ಲೆಮನ್​ ರೈಸ್​ನಲ್ಲಿ ಕಲ್ಲು ಪತ್ತೆ 
ದೇಶ

ಏರ್‌ಪೋರ್ಟ್ ಕ್ಯಾಂಟೀನ್‌ನಲ್ಲಿ ಅವಾಂತರ: ಲೆಮನ್​ ರೈಸ್​ನಲ್ಲಿ ಕಲ್ಲು; ವಿಡಿಯೋ ಫುಲ್​ ವೈರಲ್ಲು! Stone in Lemon Rice

ಪ್ರಮುಖ ಮುಖ್ಯಾಂಶಗಳು

  • ಲೆಮನ್​ ರೈಸ್​ನಲ್ಲಿ ಕಲ್ಲು ಪತ್ತೆ
  • ಹೈದರಾಬಾದ್​ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ
  • ಚಾಲಕ ಮತ್ತು ಗ್ರಾಹಕರಿಗೆ ಉತ್ತಮವಾದ ಆಹಾರ ಕೊಡಿ ಎಂದ ಕಾರ್ಮಿಕರ ಯೂನಿಯನ್​
ಹೈದರಾಬಾದ್: ಭಾರತದಲ್ಲಿ ದೊರೆಯುವ ಆಹಾರ ಪದಾರ್ಥಗಳಲ್ಲಿ ಕಲಬೆರಿಕೆ ಮತ್ತು ಶುಚಿತ್ವದ ಕುರಿತಾದ ಸುದ್ದಿಗಳು ದಿನನಿತ್ಯ ಕೇಳಿ ಬರುತ್ತಿರುತ್ತದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (RGIA) ಈಗ ಆಹಾರ ಸುರಕ್ಷತೆಯ ವಿಚಾರವಾಗಿ ಸುದ್ದಿಯಲ್ಲಿದೆ. ಇಲ್ಲಿನ ಕ್ಯಾಂಟೀನ್‌ನಲ್ಲಿ ಬಡಿಸಲಾದ ನಿಂಬೆ ಅನ್ನ (Lemon Rice) ಕಲ್ಲು ಪತ್ತೆ (Stone in Lemon Rice) ಯಾಗಿದ್ದು, ಪ್ರಯಾಣಿಕರು ಮತ್ತು ಚಾಲಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಏನಿದು ಘಟನೆ?

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್ (TGPWU) ಸಾಮಾಜಿಕ ಜಾಲತಾಣವಾದ ಎಕ್ಸ್ (ಟ್ವಿಟರ್) ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಮಾನ ನಿಲ್ದಾಣದ ಕ್ಯಾಂಟೀನ್‌ನಲ್ಲಿ ಚಾಲಕರು ಮತ್ತು ಗ್ರಾಹಕರಿಗೆ ಬಡಿಸಲಾದ ನಿಂಬೆ ಅನ್ನದಲ್ಲಿ ದೊಡ್ಡದೊಂದು ಕಲ್ಲು ಪತ್ತೆಯಾಗಿದೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಒಕ್ಕೂಟವು, ಇಷ್ಟೊಂದು ದೊಡ್ಡ ವಿಮಾನ ನಿಲ್ದಾಣದಲ್ಲಿ ಆಹಾರದ ಗುಣಮಟ್ಟ ಇಷ್ಟು ಕಳಪೆಯಾಗಿರುವುದು ಆಘಾತಕಾರಿ ಎಂದು ಟೀಕಿಸಿದೆ.
ನಿರ್ಲಕ್ಷ್ಯದ ಪರಾಕಾಷ್ಠೆ!
ವಿಮಾನ ನಿಲ್ದಾಣ ಎಂದರೆ ಕೇವಲ ವಿಮಾನ ಪ್ರಯಾಣಿಕರು ಮಾತ್ರವಲ್ಲ, ಸಾವಿರಾರು ಟ್ಯಾಕ್ಸಿ ಚಾಲಕರು, ಸಿಬ್ಬಂದಿ ಮತ್ತು ಸಂದರ್ಶಕರು ಪ್ರತಿದಿನ ಈ ಕ್ಯಾಂಟೀನ್ ಅನ್ನು ಅವಲಂಬಿಸಿದ್ದಾರೆ. ಇದು ಕೇವಲ ಒಂದು ಚಿಕ್ಕ ತಪ್ಪು ಎಂದು ಸುಮ್ಮನಿರಲು ಸಾಧ್ಯವಿಲ್ಲ.
ಇದು ಆಹಾರ ನಿರ್ವಹಣೆಯಲ್ಲಿನ ದೊಡ್ಡ ಮಟ್ಟದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಒಕ್ಕೂಟ ಆಕ್ರೋಶ ಹೊರಹಾಕಿದೆ. ಈ ಕುರಿತು ಜಿಎಂಆರ್ (GMR) ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಇಒ ಪ್ರದೀಪ್ ಪಣಿಕ್ಕರ್ ಅವರ ಗಮನ ಸೆಳೆಯಲಾಗಿದ್ದು, ತಕ್ಷಣವೇ ಕ್ರಮ ಕೈಗೊಳ್ಳುವಂತೆ ಯೂನಿಯನ್​ ಒತ್ತಾಯಿಸಿದೆ.

ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಅವಕಾಶ ನೀಡಿ

ಕ್ಯಾಂಟೀನ್ ನಿರ್ವಹಣೆಯಲ್ಲಿ ವ್ಯಾಪಕ ಲೋಪಗಳಿರುವುದನ್ನು ಗಮನಿಸಿರುವ ಯೂನಿಯನ್​, ಸದ್ಯದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸುವಂತೆ ಕೋರಿದೆ. ಇದಕ್ಕೆ ಪರ್ಯಾಯವಾಗಿ ಮಹಿಳಾ ಸ್ವ-ಸಹಾಯ ಗುಂಪುಗಳು (SHGs) ನಡೆಸುವ ಇಂದಿರಮ್ಮ ಕ್ಯಾಂಟೀನ್ ಮಾದರಿಯನ್ನು ಅಳವಡಿಸಿಕೊಳ್ಳಲು ಸೂಚಿಸಿದೆ. ಈ ಮಾದರಿಯು ನೈರ್ಮಲ್ಯ, ಕೈಗೆಟುಕುವ ಬೆಲೆ ಮತ್ತು ಗುಣಮಟ್ಟದ ಆಹಾರವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಇದರಿಂದ ಮಹಿಳೆಯರ ಜೀವನೋಪಾಯಕ್ಕೂ ದಾರಿಯಾಗುತ್ತದೆ ಎಂಬುದು ಒಕ್ಕೂಟದ ಅಭಿಪ್ರಾಯವಾಗಿದೆ.

ಚಾಲಕರಿಗೂ ಉತ್ತಮ ಆಹಾರ ನೀಡಿ

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ವರ್ಕರ್ಸ್ ಯೂನಿಯನ್‌ನ ಸ್ಥಾಪಕ ಅಧ್ಯಕ್ಷ ಶೇಕ್ ಸಲಾವುದ್ದೀನ್ ಈ ಬಗ್ಗೆ ಮಾತನಾಡಿ, ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಚಾಲಕರು ಮತ್ತು ಬರುವ ಗ್ರಾಹಕರು ಸುರಕ್ಷಿತ, ಸ್ವಚ್ಛ ಮತ್ತು ಗೌರವಾನ್ವಿತ ಆಹಾರವನ್ನು ಪಡೆಯಲು ಅರ್ಹರಿದ್ದಾರೆ. ಅಧಿಕಾರಿಗಳು ಈ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ, ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು, ಎಂದು ಅವರು ಆಗ್ರಹಿಸಿದ್ದಾರೆ.
ಸದ್ಯಕ್ಕೆ ಜಿಎಂಆರ್ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಜನಸಾಮಾನ್ಯರು ಮಾತ್ರ ವಿಮಾನ ನಿಲ್ದಾಣದ ಕ್ಯಾಂಟೀನ್‌ನ ಈ ಅಚಾತುರ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ,(ಏಜನ್ಸೀಸ್​).