ್ಲರ ಗಮನ ಸೆಳೆದಿತ್ತು. ಆ ವೈರಲ್ ವಿಡಿಯೋದಲ್ಲಿ ಅಖಿಲ್ ತಮ್ಮ ನವವಧು ಮೇಘಾಗೆ, ತಾವು ಇನ್ಮುಂದೆ ಬೇರೆ ಹೆಣ್ಣುಮಕ್ಕಳ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳನ್ನು ಲೈಕ್ ಮಾಡುವುದಿಲ್ಲ ಹಾಗೂ ಬೇರೆ ಯಾರಿಗೂ ಡಿಎಂ (DM) ಮಾಡುವುದಿಲ್ಲ ಎಂದು ತಮಾಷೆಯಾಗಿ ಭಾಷೆ ನೀಡುತ್ತಿರುವುದು ಸೆರೆಯಾಗಿತ್ತು. ಆದರೆ ಕಾಲಚಕ್ರದ ಬದಲಾವಣೆಯಲ್ಲಿ ವಿಡಿಯೋದಲ್ಲಿ ವಾಗ್ದಾನ ನೀಡಿದ್ದ ಅಖಿಲ್‌ಗೆ ಕೈಮುಗಿದು ಜೀವನ ನಡೆಸಬೇಕಿದ್ದ ಪತ್ನಿ ಮೇಘಾ ನಾಯರ್ ಈಗ ಎಸ್ಕೇಪ್​ ಆಗಿ ವಿವಾದದ ಕೇಂದ್ರವಾಗಿದ್ದು, ಅಂದು ಅವರು ಪತ್ನಿಗೆ ಭಾಷೆ ನೀಡುವ ಬದಲು ಅವರಿಂದಲೇ ಇಂತಹದ್ದೊಂದು ಭಾಷೆ ಅಥವಾ ಪ್ರಮಾಣವನ್ನು ಪಡೆದುಕೊಳ್ಳಬೇಕಿತ್ತು ಎಂಬಂತೆ ಸದ್ಯದ ಪರಿಸ್ಥಿತಿ ಎಲ್ಲರಲ್ಲೂ ಅಚ್ಚರಿ ಹಾಗೂ ಮರುಕ ಮೂಡಿಸಿದೆ, (ಏಜೆನ್ಸೀಸ್​).