- ವಿಜಯ್ ಅವರು ಕೇವಲ ನಟನಲ್ಲ, ಅವರು ಜನರ ನೋವುಗಳಿಗೆ ಸ್ಪಂದಿಸುವ ನಿಜವಾದ ಜನಸಾಮಾನ್ಯರ ಮುಖ್ಯಮಂತ್ರಿ
- ವಿಜಯ್ ಪರ ನಿಂತ ಎಐಎಡಿಎಂಕೆನ ಸಿ.ವಿ. ಷಣ್ಮುಗಂ ನೇತೃತ್ವದ ಬಣ
- ಟಿವಿಕೆ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ ಸಿ.ವಿ. ಷಣ್ಮುಗಂ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಎಐಎಡಿಎಂಕೆಯಲ್ಲಿ ಬಿಕ್ಕಟ್ಟು ಜೋರಾಗಿದೆ. ಎಐಎಡಿಎಂಕೆ ಹಿರಿಯ ನಾಯಕ ಸಿ.ವಿ. ಷಣ್ಮುಗಂ ನೇತೃತ್ವದ ಸುಮಾರು 30 ಶಾಸಕರ ಬಣವು ಮುಖ್ಯಮಂತ್ರಿ ವಿಜಯ್ ಅವರ ತಮಿಳಿಗ ವೆಟ್ರಿಗ ಕಳಗಂಗೆ ಸರ್ಕಾರಕ್ಕೆ ಬೆಂಬಲ ನೀಡಲು ನಿರ್ಧರಿಸಿದೆ ಎನ್ನಲಾಗುತ್ತಿದೆ. ಈ ಎಲ್ಲ ವಿದ್ಯಮಾನಗಳು ಪಕ್ಷ ಇಬ್ಭಾಗವಾಗಲಿದೆಯೇ ಎನ್ನುವ ಸಂಶಯವನ್ನು ಮೂಡಿಸಿದೆ.
ಷಣ್ಮುಗಂ ಏನಂದ್ರು?
ಈ ಬಗ್ಗೆ ಚೆನ್ನೈನಲ್ಲಿ ಮಾತನಾಡಿದ ಷಣ್ಮುಗಂ, ಚುನಾವಣಾ ಪಲಿತಾಂಶ ಬಹುತೇಕ ವಿಜಯ್ ಅವರ ಪರವಾಗಿಯೇ ಬಂದಿದೆ. ಅವರು ಜನಸಾಮಾನ್ಯರ ಮುಖ್ಯಮಂತ್ರಿಯಾಗಿದ್ದಾರೆ. ಜನರ ತೀರ್ಪನ್ನು ನಾವು ನಮ್ರತೆಯಿಂದ ಗೌರವಿಸಬೇಕು. ಜನಾದೇಶವನ್ನು ನಾವು ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ಅಂಶ. ಇದು ನಮ್ಮ ಕರ್ತವ್ಯ ಕೂಡ ಎಂದು ತಿಳಿಸಿದರು.
ನಾವು ಮುಖ್ಯಮಂತ್ರಿ ವಿಜಯ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಎಐಎಡಿಎಂಕೆ ಪಕ್ಷ ಮತ್ತು ಎಐಎಡಿಎಂಕೆ ಶಾಸಕಾಂಗ ಪಕ್ಷವಾಗಿ, ನಾವು ಮುಖ್ಯಮಂತ್ರಿ ನೇತೃತ್ವದ ಟಿವಿಕೆ ಸರ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲವನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಇಪಿಎಸ್ ವಿರುದ್ಧ ಅಸಮಾಧಾನ
ಟಿವಿಕೆ ನೇತೃತ್ವದ ಮೈತ್ರಿಕೂಟಕ್ಕೆ ಸವಾಲು ಹಾಕಲು ಡಿಎಂಕೆ-ಎಐಎಡಿಎಂಕೆ ಮೈತ್ರಿ ಸಾಧ್ಯತೆಯ ವರದಿಗಳಿಂದ 30 ಶಾಸಕರು ಅಸಮಾಧಾನಗೊಂಡಿದ್ದಾರೆ. ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಈ ಉದ್ದೇಶಿತ ಮೈತ್ರಿಯ ಸಿಎಂ ಆಗಲು ಬಯಸಿದ್ದರು. ಷಣ್ಮುಗಂ ಬೆಂಬಲಿತ 30 ಶಾಸಕರು ಟಿವಿಕೆಗೆ ಬೆಂಬಲ ನೀಡಿದ ನಂತರ, ಈಗ ಇಪಿಎಸ್ ಪರವಾಗಿ ಕೇವಲ 17 ಶಾಸಕರು ಮಾತ್ರ ಉಳಿದಿದ್ದಾರೆ.
ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಡಿಎಂಕೆ ಬೆಂಬಲದೊಂದಿಗೆ ತಾವು ಮುಖ್ಯಮಂತ್ರಿಯಾಗುವುದಾಗಿ ಪ್ರಸ್ತಾಪಿಸಿದ್ದರು. ಆದರೆ, ಬಹುಪಾಲು ಶಾಸಕರು ಈ ಪ್ರಸ್ತಾಪವನ್ನು ಒಪ್ಪಲಿಲ್ಲ. ಪರಿಣಾಮವಾಗಿ, ಎಐಎಡಿಎಂಕೆ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿಲ್ಲ. ನಾವು ಒಗ್ಗಟ್ಟಾಗಿರುತ್ತೇವೆ,ಎಂದು ಮೈಲಂ ಶಾಸಕ ಷಣ್ಮುಗಂ ಹೇಳಿದರು.
ಪಕ್ಷದ ಬಗ್ಗೆ ಕಾಳಜಿ ಇದೆ
ಎಐಎಡಿಎಂಕೆ ಶಾಸಕಾಂಗ ಪಕ್ಷವಾಗಿ ನಾವು ಡಿಎಂಕೆ ಬೆಂಬಲದೊಂದಿಗೆ ಸರ್ಕಾರ ರಚಿಸಬೇಕು ಎಂದು ಕೆಲವು ಜನರು ಪ್ರಸ್ತಾಪಿಸಿದ್ದರು. ಈ ಪ್ರಸ್ತಾಪವು ನಮ್ಮ ಪಕ್ಷದ ಮೂಲ ತತ್ವಗಳಿಗೆ ವಿರುದ್ಧವಾಗಿದೆ. ಏಕೆಂದರೆ ತಮಿಳುನಾಡಿನಲ್ಲಿ ನಾವು 'ದುಷ್ಟ ಶಕ್ತಿ' ಎಂದು ಪರಿಗಣಿಸುವ ಡಿಎಂಕೆಯನ್ನು ಕಿತ್ತೊಗೆಯಲು ಎಐಎಡಿಎಂಕೆ ಸ್ಥಾಪನೆಯಾಯಿತು. ನಮಗೆ ಎಐಎಡಿಎಂಕೆಯನ್ನು ಒಡೆಯುವ ಉದ್ದೇಶವಿಲ್ಲ, ನಮಗೆ ಪಕ್ಷದ ಬಗ್ಗೆ ಕಾಳಜಿಯಿದೆ, ಎಂದು ಅವರು ಹೇಳಿದರು.
ಮೈತ್ರಿ ಮಾಡಿಕೊಳ್ಳಲ್ಲ
ಪಕ್ಷದ ಮೂಲ ತತ್ವಗಳಿಗೆ ವಿರುದ್ಧವಾದ ಕೆಲವು ಪ್ರಸ್ತಾಪಗಳನ್ನು ಮಾಡಲಾಗುತ್ತಿದೆ. ನಮ್ಮ ಶಾಸಕಾಂಗ ಪಕ್ಷದ ಸದಸ್ಯರು ಮತ್ತು ಪಕ್ಷದ ಕಾರ್ಯಕರ್ತರು ಡಿಎಂಕೆ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ವಿರೋಧಿಸುತ್ತಾರೆ. ಆದ್ದರಿಂದ, ನಮ್ಮ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಹ ಮೈತ್ರಿಯು ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂಬ ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ನಾವು ಡಿಎಂಕೆ ಜೊತೆ ಸೇರಿಕೊಂಡರೆ ಭವಿಷ್ಯದಲ್ಲಿ ಎಐಎಡಿಎಂಕೆ ಸಂಪೂರ್ಣವಾಗಿ ಅಳಿಸಿಹೋಗುತ್ತದೆ. ಶಾಸಕಾಂಗ ಪಕ್ಷವಾಗಿ ನಾವು ಈ ಪ್ರಸ್ತಾಪದ ವಿರುದ್ಧ ನಿರ್ಣಯ ಅಂಗೀಕರಿಸಿದ್ದೇವೆ," ಎಂದು ಅವರು ತಿಳಿಸಿದರು.
"ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ನಾವು ಸೋಲನ್ನು ಅನುಭವಿಸಿದ್ದೇವೆ. ಕೇವಲ ಈ ಚುನಾವಣೆ ಮಾತ್ರವಲ್ಲದೆ, ಹಿಂದಿನ ಚುನಾವಣೆಯಲ್ಲೂ ನಾವು ಸೋತಿದ್ದೇವೆ. ಈ ಚುನಾವಣಾ ಸೋಲುಗಳ ಹಿಂದಿನ ಕಾರಣಗಳನ್ನು ಚರ್ಚಿಸಲು ಮತ್ತು ಪಕ್ಷದ ಹಿತದೃಷ್ಟಿಯಿಂದ ಮುಂದಿನ ಕ್ರಮ ತೆಗೆದುಕೊಳ್ಳಲು ಜನರಲ್ ಕೌನ್ಸಿಲ್ ಸಭೆಯನ್ನು ಕರೆಯುವಂತೆ ನಾವು ನಮ್ಮ ಪ್ರಧಾನ ಕಾರ್ಯದರ್ಶಿಯವರನ್ನು ಕೇಳಿದ್ದೇವೆ," ಎಂದು ಅವರು ಮಾತು ಮುಗಿಸಿದರು, (ಏಜೆನ್ಸೀಸ್).