ತ್ವಿಶಾ ಶರ್ಮಾ ಪತಿ ಸಮರ್ಥ್ ಸಿಂಗ್ ಅರೆಸ್ಟ್
- ನಟಿ ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣ
- ತಲೆ ಮರೆಸಿಕೊಂಡಿದ್ದ ಪರಿ ಸಮರ್ಥ್ ಸಿಂಗ್ ಅರೆಸ್ಟ್
- ದಿನಕ್ಕೊಂದು ತಿರುವು ಪಡೆಯುತ್ತಿರುವ ನಟಿ ಸಾವಿನ ಪ್ರಕರಣ
ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಇಡೀ ದೇಶವೇ ಬೆಚ್ಚಿಬೀಳುವಂತಹ ಹೈ-ಪ್ರೊಫೈಲ್ ನಟಿ ತ್ವಿಶಾ ಶರ್ಮಾ (Tvisha Sharma) ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಳೆದ 10 ದಿನಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿ ಓಡಾಡುತ್ತಿದ್ದ ವಕೀಲ ಸಮರ್ಥ್ ಸಿಂಗ್ ಕೊನೆಗೂ ಲಾಕ್ ಆಗಿದ್ದಾನೆ. ಪತ್ನಿ ತ್ವಿಶಾ ಶರ್ಮಾ ಸಾವಿನ ಕೇಸ್‌ನಲ್ಲಿ ಆರೋಪಿಯಾಗಿರುವ ಈತ, ಜಬಲ್‌ಪುರ ಕೋರ್ಟ್‌ಗೆ ಶರಣಾಗಲು ಬಂದಾಗ ಪೊಲೀಸರು ಸಿನಿಮೀಯ ಶೈಲಿಯಲ್ಲಿ ವಶಕ್ಕೆ ಪಡೆದಿದ್ದಾರೆ.
ಮುಖ ಮುಚ್ಚಿಕೊಂಡು ಬಂದಿದ್ದ ವಕೀಲ!
ತನ್ನ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಸಮರ್ಥ್ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ತನಗೆ ಸಿಗಬೇಕಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳ್ಳುತ್ತಿದ್ದಂತೆ ಸೀದಾ ಜಬಲ್‌ಪುರ ನ್ಯಾಯಾಲಯಕ್ಕೆ ಓಡಿ ಬಂದಿದ್ದ.
ಪೊಲೀಸರಿಗೆ ಗುರುತು ಸಿಗಬಾರದು ಎಂದು ಮುಖಕ್ಕೆ ಮಾಸ್ಕ್, ತಲೆಗೆ ಕ್ಯಾಪ್, ಕಣ್ಣಿಗೆ ಸನ್‌ಗ್ಲಾಸ್ ಹಾಕಿ, ಹೆಗಲ ಮೇಲೆ ಬಟ್ಟೆ ಹೊದ್ದು ಸಂಪೂರ್ಣ ಮುಖ ಮುಚ್ಚಿಕೊಂಡು ಕೋರ್ಟ್ ಒಳಗೆ ನುಗ್ಗಿದ್ದ. ಆದರೆ, ಭೋಪಾಲ್ ಕೋರ್ಟ್‌ಗೆ ಹಾಜರಾಗುವಂತೆ ಜಬಲ್‌ಪುರ ನ್ಯಾಯಾಲಯ ಸೂಚಿಸುತ್ತಿದ್ದಂತೆ, ಅಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಪೊಲೀಸ್ ಟೀಮ್ ಈತನನ್ನು ಅರೆಸ್ಟ್ ಮಾಡಿದೆ.
ಆತ್ಮಹತ್ಯೆ ನಾಟಕದ ಹಿಂದಿತ್ತಾ ಭೀಕರ ಕಥೆ?
ಮೇ 12 ರಂದು ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಮನೆಯಲ್ಲಿ 33 ವರ್ಷದ ತ್ವಿಶಾ ಶರ್ಮಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ, ದಿನ ಕಳೆಯುತ್ತಿದ್ದಂತೆ ನಿಗೂಢ ಸತ್ಯಗಳು ಹೊರಬರಲಾರಂಭಿಸಿದವು.
ತ್ವಿಶಾ ಅವರ ಕುಟುಂಬಸ್ಥರು ನೇರವಾಗಿ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಪತಿ ಸಮರ್ಥ್ ಸಿಂಗ್ ಮಾತ್ರವಲ್ಲದೆ, ಆತನ ತಾಯಿ ಅಂದರೆ ನಿವೃತ್ತ ನ್ಯಾಯಾಧೀಶರಾಗಿರುವ ಗಿರಿಬಾಲಾ ಸಿಂಗ್ ವಿರುದ್ಧವೂ ಗಂಭೀರ ಆರೋಪಗಳು ಕೇಳಿಬಂದಿವೆ. ತ್ವಿಶಾ ಸಾವಿಗೂ ಮುನ್ನ ತನ್ನ ಫ್ರೆಂಡ್ಸ್ ಮತ್ತು ಫ್ಯಾಮಿಲಿಗೆ ವಾಟ್ಸಾಪ್ ಮೆಸೇಜ್ ಕಳುಹಿಸಿದ್ದು, ತಾನು ನರಕದಂತಹ ಸಂಸಾರದಲ್ಲಿ ಸಿಲುಕಿಕೊಂಡಿರುವುದಾಗಿ ನೋವು ತೋಡಿಕೊಂಡಿದ್ದರು.
ಅಷ್ಟು ಕ್ರೂರವಾಗಿರಲು ಹೇಗೆ ಸಾಧ್ಯ? ಸಹೋದರನ ಕಣ್ಣೀರು
ಈ ಇಡೀ ಘಟನೆಯ ಬಗ್ಗೆ ಮಾತನಾಡಿದ ತ್ವಿಶಾ ಸಹೋದರ, ಮೇಜರ್ ಹರ್ಷಿತ್ ಶರ್ಮಾ,ಒಬ್ಬ ಮಹಿಳೆ ಮಗುವನ್ನು ಹೆರಲು ಆಸೆ ಪಟ್ಟರೆ, ಆಕೆಯ ಚಾರಿತ್ರ್ಯವನ್ನು ಪ್ರಶ್ನಿಸುವಷ್ಟು ಕ್ರೂರ ಜಗತ್ತು ಇದಾ? ಆ ಮನೆಯಲ್ಲಿ ವಾಸಿಸುತ್ತಿದ್ದವರು ಮಗುವಿನ ಕಾನೂನುಬದ್ಧತೆ ಮತ್ತು ನನ್ನ ತಂಗಿಯ ಕ್ಯಾರೆಕ್ಟರ್ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಿದ್ದರು. ಅಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ನನ್ನ ತಂಗಿ ದಿನ ದೂಡಿದ್ದಾಳೆ. ನಿವೃತ್ತ ಜಡ್ಜ್ ಆಗಿರುವ ಅತ್ತೆ ಗಿರಿಬಾಲಾ ಸಿಂಗ್ ತನ್ನ ಪ್ರಭಾವ ಬಳಸಿ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ತನಿಖೆಯಲ್ಲಿ ಹೈಕೋರ್ಟ್ ಎಂಟ್ರಿ!
ಮೊದಲ ಶವಪರೀಕ್ಷೆಯ ವರದಿಯಲ್ಲಿ ಭಾರಿ ಲೋಪದೋಷಗಳು ಕಂಡುಬಂದಿದ್ದವು. ಪೊಲೀಸರು ಬರೆದ ವರದಿಗೂ, ಶವಪರೀಕ್ಷೆಯ ರಿಪೋರ್ಟ್‌ಗೂ ತ್ವಿಶಾ ಅವರ ಎತ್ತರದಲ್ಲೇ ವ್ಯತ್ಯಾಸವಿತ್ತು. ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಮರೆಮಾಚಲಾಗಿತ್ತು.
ಇದರಿಂದ ಆಕ್ರೋಶಗೊಂಡ ಕುಟುಂಬ ಶವ ಸಂಸ್ಕಾರಕ್ಕೆ ನಿರಾಕರಿಸಿ ಸುದೀರ್ಘ ಹೋರಾಟ ನಡೆಸಿತ್ತು. ಸದ್ಯ ಮಧ್ಯಪ್ರದೇಶ ಹೈಕೋರ್ಟ್ ದೆಹಲಿಯ ಪ್ರತಿಷ್ಠಿತ 'ಏಮ್ಸ್' (AIIMS) ವೈದ್ಯರ ತಂಡದಿಂದ ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಆದೇಶಿಸಿದೆ. ಜೊತೆಗೆ ಸಾಕ್ಷಿ ನಾಶಪಡಿಸಲು ಯತ್ನಿಸುತ್ತಿರುವ ನಿವೃತ್ತ ಜಡ್ಜ್ ಗಿರಿಬಾಲಾ ಸಿಂಗ್ ಅವರ ಜಾಮೀನು ರದ್ದುಗೊಳಿಸಲು ಪೊಲೀಸರು ಕೋರ್ಟ್ ಮೆಟ್ಟಿಲೇರಿದ್ದಾರೆ, (ಏಜನ್ಸೀಸ್).