ಲಖನೌ: ದೇವಸ್ಥಾನದ ಮೇಲೆ ಹಿಡಿತ ಸಾಧಿಸಲು ವ್ಯಕ್ತಿಯೊಬ್ಬ, ಅದನ್ನು ನಿರ್ವಹಣೆ ಮಾಡುತ್ತಿದ್ದ ಇಬ್ಬರು ಸಾಧುಗಳನ್ನು ಮಲಗಿದ್ದಾಗ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಶುಕ್ರವಾರ(ಅ. 02) ವರದಿಯಾಗಿದೆ.
ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯ ಸುಧಾ ಗ್ರಾಮದಲ್ಲಿ ಅ. 01ರಂದು ಈ ಘಟನೆ ನಡೆದಿದೆ. ಬಾಬಾ ಗೋಪಾಲ್ ದಾಸ್ ಮತ್ತು ಬಾಬಾ ಬಿಹಾರಿ ದಾಸ್ ಎಂಬ ಇಬ್ಬರು ಸಾಧುಗಳು ಮೃತಪಟ್ಟವರು. ಗ್ರಾಮದಲ್ಲಿರುವ ಪ್ರಮುಖ ದೇವಸ್ಥಾನದಲ್ಲಿ ವಾಸಿಸುತ್ತಾ ಅದನ್ನು ನಿರ್ವಹಣೆ ಮಾಡುತ್ತಿದ್ದರು.
ಗುರುವಾರ ಬೆಳಗ್ಗೆ ಸ್ಥಳೀಯರು ದೇವಾಲಯಕ್ಕೆ ಬಂದಾಗ ಘಟನೆಗೆ ಬೆಳಕಿಗೆ ಬಂದಿದ್ದು, ದೇವಾಲಯದ ಆವರಣದಲ್ಲಿ ಇಬ್ಬರು ವೃದ್ಧ ಸಾಧುಗಳ ಭಾಗಶಃ ಸುಟ್ಟುಹೋದ ದೇಹಗಳನ್ನು ನೋಡಿ ಆಘಾತಕ್ಕೊಳಗಾಗಿದ್ದಾರೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಅಂತಿಮವಾಗಿ 35 ವರ್ಷದ ಸುಮಿತ್ ಸಿಂಗ್ ಅವರನ್ನು ಆರೋಪಿ ಎಂದು ಗುರುತಿಸಿ ಬಂಧಿಸಿದ್ದಾರೆ. ಮತ್ತು ಆರೋಪಿಯನ್ನು ವಿಚಾರಣೆ ನಡೆಸಿದಾಗ ದೇವಾಲಯದ ಮೇಲೆ ಪ್ರಾಬಲ್ಯ ಸಾಧಿಸಲು ಮತ್ತು ಅಲ್ಲಿ ವಾಸಿಸಲು ಇಬ್ಬರು ಸಂತರನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ (ಏಜೆನ್ಸೀಸ್).