ಚಂಡೀಗಢ: ಎರಡು ದಿನಗಳ ಹಿಂದೆ ಪಂಜಾಬ್ನ ಆಪ್ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಮನೆ & ಕಚೇರಿ ಮೇಲೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಇಂದು(ಏ. 16) ಮತ್ತೊಬ್ಬ ಪಂಜಾಬ್ ಸಚಿವ ಸಂಜೀವ್ ಅರೋರಾ ಮನೆ & ಕಚೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(FEMA) ನಿಬಂಧನೆಗಳ ಅಡಿಯಲ್ಲಿ ಗುರುಗ್ರಾಮ್, ಚಂಡೀಗಢ, ಲುಧಿಯಾನ ಮತ್ತು ಜಲಂಧರ್‌ನಲ್ಲಿ ಶೋಧ ನಡೆಸಿದ್ದು, ಸಂಜೀವ್ ಅರೋರಾ, ಅವರ ಮಗಳು ಕೇಟ್ಕಿ ಅರೋರಾ, ಹಾಗೂ ವ್ಯವಹಾರ ಪಾಲುದಾರರಾದ ಹೇಮಂತ್ ಸೂದ್ ಮತ್ತು ಚಂದ್ರಶೇಖರ್ ಅಗರ್ವಾಲ್ ಅವರ ನಿವಾಸ, ಕಚೇರಿಗಳಳು ಸೇರಿ ಒಟ್ಟು 13 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.
ಹ್ಯಾಂಪ್ಟನ್ ಸ್ಕೈ ರಿಯಾಲ್ಟಿ ಲಿಮಿಟೆಡ್ ಕಂಪನಿ ಪಂಜಾಬ್ನ ಅತಿದೊಡ್ಡ ರಿಯಲ್ ಎಸ್ಟೇಟ್ ಕಂಪನಿಯಾಗಿದ್ದು, ಸಂಜೀವ್ ಅರೋರಾ ಅದರ ಸಂಸ್ಥಾಪಕರಾಗಿದ್ದಾರೆ. ಅವರ ಪುತ್ರಿ ಪ್ರಸ್ತುತ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕಂಪನಿಯೂ ಅಕ್ರಮ ಭೂ ಕಬಳಿಕೆ, ಷೇರು ಬೆಲೆಗಳ ಕುಶಲತೆ, ಮಾರಾಟವನ್ನು ಹೆಚ್ಚಿಸುವುದು, ವ್ಯಾಪಾರ ಮತ್ತು ಯುಎಇಯಿಂದ ಹಣವನ್ನು ವಂಚಿಸಿದ ಆರೋಪಗಳನ್ನು ಎದುರಿಸುತ್ತಿದೆ. ಬೆಟ್ಟಿಂಗ್ ಮೂಲಕ ಬಂದ ಹಣವನ್ನು ಮತ್ತು ಲೆಕ್ಕವಿಲ್ಲದ ಹಣವನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಸಂಜೀವ್ ಅರೋರಾ, ನನ್ನ ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ಮಾಡಿ ಶೋಧ ನಡೆಸಿದೆ. ಜವಾಬ್ದಾರಿಯುತ ನಾಗರಿಕನಾಗಿ, ನಾನು ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ಮತ್ತು ಸತ್ಯವು ಮೇಲುಗೈ ಸಾಧಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್).