ಪಾಟ್ನಾ: ಬಾಲಿವುಡ್ ನಟ ಇಮ್ರಾನ್ ಖಾನ್ ಭಾರತೀಯ ಪ್ರಜೆಯಲ್ಲ, ಅವರು ಎಸ್ಐಆರ್ ವಿರುದ್ಧದ ಪ್ರತಿಭಟನೆಗಳಿಂದ ದೂರವಿರಬೇಕಿತ್ತು ಎಂದು ಭಾನುವಾರ(ಅ. 18) ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಈ ನಟ ಮತ್ತು ಅವರ ಕೆಲಸ ಇಷ್ಟ. ಆದರೆ, ದೀರ್ಘಕಾಲ ಭಾರತದಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಅವರು ಭಾರತೀಯ ಪ್ರಜೆಯಾಗುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕಿತ್ತು. ಇಲ್ಲಿನ ನಾಗರಿಕರು ಪ್ರತಿಭಟನೆಗಳಲ್ಲಿ ಪಾಲ್ಗೊಂಡರೆ, ಅದನ್ನು ಗೌರವಿಸುತ್ತೇನೆ. ಆದರೆ, ವಿದೇಶಿ ಪ್ರಜೆಗಳು ಭಾಗವಹಿಸೋದು ಕಳವಳಕಾರಿ ವಿಷಯ ಎಂದಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಿದೇಶಿ ಶಕ್ತಿಗಳ ಬೆಂಬಲದೊಂದಿಗೆ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ನನಗೆ ಕಳವಳವಿದೆ ಎಂದು ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಸಂಭವಿಸಿದ ಜೀವಹಾನಿಯ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಚಿರಾಗ್, ಕೋಲ್ಕತ್ತಾದಲ್ಲಿದ್ದ ತಮ್ಮ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಮೂಲಕ 'ಸಂವೇದನೆ' ತೋರಿದ ಅಮಿತ್ ಶಾ ಅವರನ್ನು ಅವರು ಶ್ಲಾಘಿಸಿದರು. ಮತ್ತು ರಾಹುಲ್ ಗಾಂಧಿಯವರನ್ನು ಟೀಕಿಸಿದ್ದಾರೆ.
ಇದು ಆದ್ಯತೆಗಳಲ್ಲಿನ ವ್ಯತ್ಯಾಸವನ್ನು ತೋರಿಸುತ್ತದೆ. ಒಂದು ಕಡೆ, ದುರಂತವೊಂದರ ಬಗ್ಗೆ ಸಂವೇದನಾಶೀಲರಾಗಿರುವ ನಮ್ಮ ಗೃಹ ಸಚಿವರಿದ್ದಾರೆ. ಇನ್ನೊಂದು ಕಡೆ, ರಾಜಕೀಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಭಾವಿಸುವ ವಿರೋಧ ಪಕ್ಷವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಖಾನ್, ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್ ಅವರ ಸೋದರಳಿಯ. ಅಮೆರಿಕದಲ್ಲಿ ಜನಿಸಿದ್ದು, ಅಲ್ಲಿನ ಪೌರತ್ವವನ್ನು ಹೊಂದಿದ್ದಾರೆ. ಭಾರತದಲ್ಲಿ ಬೆಳೆದಿರುವ ಅವರು ಮತ್ತು ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಾಲಿವುಡ್ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮುಂಬೈನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವೇ ದಿನಗಳಲ್ಲಿ ನಟನಿಗೆ ನೋಟಿಸ್ ಜಾರಿ ಮಾಡಲಾಗಿದೆ (ಏಜೆನ್ಸೀಸ್).