ಈ ಕೊಲೆ ಮಾಡಿದ್ದು ನಾನಲ್ಲ ಎಐ 
ದೇಶ

ಈ ಕೊಲೆ ಮಾಡಿದ್ದು ನಾನಲ್ಲ ಎಐ... ಹೆತ್ತವರನ್ನು ಬರ್ಬರವಾಗಿ ಕೊಂದ ಪಾಪಿ ಪುತ್ರನ ಮಾತು ಕೇಳಿದ್ರೆ ಎಂಥವರ ರಕ್ತ ಕುದಿಯುತ್ತೆ!

ಪ್ರಮುಖ ಮುಖ್ಯಾಂಶಗಳು

  • ಜನ್ಮಕೊಟ್ಟ ತಂದೆ-ತಾಯಿಯನ್ನೇ ಕೊಂದ ಪಾಪಿ ಪುತ್ರ
  • ಈ ಕೊಲೆಗೂ ಯಾವ ಸಂಬಂಧವು ಇಲ್ಲ ಎನ್ನುವಂತೆ ವರ್ತನೆ
  • ಖಾಕಿ ಪಡೆಯನ್ನು ಭಾರಿ ಗೊಂದಲಕ್ಕೆ ಸಿಲುಕಿಸಿದ ಆತನ ವಿಚಿತ್ರ ಹೇಳಿಕೆಗಳು
ಇಡುಕ್ಕಿ: ನೆಡುಂಕಂಡಂನ ಎಜುಕುಂವಾಯಲ್‌ನಲ್ಲಿ ಹೆತ್ತವರನ್ನೇ ಬರ್ಬರವಾಗಿ ಕೊಲೆಗೈದು, ತನಗೂ ಈ ಕೊಲೆಗೂ ಯಾವ ಸಂಬಂಧವು ಇಲ್ಲ ಎನ್ನುವಂತೆ ರಕ್ತದಿಂದ ತುಂಬಿದ್ದ ಮನೆಯೊಳಗೆ ಆರಾಮದಾಯಕವಾಗಿ ಕುಳಿತಿದ್ದ ಆರೋಪಿ ಪುತ್ರ ಅಜೀಶ್‌ನನ್ನು ಸದ್ಯ ಇಡುಕ್ಕಿ ಪೊಲೀಸರು ಬಂಧಿಸಿದ್ದು, ಸ್ಥಳ ಮಹಜರು ಮಾಡುವ ವೇಳೆ ಆತ ಕೊಟ್ಟಿರುವ ಹೇಳಿಕೆಗಳು ಒಂದು ನಿಮಿಷ ಖಾಕಿ ಪಡೆಯನ್ನು ಭಾರಿ ಗೊಂದಲಕ್ಕೆ ಸಿಕ್ಕಿಸಿದೆ.
ಸಾಕ್ಷ್ಯ ಸಂಗ್ರಹಿಸಲು ತನ್ನ ಪಾಲಕರನ್ನು ಕೊಂದ ಸ್ಥಳ ಅಂದರೆ ಮನೆಗೆ ಕರೆತಂದಾಗ ಆರೋಪಿ ದಿಢೀರ್​ ಉಲ್ಟಾ ಹೊಡೆದಿದ್ದು, ನನ್ನ ತಾಯಿ ಎಲ್ಲಿ ಎಂದು ಪೊಲೀಸರನ್ನೇ ಕೇಳಿದ್ದಾನೆ. ಇದೆಲ್ಲಾ ಸುಳ್ಳು, ಮನೆ ಹೀಗಿರಲಿಲ್ಲ ಎಂದು ಕೊಲೆಯ ಬಳಿಕ ಅಜೀಶ್ ವಿಚಿತ್ರವಾಗಿ ವರ್ತಿಸಿರುವುದನ್ನು ಖಾಕಿ ಪಡೆ ನೋಟ್​ ಮಾಡಿಕೊಂಡಿದೆ. ಇದಲ್ಲದೇ, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದಾಗ, ಅಜೀಶ್​ ಪೋಷಕರು ರಕ್ತದ ಮಡುವಿನಲ್ಲಿ ಬಿದ್ದಿದ್ದರೇ, ಇತ್ತ ಈತ ಮಾತ್ರ ಮನೆಯಲ್ಲಿ ಬೈಬಲ್ ಓದುತ್ತಾ, ಕೈಯಲ್ಲಿ ಮಣಿಗಳನ್ನು ಹಿಡಿದುಕೊಂಡಿದ್ದನ್ನು ಗಮನಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಸ್ಥಳೀಯರಿಗೆ, 'ನಮ್ಮ ತಂದೆ ತಾಯಿಯನ್ನು ದೇವರ ಬಳಿಗೆ ಕಳುಹಿಸಿದ್ದೇನೆ. ಈ ಕೊಲೆಯನ್ನು ನಾನಲ್ಲ! ಎಐ ಮಾಡಿರುವುದು. ಎಲ್ಲವೂ ಪ್ಲ್ಯಾನ್​ ಆಗಿತ್ತು, ಅದೆಲ್ಲವೂ ಭ್ರಮೆ. ನಾನು ನಿರಪರಾಧಿ, ಇದ್ಯಾವುದು ನನ್ನಿಂದ ಆಗಿರುವುದಲ್ಲ' ಎಂದು ವಿಚಿತ್ರ ಹೇಳಿಕೆಗಳನ್ನು ನೀಡಿದ್ದಾನೆ.ಪ್ರಸ್ತುತ, ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡಿರುವ ಖಾಕಿ ಪಡೆ, ಆತನನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದೆ.

ಅಷ್ಟಕ್ಕೂ ಆಗಿದ್ದೇನು?

ಶುಕ್ರವಾರ (ಆ.14) ರಾತ್ರಿ 9:30ರ ಸುಮಾರಿಗೆ ಪೋಷಕರಾದ ಆಂಟೋನಿ ಮತ್ತು ವಲ್ಸಮ್ಮ ಅವರನ್ನು ಬರ್ಬರವಾಗಿ ಹತ್ಯೆಗೈದ ಈತ, ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಂಬಂಧಿಕರೊಬ್ಬರಿಗೆ ಕಳುಹಿಸಿದ್ದಾನೆ. ದೃಶ್ಯಾವಳಿಗಳನ್ನು ನೋಡಿದ ಸಂಬಂಧಿಕರು, ತಕ್ಷಣವೇ ಚರ್ಚ್ ಧರ್ಮಾಧಿಕಾರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ವಿಕಾರಿ, ಪಂಚಾಯಿತಿ ಸದಸ್ಯರು ಹಾಗೂ ಪೊಲೀಸರು ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಮಾತೃಭೂಮಿ ವರದಿ ಮಾಡಿದೆ.
ಮೊದಲೇ ಮಾದಕ ವ್ಯಸನಿಯಾಗಿದ್ದ ಅಜೀಶ್, ಮನೆಯಲ್ಲಿ ಪೋಷಕರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಇದೇ ರೀತಿ, ಯಾವುದೇ ವಿಚಾರಕ್ಕೆ ಜಗಳವಾಡಿ, ಹೆತ್ತವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ಕೊಂದಿದ್ದಾನೆ ಎನ್ನಲಾಗಿದೆ. ವ್ಯಸನಮುಕ್ತ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ, ಚಿಕಿತ್ಸೆ ಪಡೆದು ಎರಡು ವಾರಗಳ ಹಿಂದೆ ಮನೆಗೆ ವಾಪಾಸ್​ ಆಗಿದ್ದ ಎಂದು ಖಾಕಿ ಮೂಲಗಳು ತಿಳಿಸಿವೆ,(ಏಜೆನ್ಸೀಸ್).