ಅಹ್ಮದಾಬಾದ್: ಗುಜರಾತ್ನ ಅಹ್ಮದಾಬಾದ್ನಲ್ಲಿ 20 ರೂಪಾಯಿ ಲಂಚ ಪಡೆದ ಆರೋಪದಲ್ಲಿ ಕಾನ್ಸ್ಟೇಬಲ್ ಒಬ್ಬರು ಸತತ 30 ವರ್ಷಗಳ ಕಾನೂನು ಹೋರಾಟದಿಂದ ಆರೋಪ ಮುಕ್ತರಾದ ಬಳಿಕ ಮಾರನೇ ದಿನವೇ ವಿಧಿವಶರಾಗಿದ್ದಾರೆ ಎಂದು ಶನಿವಾರ(ಫೆ. 07) ವರದಿಯಾಗಿದೆ.
ಬಾಬುಭಾಯಿ ಪ್ರಜಾಪತಿ ಆರೋಪ ಮುಕ್ತರಾದ ಬಳಿಕ ನಿಧನರಾದ ಕಾನ್ಸ್ಟೇಬಲ್. ಅಹಮದಾಬಾದ್‌ನ ವೆಜಲ್‌ಪುರದಲ್ಲಿ ಕಾನ್‌ಸ್ಟೆಬಲ್ ಆಗಿದ್ದ ಅವರ ವಿರುದ್ಧ 1996ರಲ್ಲಿ ಕೇವಲ 20 ರೂ. ಲಂಚ ಪಡೆದ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಮುಂದೆ 1997ರಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿ 2002ರ ಹೊತ್ತಿದೆ ಔಪಚಾರಿಕವಾಗಿ ಆರೋಪಗಳನ್ನು ಹೋರಿಸಲಾಗಿತ್ತು. 2003ರಲ್ಲಿ ಸಾಕ್ಷಿಗಳ ವಿಚಾರಣೆ ನಡೆದು 2004ರಲ್ಲಿ ಸೆಷನ್ಸ್ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿತ್ತು. ಬಳಿಕ ಅವರ ಸಮವಸ್ತ್ರದ ಮೇಲಿನ ಭ್ರಷ್ಟಾಚಾರದ ಕಲೆಯಿಂದ ಗೌರವ ಕಳೆದುಹೋಗಿ, ಬಡ್ತಿಗಳು, ಸವಲತ್ತುಗಳು ಸಿಗಲಿಲ್ಲ. ಮುಂದೆ ಕೋರ್ಟ್ ಅಲೆಯುವುದಾಗಿತ್ತು.
2004ರಲ್ಲಿ ಸೆಷನ್ಸ್ನಲ್ಲಿ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ವಕೀಲ ನಿತಿನ್ ಗಾಂಧಿ ಅವರ ಮೂಲಕ ಗುಜರಾತ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಕಾನ್ಸ್ಟೇಬಲ್ ಬಾಬುಭಾಯಿ ಪ್ರಜಾಪತಿ, ಸಾಕ್ಷಿಗಳ ಸಾಕ್ಷ್ಯಗಳಲ್ಲಿನ ಸ್ಪಷ್ಟವಾದ ವಿರೋಧಾಭಾಸಗಳು ಮತ್ತು ಕಾರ್ಯವಿಧಾನದ ಲೋಪಗಳನ್ನು ನಿರ್ಲಕ್ಷಿಸಲಾಗಿದೆ ಎಂಬ ಅರ್ಜಿಯ ವಾದವನ್ನು ಹೈಕೋರ್ಟ್ ಒಪ್ಪಿಕೊಂಡಿತು.
ಪ್ರಕರಣ ಆರಂಭವಾಗಿ ಸತತ ಮೂವತ್ತು ವರ್ಷಗಳ ಬಳಿಕ ಇತ್ತೀಚೆಗೆ 2026 ಫೆ. 04ರಂದು ಅಂತಿಮ ತೀರ್ಪು ನೀಡಿದ ಗುಜರಾತ್ ಹೈಕೋರ್ಟ್, ಪ್ರಾಸಿಕ್ಯೂಷನ್ ಆರೋಪವನ್ನು ಅನುಮಾನಾತೀತವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಬಾಬುಭಾಯಿ ಪ್ರಜಾಪ್ರತಿಯವರನ್ನು ಖುಲಾಸೆಗೊಳಿಸಿದೆ.
ತೀರ್ಪಿನಿಂದ ಖುಷಿಯಾಗಿದ್ದ ಬಾಬುಭಾಯಿ ಪ್ರಜಾಪತಿ, ವಕೀಲ ನಿತಿನ್ ಗಾಂಧಿಯವರ ಕಚೇರಿ ತಲುಪಿ, ಸರ್, ನನ್ನ ಜೀವನದ ಕಲೆಯನ್ನು ತೆಗೆದುಹಾಕಲಾಗಿದೆ. ಈಗ ದೇವರು ನನ್ನನ್ನು ತನ್ನ ಬಳಿಗೆ ಕರೆದರೆ ಉತ್ತಮ ಎಂದು ಸಂತೋಷ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಬಳಿಕ ಮಾರನೇ ದಿನ ವಕೀಲ ನಿತಿನ್ ಗಾಂಧಿ ದಾಖಲೆಗಳನ್ನು ಹಸ್ತಾಂತರಿಸಲು ಕರೆ ಮಾಡಿದಾಗ ಪ್ರಜಾಪ್ರತಿ ಫೋನ್ ಎತ್ತದೇ ಅವರು ಮನೆಯವರು ಕರೆ ಸ್ವೀಕರಿಸಿ ಅವರು ನೈಸರ್ಗಿಕವಾಗಿಯೇ ಅವರು ಮನೆಯಲ್ಲಿಯೇ ನಿಧನರಾಗಿದ್ದಾರೆ ಎಂಬುದನ್ನು ತಿಳಿಸಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).