ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಕಡ್ಡಿ-ದೊಣ್ಣೆಗಳಿಂದ ಭೀಕರ ಹಲ್ಲೆ: ಆರೋಗ್ಯ ಸ್ಥಿತಿ ಗಂಭೀರ! Actor Pankaj Tripathi
- ಬಾಲಿವುಡ್ ನಟ ಪಂಕಜ್ ತ್ರಿಪಾಠಿ ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ
- ಹಲ್ಲೆಗೊಳಗಾದ ಸಹೋದರ ವಿಜೇಂದ್ರನಾಥ್ ತಿವಾರಿ ಪಟನಾ ಆಸ್ಪತ್ರೆಗೆ ದಾಖಲು
- ತವರು ಗ್ರಾಮದಲ್ಲಿ ಜಮೀನು ಗಲಾಟೆ ಮೌನಕ್ಕೆ ಶರಣಾದ ಸ್ಟಾರ್ ನಟನ ಕುಟುಂಬ
ಪಟನಾ: ಬಾಲಿವುಡ್ ಖ್ಯಾತ ನಟ ಪಂಕಜ್ ತ್ರಿಪಾಠಿ ( Actor Pankaj Tripathi ) ಅವರ ಸಹೋದರ ವಿಜೇಂದ್ರನಾಥ್ ತಿವಾರಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದಾಗಿ ಬಿಹಾರ ಪೊಲೀಸರು ತಿಳಿಸಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಈ ಹಲ್ಲೆ ನಡೆದಿದೆ ಎಂದು ತಿಳಿದುಬಂದಿದೆ.
ಕಡ್ಡಿ ಮತ್ತು ದೊಣ್ಣೆಗಳಿಂದ ಭೀಕರ ದಾಳಿ ನಡೆಸಲಾಗಿದ್ದು, ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ವಿಜೇಂದ್ರನಾಥ್ ತಿವಾರಿ ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ.
ಗೋಪಾಲಗಂಜ್ ಜಿಲ್ಲೆಯ ಬರೌಲಿ ಪಟ್ಟಣದಲ್ಲಿರುವ ನಟ ಪಂಕಜ್ ತ್ರಿಪಾಠಿ ಅವರ ಪೂರ್ವಜರ ಗ್ರಾಮವಾದ ಬೆಲ್‌ಸಂದ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ತಡರಾತ್ರಿ ತೀವ್ರ ಗಾಯಗೊಂಡಿದ್ದ ವಿಜೇಂದ್ರನಾಥ್ ತಿವಾರಿ ಅವರನ್ನು ತಕ್ಷಣವೇ ಗೋಪಾಲಗಂಜ್ ಮಾಡೆಲ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಿಹಾರ ರಾಜಧಾನಿ ಪಟನಾದ ಪ್ರಮುಖ ಆಸ್ಪತ್ರೆಗೆ ದಾಖಲಿಸಲು ವೈದ್ಯರು ಸೂಚಿಸಿದ್ದಾರೆ.
ಇತ್ತ ಘಟನೆ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪಂಕಜ್ ತ್ರಿಪಾಠಿ ಅವರ ಕುಟುಂಬಸ್ಥರು ಈ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಲು ಸದ್ಯಕ್ಕೆ ನಿರಾಕರಿಸಿದ್ದು, ಮೌನಕ್ಕೆ ಶರಣಾಗಿದ್ದಾರೆ.
ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ವಿನಯ್ ತಿವಾರಿ ಅವರು ಮಾಹಿತಿ ನೀಡಿ, ಬಂಧಿತ ಆರೋಪಿಯನ್ನು ಗುರುತಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಗಾಯಾಳುವಿನ ಕುಟುಂಬ ಸದಸ್ಯರು ಈವರೆಗೆ ಪೊಲೀಸರಿಗೆ ಯಾವುದೇ ಲಿಖಿತ ದೂರನ್ನು ನೀಡಿಲ್ಲ ಎಂದು ಸ್ಪಷ್ಟಪಡಿಸಿರುವ ಅಧಿಕಾರಿಗಳು, ಅಧಿಕೃತವಾಗಿ ದೂರು ದಾಖಲಾದ ತಕ್ಷಣವೇ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ್ದಾರೆ, (ಏಜೆನ್ಸೀಸ್).