Shashi Tharoor | ಕಾಂಗ್ರೆಸ್ ಸಂಸದ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್ ಶನಿವಾರ ಮುಂಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಮೂವ್ಮೆಂಟ್ ಟು ಯುನೈಟ್ ನೇಸನ್ಸ್ 15ನೇ ವರ್ಷಾಚರಣೆ ಸಮಾರಂಭದಲ್ಲಿ ಮಾತನಾಡುತ್ತಾ, ರಾಹುಲ್ ಗಾಂಧಿ ಅವರ ಛಾತ್ರೋನ್ ಕೀ ಗೂಂಜ್ ಕಾರ್ಯಕ್ರಮಕ್ಕೆ ಯುವಜನತೆಯಿಂದ ನಿರೀಕ್ಷಿತ ಬೆಂಬಲ ಸಿಗದಿರುವುದನ್ನು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಇತ್ತೀಚೆಗೆ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳಿಗೆ ಸಿಕ್ಕಷ್ಟು ಜನಬೆಂಬಲ ಕಾಂಗ್ರೆಸ್ ಪ್ರಯತ್ನಕ್ಕೆ ಏಕೆ ಸಿಗಲಿಲ್ಲ ಎಂಬ ಬಗ್ಗೆ ಪಕ್ಷವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ತರೂರ್ ಸಲಹೆ ನೀಡಿದ್ದಾರೆ.
ಸಿಜೆಪಿ ಮತ್ತು ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಎತ್ತಿದ ಪೇಪರ್ ಲೀಕ್ ಮುಂತಾದ ವಿಷಯಗಳನ್ನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಅವರು ಛಾತ್ರೋನ್ ಕೀ ಗೂಂಜ್ ಅಭಿಯಾನದ ಮೂಲಕ ಈಗಾಗಲೇ ಪ್ರಸ್ತಾಪಿಸಿದ್ದರು ಎಂದು ತರೂರ್ ನೆನಪಿಸಿಕೊಂಡರು. ನಾವು ಎತ್ತಿದ ವಿಷಯಗಳೇ ಪ್ರತಿಭಟನೆಯಲ್ಲಿ ಮುನ್ನೆಲೆಗೆ ಬಂದರೂ, ನಮ್ಮ ಅಭಿಯಾನಕ್ಕೆ ಸಿಗದಷ್ಟು ಅಭೂತಪೂರ್ವ ಬೆಂಬಲ ಆ ಪ್ರತಿಭಟನೆಗೆ ಸಿಕ್ಕಿದೆ. ಹೀಗಾಗಿ ನಾವು ಎಲ್ಲಿ ಎಡವಿದೆವು..? ಯುವಜನರ ಧ್ವನಿಯನ್ನು ಆಲಿಸಲು ನಾವು ವಿಫಲವಾದೆವೇ..? ಜನಸ್ಪಂದನೆಯನ್ನು ಗ್ರಹಿಸುವಲ್ಲಿ ನಮ್ಮ ಪ್ರಯತ್ನ ಕೊರತೆಯಾಯಿತೇ ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಿದೆ ಎಂದು ಹೇಳಿದರು. ಶಿಕ್ಷಣ, ಹವಾಮಾನ ಬದಲಾವಣೆ ಮತ್ತು ಪ್ರಜಾಪ್ರಭುತ್ವದ ಲೋಪದೋಷಗಳ ಬಗ್ಗೆ ಮಾತನಾಡಿದರೂ, ಅದು ಯುವಜನರನ್ನು ತಲುಪುವಲ್ಲಿ ಎಲ್ಲೋ ಒಂದು ಕಡೆ ವಿಫಲವಾಗಿದೆ ಎಂದರು.
ಸಂಪ್ರದಾಯವಾದಿ ರಾಜಕೀಯ ವ್ಯವಸ್ಥೆಗೆ ಸವಾಲು
ಈ ಸಮಸ್ಯೆಯು ಕೇವಲ ಕಾಂಗ್ರೆಸ್‌ಗೆ ಮಾತ್ರ ಸೀಮಿತವಾಗಿಲ್ಲ, ದೇಶದ ಸ್ಥಾಪಿತ ರಾಜಕೀಯ ಪಕ್ಷಗಳಿಗೆ ಯುವಜನರಿಗೆ ಸೂಕ್ತ ವೇದಿಕೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರತಿಪಾದಿಸಿದರು. ಜಂತರ್ ಮಂತರ್‌ನಲ್ಲಿ ಹೋರಾಟ ನಡೆಸಿದಂತಹ ಯುವಜನರಿಗೆ ನಮ್ಮ ಪಕ್ಷಗಳಿಗೆ ಬರಲು ನಾವು ಸೂಕ್ತ ದಾರಿ ಮಾಡಿಕೊಡಲಿಲ್ಲ. ಸಾಂಪ್ರದಾಯಿಕ ಶ್ರೇಣೀಕೃತ ವ್ಯವಸ್ಥೆ, ಕುಟುಂಬ ರಾಜಕೀಯ ಮತ್ತು ಪ್ರಭಾವಿ ಜಾಲಗಳ ನಡುವೆ ಯುವಕರು ಹೇಗೆ ಪ್ರವೇಶ ಪಡೆಯಲು ಸಾಧ್ಯ..? ಎಂದು ಪ್ರಶ್ನಿಸಿದರು. ಯುವಕರನ್ನು ಕೇವಲ ರ‍್ಯಾಲಿಗಳಲ್ಲಿ ನಾಯಕರ ಹಿಂದೆ ನಿಲ್ಲುವ ಕಾರ್ಯಕರ್ತರನ್ನಾಗಿ ಮಾತ್ರ ನೋಡಲಾಗುತ್ತಿದೆಯೇ ಹೊರತು, ರಾಜಕೀಯವನ್ನು ರೂಪಿಸುವ ಅವಕಾಶ ನೀಡಲಾಗುತ್ತಿಲ್ಲವೇ ಎಂಬುದರ ಬಗ್ಗೆ ಪರ್ಯಾಯವಾಗಿ ಯೋಚಿಸಬೇಕಿದೆ ಎಂದರು.
ಪೋಲೀಸ್ ಕ್ರಮ ಮತ್ತು ತರೂರ್ ಭೇಟಿ!..
ಜಂತರ್ ಮಂತರ್‌ನಲ್ಲಿ ಪ್ರಮುಖವಾಗಿ ಜುಲೈ 20 ರಂದು ಸಂಸತ್ತಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಕ್ರಮವು ಪರಿಸ್ಥಿತಿಯನ್ನು ಮತ್ತಷ್ಟು ಭುಗಿಲೇಳಿಸಿತು ಮತ್ತು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಯಿತು ಎಂದು ತರೂರ್ ಹೇಳಿದರು. ತಾವು ಕೂಡ ಘಟನೆಯ ನಂತರ ಜಂತರ್ ಮಂತರ್‌ಗೆ ಭೇಟಿ ನೀಡಿದ್ದಾಗಿ ತಿಳಿಸಿದ ಅವರು, ನಾನು ವೇದಿಕೆ ಏರಿ ಭಾಷಣ ಮಾಡಲಿಲ್ಲ, ಬದಲಿಗೆ ಯುವ ಪ್ರತಿಭಟನಾಕಾರರ ಅನುಭವಗಳು ಮತ್ತು ಕಥೆಗಳನ್ನು ಆಲಿಸಲು ಅವರೊಂದಿಗೆ ಸಮಯ ಕಳೆದೆ ಎಂದು ಹೇಳಿದರು.
ಪಕ್ಷಗಳು ಯುವಜನರ ಧ್ವನಿಗೆ ಸ್ಪಂದಿಸದಿದ್ದರೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ ತರೂರ್, ಪ್ರಸ್ತುತ ರಾಜಕೀಯ ಪಕ್ಷಗಳು ತಕ್ಷಣವೇ ಜಾಗೃತರಾಗಬೇಕಿದೆ ಎಂದರು(ಏಜೆನ್ಸೀಸ್).