ನಿತೀಶ್ ಶ್ರೇಷ್ಠ ನಾಯಕ ಅನ್ನೋದ್ರಲ್ಲಿ ಎರಡನೇ ಮಾತಿಲ್ಲ, ಆದ್ರೆ....ಪಲ್ಟು ರಾಮ್​ ಬಗ್ಗೆ ಮೆಚ್ಚುಗೆಯ ಜೊತೆ ಚುಚ್ಚು ಮಾತಾಡಿದ ಪಿಕೆ! | Prashant Kishor

ಪಟನಾ: ಜನ ಸುರಾಜ್ ಪಕ್ಷದ ಸ್ಥಾಪಕ ಹಾಗೂ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಬಿಹಾರ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗುವಂತಹ ಹೇಳಿಕೆ ನೀಡಿದ್ದಾರೆ.
ಪಲ್ಟು ರಾಮ್​ ಬಗ್ಗೆ ಮೆಚ್ಚುಗೆಯ ಜೊತೆ ಚುಚ್ಚು ಮಾತಾಡಿದ ಪಿಕೆ!
ಪಲ್ಟು ರಾಮ್​ ಬಗ್ಗೆ ಮೆಚ್ಚುಗೆಯ ಜೊತೆ ಚುಚ್ಚು ಮಾತಾಡಿದ ಪಿಕೆ!
Published on: 

ಪಟನಾ: ಜನ ಸುರಾಜ್ ಪಕ್ಷದ ಸ್ಥಾಪಕ ಹಾಗೂ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಬಿಹಾರ ರಾಜಕಾರಣದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಯಾಗುವಂತಹ ಹೇಳಿಕೆ ನೀಡಿದ್ದಾರೆ. ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಅವರನ್ನು ಬಿಹಾರದ ಸಾರ್ವಕಾಲಿಕ 10 ಅತ್ಯುತ್ತಮ ರಾಜಕೀಯ ನಾಯಕರಲ್ಲಿ ಒಬ್ಬರು ಎಂದು ಬಣ್ಣಿಸಿರುವ ಪ್ರಶಾಂತ್, ಆದರೆ ಅವರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತಮ್ಮ ಟೀಕೆಯನ್ನು ಮುಂದುವರೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್​ ಕಿಶೋರ್​, ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಿದ್ದು, ನಿತೀಶ್ ವಿವೇಕಯುತ ರಾಜಕಾರಣಿಗಳಲ್ಲಿ ಒಬ್ಬರು, ರಾಜ್ಯದ ಟಾಪ್​ 10 ರಾಜಕೀಯ ನಾಯಕರಲ್ಲಿ ಅವರ ಹೆಸರೂ ಖಂಡಿತ ಇರುತ್ತದೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಈ ಹಿಂದೆ ತಾವು ನಿತೀಶ್ ಕುಮಾರ್ ಅವರನ್ನು ವಿರೋಧಿಸಿದ್ದೇಕೆ ಎನ್ನುವುದನ್ನು ಸಹ ಬಿಚ್ಚಿಟ್ಟಿರುವ ಪಿಕೆ, ಅವರ ಮಾನಸಿಕ ಆರೋಗ್ಯ ಸರಿಯಿಲ್ಲದಿದ್ದರೂ ಅವರನ್ನು ಬಲವಂತವಾಗಿ ಅಧಿಕಾರದ ಗದ್ದುಗೆಯಲ್ಲಿ ಕೂರಿಸಲಾಗಿತ್ತು ಮತ್ತು ಸರ್ಕಾರದ ಅಧಿಕಾರವನ್ನು ಬೇರೆ ಶಕ್ತಿಗಳು ಹಿಂಬಾಲಕರಿಂದ ನಡೆಸುತ್ತಿವೆ ಎಂಬ ಕಾರಣಕ್ಕೇ ನಾನು ವಿರೋಧಿಸಿದ್ದೆ ಎಂದು ಆರೋಪಿಸಿದ್ದಾರೆ. ಹಳೆಯ ಸಂಗತಿಗಳನ್ನು ಸ್ಮರಿಸಿದ ಪ್ರಶಾಂತ್, ರಾಜ್ಯದಲ್ಲಿ ವ್ಯವಸ್ಥೆಯನ್ನು ಸುಧಾರಿಸಲು ಪ್ರಾಮಾಣಿಕವಾಗಿ ಯತ್ನಿಸಿದ ನಾಯಕನಾಗಿ ನಿತೀಶ್ ಕುಮಾರ್ ಯಾವತ್ತಿಗೂ ನೆನಪಿನಲ್ಲಿ ಉಳಿಯಲಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಇದನ್ನೂ ಓದಿ:ರಾವಣನ ಪೋಸ್ಟರ್​​ನಲ್ಲಿ ರಾಹುಲ್, ಅಖಿಲೇಶ್!...ಆ ಹತ್ತು ತಲೆಗಳಲ್ಲಿ ಇರುವ ವಿದೇಶಿಗರು ಯಾರು ಗೊತ್ತಾ...? | Anti-India Ravana Poster

ಅನಂತ್ ಸಿಂಗ್ ಕೊಲೆ ಆರೋಪಕ್ಕೆ ಪಿಕೆ ಹೇಳಿದ್ದೇನು..?

ಮೊಕಾಮಾ ಕ್ಷೇತ್ರದ ಜೆಡಿಯು ಶಾಸಕ ಅನಂತ್ ಕುಮಾರ್ ಸಿಂಗ್ ಅವರ ವಿವಾದಾತ್ಮಕ ಹೇಳಿಕೆಯ ಬಗ್ಗೆಯೂ ಮಾತನಾಡಿರುವ ಪ್ರಶಾಂತ್​, ಈ ವಿವಾದವನ್ನು ಜೆಡಿಯು ಮತ್ತು ಆರ್​ಜೆಡಿ ಪಕ್ಷದವರೇ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದರು. ಅನಂತ್ ಸಿಂಗ್ ಉಲ್ಲೇಖಿಸಿರುವ ಒಂಬತ್ತು ಕೊಲೆಗಳು ತಮ್ಮದೇ ಕುಟುಂಬದ ಸದಸ್ಯರ ಮೇಲಿನ ದಾಳಿಯಾಗಿದ್ದು, ಆರ್ಜೆಡಿ ಅಧಿಕಾರದಲ್ಲಿದ್ದಾಗ ನಿತೀಶ್ ಅವರ ಒಡನಾಟದಿಂದಾಗಿ ಈ ಘಟನೆಗಳು ನಡೆದಿವೆ ಎಂದು ಅನಂತ್ ಸಿಂಗ್ ಹಿಂದೆ ಹೇಳಿಕೆ ನೀಡಿ ನಂತರ ಅದನ್ನು ಹಿಂಪಡೆದಿದ್ದರು. ಈ ಕುರಿತು ಮಾತನಾಡಿದ ಕಿಶೋರ್, ಈ ಬಗ್ಗೆ ಉಭಯ ಪಕ್ಷಗಳು ತನಿಖೆ ನಡೆಸಲು ಬಯಸಿದರೆ ಆದೇಶಿಸಲಿ, ಆದರೆ ಈ ವಿಷಯದಲ್ಲಿ ಜನ ಸುರಾಜ್ ಪಕ್ಷಕ್ಕೆ ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ವೈಶಾಲಿ ದೋಣಿ ದುರಂತದ ಬಗ್ಗೆ ಆಕ್ರೋಶ!

ಇದೇ ವೇಳೆ, ಕಳೆದ ವಾರ ಬಿಹಾರದ ವೈಶಾಲಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ಭೀಕರ ದೋಣಿ ದುರಂತದಲ್ಲಿ 13 ಮಕ್ಕಳು ಸಾವನ್ನಪ್ಪಿದ ಘಟನೆಯನ್ನು ಪ್ರಶಾಂತ್ ಕಿಶೋರ್ ತೀವ್ರವಾಗಿ ಖಂಡಿಸಿದ್ದು, ಹಾಜಿಪುರದಿಂದ ಸುಮಾರು 70 ಕಿ.ಮೀ ದೂರದಲ್ಲಿ ನಡೆದ ಈ ದುರಂತದ ಸ್ಥಳಕ್ಕೆ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಭೇಟಿ ನೀಡದಿರುವುದನ್ನು ಅವರು ಕಟುವಾಗಿ ಟೀಕಿಸಿದ್ದಾರೆ.

ಇದು ಅತ್ಯಂತ ದೊಡ್ಡ ದುರಂತ. ಯಾವುದೇ ಅಭಿವೃದ್ಧಿ ಹೊಂದಿದ ದೇಶದಲ್ಲಿ ಇಂತಹ ಅನಾಹುತ ನಡೆದರೆ ಅಲ್ಲಿನ ಸರ್ಕಾರವೇ ಪತನಗೊಳ್ಳುತ್ತಿತ್ತು. ಆದರೆ, ದುರಂತ ಸಂಭವಿಸಿದ ಗ್ರಾಮವು ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅಲ್ಲಿಗೆ ಭೇಟಿ ನೀಡಲು ಮುಂದಾಗದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಕಿಶೋರ್ ವಾಗ್ದಾಳಿ ನಡೆಸಿದರು.

ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಮತ್ತು ಸಹಾಯದ ಅಗತ್ಯವಿದೆ ಎಂದು ತಿಳಿಸಿರುವ ಅವರು, ದಸರಾ ಹಬ್ಬದ ದಿನವಾದ ಅಕ್ಟೋಬರ್ 20 ರಂದು ತಾವೇ ಖುದ್ದಾಗಿ ಆ ಗ್ರಾಮಕ್ಕೆ ಭೇಟಿ ನೀಡಿ, ಇಡೀ ದಿನ ದುಃಖಿತ ಕುಟುಂಬಗಳೊಂದಿಗೆ ಕಳೆದು ಅವರಿಗೆ ಧೈರ್ಯ ತುಂಬುವುದಾಗಿ ತಿಳಿಸಿದ್ದಾರೆ(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net