ಪ್ರಧಾನಿ ಮೋದಿ ಮತ್ತು ಅಜಯ್ ರಾವ್
ಲಕ್ನೋ: ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಹೇಳಿಕೆ ಮತ್ತು ಕಾನೂನು ಸುವ್ಯವಸ್ಥೆ ಉಲ್ಲಂಘನೆ ಆರೋಪದ ಮೇಲೆ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ, ಮಾಜಿ ಕಾರ್ಯದರ್ಶಿ ಬ್ರಿಜ್‌ರಾಜ್ ಅಹಿರ್ವಾರ್ ಸೇರಿ ಪಕ್ಷದ 35 ಬೆಂಬಲಿಗರ ವಿರುದ್ಧ ಎಫ್‌ಐಆರ್(FIR) ದಾಖಲಾಗಿದೆ ಎಂದು ವರದಿಯಾಗಿದೆ.
ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಸಾಮಾಜಿಕ-ರಾಜಕೀಯ ಕಾರ್ಯಕರ್ತ ನೀರಜ್ ರಾವತ್ ನೀಡಿದ ದೂರಿನನ್ವಯ ಮಹೋಬಾದ ಕೊಟ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಎಫ್‌ಐಆರ್ ಪ್ರಕಾರ, ಮೇ 22 ರಂದು ಸಮದ್ ನಗರ ಪ್ರದೇಶದ ರಾಜ್‌ಕುಮಾರ್ ಅಹಿರ್ವಾರ್ ಅವರ ನಿವಾಸದಲ್ಲಿ ಪೂರ್ವ ಆಡಳಿತಾತ್ಮಕ ಅನುಮತಿಯಿಲ್ಲದೆ ಪಕ್ಷದ ಸಭೆಯನ್ನು ಆಯೋಜಿಸಲಾಗಿತ್ತು. ಅಜಯ್ ರೈ 15-16 ವಾಹನಗಳ ಬೆಂಗಾವಲು ಪಡೆ ಮತ್ತು ಸುಮಾರು 25-30 ಬೆಂಬಲಿಗರೊಂದಿಗೆ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾರ್ವಜನಿಕ ರಸ್ತೆಯಲ್ಲಿ ವಾಹನಗಳನ್ನು ಅಸ್ತವ್ಯಸ್ತವಾಗಿ ನಿಲ್ಲಿಸಲಾಗಿದ್ದು, ಸಂಚಾರಕ್ಕೆ ಅಡಚಣೆ ಮತ್ತು ನಿವಾಸಿಗಳಿಗೆ ಅನಾನುಕೂಲತೆಯನ್ನುಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮದಲ್ಲಿ ಅಜಯ್ ರೈ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಮತ್ತು ನಿಂದನೀಯ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ನೀಡಿದ ಹೇಳಿಕೆಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದ ಸಮಯದಲ್ಲಿ ನೀಡಿದ ಹೇಳಿಕೆಗಳು ಜಾತಿ ಆಧಾರಿತ ವೈಷಮ್ಯವನ್ನು ಪ್ರಚೋದಿಸಬಹುದು. ಮತ್ತು ಕೋಮು ಸಾಮರಸ್ಯವನ್ನು ಕದಡಬಹುದು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಹೋಬಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಂದನಾ ಸಿಂಗ್, ಯುಪಿ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಜಯ್ ರೈ, ಮಹೋಬಾದ ಮಾಜಿ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಬ್ರಿಜ್‌ರಾಜ್ ಅಹಿರ್ವಾರ್ ಮತ್ತು 25-30 ಅಪರಿಚಿತ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಪರಿಶೀಲನೆ ಮತ್ತು ದೂರುದಾರರು ಸಲ್ಲಿಸಿದ ವೀಡಿಯೊ ಸಾಕ್ಷ್ಯಗಳನ್ನು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ (ಏಜೆನ್ಸೀಸ್).