ಕೋಲ್ಕತ್ತಾ: ಅತ್ಯಾಚಾರ ಮತ್ತು ಸುಲಿಗೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶಾಸಕ ಪರೇಶ್ ರಾಮ್ ದಾಸ್ ಅವರನ್ನು ಪೊಲೀಸರು ಸೋಮವಾರ(ನ. 09) ಸಂಜೆ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ 24 ಪರಗಣ ಜಿಲ್ಲೆಯ ಕ್ಯಾನಿಂಗ್ ಪಶ್ಚಿಮ ಕ್ಷೇತ್ರದ ಶಾಸಕರಾಗಿರುವ ಪರೇಶ್ ರಾಮ್ ದಾಸ್ ಅವರು ಸುಮಾರು 17 ದಿನಗಳಿಂದ ತಲೆ ಮರೆಸಿಕೊಂಡಿದ್ದರು ಎನ್ನಲಾಗಿದೆ. ಇಂದು ಕೋಲ್ಕತ್ತಾದಿಂದ ಮುಂಬೈಗೆ ಪರಾರಿಯಾಗುವಾಗ ಬರುಯಿಪುರ ಉಪವಿಭಾಗದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.
2023ರ ಪಂಚಾಯತ್ ಚುನಾವಣೆಯ ಸಮಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಶಾಸಕ ದಾಸ್ ಈ ಹಿಂದೆ ಸಿಐಡಿ ಮುಂದೆ ಹಾಜರಾಗಿದ್ದರು. ಆ ವೇಳೆ ಅಧಿಕಾರಿಗಳ ವಿಚಾರಣೆಯ ಸಮಯದಲ್ಲಿ ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ. ಅದಕ್ಕೆ ಕಳೆದ ಅಕ್ಟೋಬರ್ನಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ.
ಈ ಹಿನ್ನೆಲೆ ಪೊಲೀಸ್ ತಂಡಗಳು ಕ್ಯಾನಿಂಗ್ನಲ್ಲಿರುವ ಅವರ ನಿವಾಸದಲ್ಲಿ ಶೋಧ ನಡೆಸಿದ್ದವು. ಈ ಸಂದರ್ಭದಲ್ಲಿ ನಾಲ್ವರು ಟಿಎಂಸಿ ನಾಯಕರನ್ನು ಬಂಧಿಸಲಾಯಿತು. ಆದರೆ ಶಾಸಕ ದಾಸ್ ಅವರ ಸ್ಥಳದಿಂದ ನಾಪತ್ತೆಯಾಗಿದ್ದರು. ಕೊನೆಗೆ, ಇಂದು ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ (ಏಜೆನ್ಸೀಸ್).