ಎಐಎಡಿಎಂಕೆ ಹಿರಿಯ ನಾಯಕ ಎಸ್​.ಸೆಮ್ಮಲೈ 
ದೇಶ

ಇಬ್ಬಾಗವಾದ ಎಐಎಡಿಎಂಕೆ: ಬೇಸತ್ತು ಪಕ್ಷಕ್ಕೆ ರಾಜೀನಾಮೆ ನೀಡಿದ ಹಿರಿಯ ನಾಯಕ ಎಸ್. ಸೆಮ್ಮಲೈ | AIADMK

ಚೆನ್ನೈ: ತಮಿಳುನಾಡು ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಇಬ್ಬಾಗವಾಗಿರುವ ಎಐಎಡಿಎಂಕೆಯ(AIADMK) ಬಣ ರಾಜಕೀಯ ಮತ್ತು ಮುಖ್ಯಸ್ಥರ ನಡೆಯಿಂದ ಬೇಸತ್ತು, ಪಕ್ಷದ ಹಿರಿಯ ನಾಯಕ ಮತ್ತು ಜಯಲಲಿತಾ ಅವಧಿಯಲ್ಲಿ ಸಚಿವರಾಗಿದ್ದ ಎಸ್​.ಸೆಮ್ಮಲೈ ಸೋಮವಾರ(ಮೇ 18) ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಮುಖ್ಯಸ್ಥ ಎಡಪ್ಪಾಡಿ ಪಳನಿಸ್ವಾಮಿಗೆ ಪತ್ರ ಬರೆದಿರುವ ಅವರು, ಪಕ್ಷದೊಳಗೆ ಹೆಚ್ಚುತ್ತಿರುವ ವಿಭಜನೆಗಳಿಂದ ತೀವ್ರ ನಿರಾಶೆ ಉಂಟಾಗಿದೆ. ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಪಕ್ಷದೊಳಗೆ ನಡೆಯುತ್ತಿರುವ ಘಟನೆಗಳು ಎಐಎಡಿಎಂಕೆ ಕಾರ್ಯಕರ್ತರಿಗೆ ತೀವ್ರ ನೋವನ್ನುಂಟು ಮಾಡಿವೆ ಎಂದು ಹೇಳಿದ್ದಾರೆ.
ಈ ಚಳುವಳಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡ ಲಕ್ಷಾಂತರ ಕಾರ್ಯಕರ್ತರು ಇದೇ ಭಾವನೆಯನ್ನು ಹಂಚಿಕೊಂಡಿದ್ದಾರೆ. ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದ ನಂತರ ಅವಕಾಶಗಳ ಕೊರತೆಯೂ ಉಂಟಾಗಿದೆ. ಆದರೆ ನಾನು ಏನನ್ನೂ ಅಪೇಕ್ಷೆ ಪಡೆದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.
ಇನ್ನೂ ಇಪಿಎಸ್​ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಸೇಲಂನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಎಸ್​.ಸೆಮ್ಮಲೈ, ಪಕ್ಷದ ಜವಾಬ್ದಾರಿ ಹೊತ್ತ ನಾಯಕರ ಅಹಂಕಾರ ಮತ್ತು ಸಂಘಟನೆಯೊಳಗೆ ಆರೋಗ್ಯಕರ ಚರ್ಚೆಗಳ ಅನುಪಸ್ಥಿತಿಯಿಂದಾಗಿ ಪಕ್ಷವು ನಿರಂತರವಾಗಿ ದುರ್ಬಲಗೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಪಕ್ಷದಲ್ಲಿ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಅಥವಾ ಆರೋಗ್ಯಕರ ಚರ್ಚೆ ಇಲ್ಲ. ಎಂಜಿಆರ್ ಮತ್ತು ಅಮ್ಮ ಈ ಪಕ್ಷವನ್ನು ಹೇಗೆ ನಿರ್ಮಿಸಿದರು ಎಂಬುದರ ಕುರಿತು ನಾಯಕರು ಯೋಚಿಸಬೇಕು. ಇಂದು ಭಾರವಾದ ಹೃದಯದಿಂದ ನಾನು ಪಕ್ಷವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಾಯಕರು ತಮ್ಮ ಅಹಂಕಾರವನ್ನು ಬಿಟ್ಟು ಪಕ್ಷವನ್ನು ಬಲಪಡಿಸಬೇಕು ಎಂದಿದ್ದಾರೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ ಹಿನ್ನೆಲೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ಪಕ್ಷದ ಶಾಸಕರಾದ ಎಸ್‌ಪಿ ವೇಲುಮಣಿ, ಸಿ ವೆ ಷಣ್ಮುಗಂ, ಸಿ ವಿಜಯಭಾಸ್ಕರ್ ಮತ್ತು ನಾಥಮ್ ಆರ್ ವಿಶ್ವನಾಥನ್ ಸೇರಿದಂತೆ ಬಂಡಾಯ ಶಾಸಕರನ್ನು ಪಕ್ಷದ ಸ್ಥಾನಗಳಿಂದ ವಜಾಗೊಳಿಸಿದ್ದಾರೆ (ಏಜೆನ್ಸೀಸ್).